ಬಾಳೆಯ ಹಣ್ಣಿನ ಔಷಧಿ ಗುಣಗಳು

Share this with your friends...

“ಬಾಳೆಹಣ್ಣು” ಎನ್ನುವುದು ಒಂದು ಸುಪ್ರಸಿದ್ಧವಾದ ಹಣ್ಣು. ದೈನಂದಿನ ಹಲವಾರು ಸಮಸ್ಯೆಗಳಿಗೆ ಇದು ಪರಿಹಾರವನ್ನು ಒದಗಿಸುತ್ತದೆ. ಸ್ವಾದಿಷ್ಟಕರವಾದ ಬಾಳೆಹಣ್ಣನ್ನು ನಮ್ಮಲ್ಲಿ ಹಲವರು ದಿನನಿತ್ಯ ಬಳಸುತ್ತಾರೆ. ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ನಮ್ಮ ದೇಹದ ಶಕ್ತಿಯನ್ನು ವೃದ್ಧಿಸಲು ಮತ್ತು ದೈಹಿಕ ಸದೃಢತೆಗೆ ಬಾಳೆಹಣ್ಣು ಬಹಳ ಪ್ರಯೋಜನಕಾರಿ. ಇದು ಹಲವಾರು ಪೋಷಕಾಂಶಗಳನ್ನು ಹೊಂದಿರುವುದರಿಂದ ಹಲವಾರು ಆರೋಗ್ಯ ಸಮಸ್ಯೆಯನ್ನು ಪರಿಹರಿಸುತ್ತದೆ. ಪೊಟ್ಯಾಶಿಯಂ, ವಿಟಮಿನ್ ಎ, ಬಿ, ಸಿ ಮತ್ತು ವಿಟಮಿನ್ ಬಿ6, ಮೆಗ್ನೀಷಿಯಂ ಮುಂತಾದ ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಬೊಜ್ಜನ್ನು ಕರಗಿಸುವುದು, ಕರುಳ ಆರೋಗ್ಯ ಕಾಪಾಡುವುದು, ನರಮಂಡಲವನ್ನು ಬಲಪಡಿಸುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತದೆ. ಬಾಳೆಯ ಹಣ್ಣು ಎಷ್ಟು ಹಣ್ಣಾಗುತ್ತದೆಯೋ ಅದರಲ್ಲಿನ ಪೋಷಕಾಂಶಗಳ ಮಟ್ಟವು ಅಷ್ಟೇ ಹೆಚ್ಚಾಗುತ್ತದೆ. ಈ ಎಲ್ಲ ಪೋಷಕಾಂಶಗಳು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಹೃದಯಾಘಾತ ಸಮಸ್ಯೆ ಪರಿಹಾರಕ್ಕೆ ಬಾಳೆಹಣ್ಣು ಸಹಾಯಕ

ದಿನನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇಂದಿನ ದಿನಗಳಲ್ಲಿ ಹೃದಯಘಾತ ಎನ್ನುವುದು ಬಹಳಷ್ಟು ಸಾವಿಗೆ ಕಾರಣವಾಗಿದೆ. ಹೃದಯ ಆಘಾತದಿಂದ ತಪ್ಪಿಸಿಕೊಳ್ಳುವುದು ಒಂದು ಹೋರಾಟವೇ ಸರಿ. ಚಿಕ್ಕ ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಹೃದಯದಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವನ್ನು ವೈದ್ಯರು, ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ. ಪುರಾತನ ತತ್ವಗಳಲ್ಲಿ ಬಾಳೆಹಣ್ಣಿಗೆ ವಿಶೇಷ ಸ್ಥಾನವಿದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಮ್ಯಾಗ್ನಿಷಿಯಂ ನಂತಹ ಸತ್ವಗಳು ಅದರೊಂದಿಗೆ ಹಲವಾರು ವಿಟಮಿನ್ ಗಳು ಸೇರಿ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಇವುಗಳು ರಕ್ತದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯಘಾತವನ್ನು ತಪ್ಪಿಸುತ್ತವೆ.

ಅಜೀರ್ಣತೆ ಮತ್ತು ಮಲಬದ್ಧತೆ ನಿವಾರಣೆಗೆ ಬಾಳೆ ಹಣ್ಣು

ಅಜೀರ್ಣದ ಸಮಸ್ಯೆಗಂತೂ ಬಾಳೆಹಣ್ಣು ರಾಮಬಾಣ. ಚಿಕ್ಕ ವಯಸ್ಸಿನಲ್ಲಿ ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಮ್ಮ ಹಿರಿಯರಲ್ಲಿ ವ್ಯಕ್ತಪಡಿಸಿದಾಗ ಅವರು ಕೊಡುವ ಒಂದೇ ಒಂದು ಪರಿಹಾರ ಬಾಳೆಹಣ್ಣು. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಎಲೆಕ್ಟ್ರೋಲೈಟ್ ಗಳು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತವೆ. ಅದರೊಂದಿಗೆ ಮಲಬದ್ಧತೆಯನ್ನು ಸಹ ತಡೆಯುತ್ತವೆ.

ಬಾಳೆ ಹಣ್ಣಿನಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ

ಬಾಳೆಹಣ್ಣು ತಿನ್ನುವುದರಿಂದ ಜ್ಞಾಪಕ ಶಕ್ತಿಯು ಸಹ ಹೆಚ್ಚುತ್ತದೆ. ದೈನಂದಿನ ಒತ್ತಡಗಳಲ್ಲಿ ಜನರು ಚಿಕ್ಕ ಪುಟ್ಟ ಸಂಗತಿಗಳನ್ನು ಮರೆಯುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ಬಾಳೆಹಣ್ಣು ಸಹಾಯಕ. ಬಾಳೆಹಣ್ಣಿನಲ್ಲಿರುವ ಬಿ ಸಿಕ್ಸ್ ವಿಟಮಿನ್ ಮತ್ತು ಮೆಗ್ನೀಷಿಯಂ ಸ್ನಾಯುಗಳನ್ನು ಸಡಿಲಗೊಳಿಸುವ ಮೂಲಕ ಒಳ್ಳೆಯ ನಿದ್ರೆಗೂ ಸಹಾಯ ಮಾಡುತ್ತದೆ.

ಹೊಟ್ಟೆಯ ಆರೋಗ್ಯಕ್ಕೆ ಬಾಳೆಹಣ್ಣು ಬಹಳ ಸಹಾಯಕಾರಿ

ಇಂದಿನ ಯುಗದಲ್ಲಿ ಆಹಾರ ಪದ್ಧತಿಯ ಏರುಪೇರಿನಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಹೊಟ್ಟೆ ನೋವು ,ಹೊಟ್ಟೆಯ ಹುಣ್ಣು, ಅಜೀರ್ಣ, ವಾಂತಿ ಹೀಗೆ ಅದೆಷ್ಟೋ ಸಮಸ್ಯೆಗಳಿಗೆ ಬಲಿಯಾಗುತ್ತೇವೆ. ನಮ್ಮ ದೇಹಕ್ಕೆ ಅರಗಿಸಲಾದ ಆಹಾರವನ್ನು ತೆಗೆದುಕೊಂಡಾಗ ಅಥವಾ ನಮ್ಮ ದೇಹಕ್ಕೆ ಕುತ್ತು ತರುವ ವಿಷಪೂರಿತ ಆಹಾರವನ್ನು ತೆಗೆದುಕೊಂಡಾಗ ಇಂತಹ ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತವೆ. ಹೀಗೆ ಹೊಟ್ಟೆಯ ಸಮಸ್ಯೆಯನ್ನು ಕಡಿಮೆ ಮಾಡಲು ಹಿಂದಿನಿಂದಲೂ ನಂಬಿರುವ ಔಷದವೆಂದರೆ ಅದು ಬಾಳೆಯಹಣ್ಣು. ನೈಸರ್ಗಿಕವಾಗಿ ಔಷಧಿ ಗುಣವನ್ನು ಹೊಂದಿರುವ ಬಾಳೆಹಣ್ಣು ನಮ್ಮ ಹೊಟ್ಟೆಯು ಶಾಂತವಾಗಿರಲು ಸಹಾಯ ಮಾಡುತ್ತದೆ . ಇದರಲ್ಲಿರುವ ಪೋಷಕಾಂಶಗಳು ಹೊಟ್ಟೆಯ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುವುದರ ಮೂಲಕ ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಹೈಡ್ರಾಲಿಕ್ ಆಮ್ಲದ ಬಿಡುಗಡೆಯಿಂದ ಬಹಳಷ್ಟು ಹಾನಿ ಉಂಟಾಗುತ್ತದೆ. ಹೊಟ್ಟೆಯಲ್ಲಿ ಹುಣ್ಣಾಗುತ್ತದೆ. ಇದನ್ನು ಕಡಿಮೆ ಮಾಡಲು ಬಾಳೆಹಣ್ಣು ಸಹಾಯಕಾರಿ. ಕೆಲವೊಮ್ಮೆ ಬ್ಯಾಕ್ಟೀರಿಯಾದ ಸೋಂಕು ಕೂಡ ತಗುಲಿ, ಹೊಟ್ಟೆಯ ನೋವು ಮತ್ತು ಬಾವು ಉಂಟಾಗುತ್ತದೆ. ಇಂತಹ ನೋವನ್ನು ನಿವಾರಿಸುವಲ್ಲಿಯೂ ಬಾಳೆಹಣ್ಣು ಸಹಾಯಕಾರಿ. ಒಬ್ಬ ಮನುಷ್ಯನಿಗೆ ಅವನ ದೇಹದ ಆರೋಗ್ಯಕ್ಕಿಂತ ಮಿಗಿಲಾದದ್ದು ಏನೂ ಇಲ್ಲ. ಹೀಗಾಗಿ ದಿನನಿತ್ಯ ಬಾಳೆಹಣ್ಣನ್ನು ತಿನ್ನುವುದು ನಮ್ಮ ಜೀವನದ ಅರ್ಧ ಆರೋಗ್ಯದ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಇಂದಿನ ದಿನಗಳಲ್ಲಿ ಕೆಲಸದ ಒತ್ತಡ ಎಲ್ಲರನ್ನೂ ಕಾಡುತ್ತಲೇ ಇದೆ. ಹೀಗಿರುವಾಗ ದಿನವಿಡೀ ಕೆಲಸ ಮಾಡಿ ದಣಿದು ಒತ್ತಡವನ್ನು ಅನುಭವಿಸುವಾಗ ಒಂದು ಬಾಳೆಹಣ್ಣನ್ನು ಸೇವಿಸಿದರೆ ಇದು ಒತ್ತಡ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಬಾಳೆಹಣ್ಣಿನ ಸೇವನೆ ಮಹಿಳೆಯರಿಗೆ ಅತ್ಯುತ್ತಮವಾದದ್ದು. ಏಕೆಂದರೆ ಋತುಸ್ರಾವ, ಗರ್ಭಧಾರಣೆ ಎಂದು ಹಲವಾರು ದೈಹಿಕ ಶ್ರಮ ಮತ್ತು ನೋವುಗಳನ್ನು ಮಹಿಳೆಯರು ಅನುಭವಿಸುತ್ತಿರುತ್ತಾರೆ. ಇಂತಹ ನೋವು ನಿವಾರಣೆಯಾಗಬೇಕಾದರೆ ಬಾಳೆಹಣ್ಣು ಸಹಾಯಕ್ಕೆ ಬರುತ್ತದೆ. ಪ್ರತಿ ನಿತ್ಯ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಹೊಟ್ಟೆ, ಬೆನ್ನು ಭಾಗ ಇತ್ಯಾದಿಗಳ ನೋವನ್ನು ನಿವಾರಿಸುತ್ತದೆ.

ಅಶಕ್ತತೆ ತಡೆಯುತ್ತದೆ ಈ ಬಾಳೆ ಹಣ್ಣು

ಅಶಕ್ತತೆ ಎನ್ನುವುದು ಹಲವರನ್ನು ಕಾಡುವ ಸಮಸ್ಯೆಯಾಗಿದೆ. ದೇಹದಲ್ಲಿನ ಗ್ಲುಕೋಸ್ ಮಟ್ಟವು ಕಡಿಮೆಯಾಗುವುದೇ ಅಶಕ್ತತೆಗೆ ಒಂದು ಕಾರಣ .ಹೀಗಿರುವಾಗ ಗ್ಲುಕೋಸ್ ಮಟ್ಟ ಕಡಿಮೆಯಾಗಿ ದೇಹಕ್ಕೆ ದೈನಂದಿನ ಚಟುವಟಿಕೆ ಮಾಡಲು ತ್ರಾಣವಿರದಂತೆ ಮಾಡುತ್ತದೆ .ಬಾಳೆಹಣ್ಣು ನಮ್ಮ ದೇಹದಲ್ಲಿ ಶಕ್ತಿಯ ವರ್ಧಕವಾಗಿ ಕೆಲಸ ಮಾಡುತ್ತದೆ .ಬಾಳೆಹಣ್ಣಿನಲ್ಲಿ ಗ್ಲುಕೋಸ್ ನ ಪ್ರಮಾಣವು ಹೆಚ್ಚಾಗಿರುವುದರಿಂದ ದೈನಂದಿನ ಚಟುವಟಿಕೆಗಳಿಂದ ದೇಹಕ್ಕೆ ಸುಸ್ತಾಗದಂತೆ ನೋಡಿಕೊಳ್ಳುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹೆಚ್ಚಿನ ದೈಹಿಕ ಶ್ರಮಪಡುವವರು ದಿನ ಬಾಳೆಹಣ್ಣಿನ ಸೇವನೆ ಮಾಡುವುದರಿಂದ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಪೊಟ್ಯಾಶಿಯಂ ನ ಅಂಶ ಸಮೃದ್ಧವಾಗಿರುವ ಬಾಳೆಹಣ್ಣು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿವಾರಣೆ ಮಾಡುವಲ್ಲಿ ಅತ್ಯಂತ ಸಹಾಯಕಾರಿ.

ರಕ್ತಹೀನತೆ ತಡೆಯಲು ಬಾಳೆಹಣ್ಣು ಸಹಕಾರಿ

ಇನ್ನೊಂದು ಮುಖ್ಯವಾದ ಸಮಸ್ಯೆ ಎಂದರೆ ರಕ್ತ ಹೀನತೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯಿಂದ ಮತ್ತು ಕಬ್ಬಿಣ ಅಂಶ ದ ಕೊರತೆಯಿಂದ ರಕ್ತ ಹೀನತೆ ಕಾಡುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಿಮೋಗ್ಲೋಬಿನ್ ಅನ್ನು ಹೆಚ್ಚಾಗಿ ವೃದ್ದಿಸುವ ಆಹಾರ ಸೇವನೆ ಬಹಳ ಮುಖ್ಯ. ಬಾಳೆಹಣ್ಣಿನಲ್ಲಿ ಕಬ್ಬಿಣ ಅಂಶ ದ ಪ್ರಮಾಣವು ಹೆಚ್ಚಾಗಿರುವುದರಿಂದ ದೇಹದಲ್ಲಿನ ರಕ್ತಹೀನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಈ ರಕ್ತ ಹೀನತೆಯ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲಿ ಕಾಡುವುದರಿಂದ ಮುಖ್ಯವಾಗಿ ಮಹಿಳೆಯರು ದಿನನಿತ್ಯ ಬಾಳೆಹಣ್ಣನ್ನು ಸೇವಿಸುವುದು ಅತ್ಯುತ್ತಮ.

ತಲೆನೋವಿನ ಉಪಶಮನಕ್ಕೆ ಬಾಳೆಹಣ್ಣು

ಇತ್ತೀಚಿಗೆ ತಲೆನೋವಿನ ಕಿರಿಕಿರಿ ಎಲ್ಲರನ್ನೂ ಕಾಡುತ್ತದೆ. ಒಂದಲ್ಲ, ಎರಡಲ್ಲ ಹಲವಾರು ಬಗೆಯ ತಲೆನೋವುಗಳಿಂದ ಪ್ರತಿಯೊಬ್ಬರು ಬೇಸತ್ತು ಹೋಗಿರುತ್ತಾರೆ. ಕೆಲಸದ ಒತ್ತಡದಿಂದ ತಲೆನೋವು, ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಡಿಹೈಡ್ರೇಶನ್ನ ತಲೆನೋವು ,ಇದಕ್ಕಿಂತ ಮುಖ್ಯವಾಗಿರುವುದು ಮೈಗ್ರೇನ್. ಒಮ್ಮೆ ಈ ಸಮಸ್ಯೆ ಬಂದರೆ ಇದನ್ನು ತೊಲಗಿಸುವುದು ಬಹಳ ಕಷ್ಟ. ಕೆಲವರಿಗಂತೂ ಒಮ್ಮೆ ತಲೆನೋವು ಬಂದರೆ ವಾರಗಟ್ಟಲೆ ಅದರ ಕಿರಿಕಿರಿ ಹೋಗುವುದೇ ಇಲ್ಲ. ಇದರಿಂದ ಆಹಾರ ಸೇವನೆಯಲ್ಲಿ ಸೇರಿದಂತೆ ದಿನನಿತ್ಯದ ಎಲ್ಲಾ ಚಟುವಟಿಕೆಗಳಲ್ಲಿಯೂ ಅಡೆತಡೆ ಬಂದಂತಾಗುತ್ತದೆ. ಈಗಿನದು ಹೈಟೆಕ್ ಯುಗ. ಯಾರೊಬ್ಬರನ್ನು ನೋಡಿದರೂ ಬಂದು ಮೊಬೈಲ್ ನಲ್ಲಿ ಇಲ್ಲ ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ. ಹೀಗೆ ಹೆಚ್ಚು ಹೊತ್ತು ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮುಂದೆ ಕೂತಿರುವುದರಿಂದ ನಮ್ಮ ಕಣ್ಣಿಗೆ ಹಾನಿ. ಅದರೊಂದಿಗೆ ತಲೆಯ ನೋವು ಸಹ ಬೆಂಬಿಡದೆ ಕಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಬಾಳೆಹಣ್ಣು. ಬಾಳೆಹಣ್ಣಿನಲ್ಲಿರುವ ಮೆಗ್ನೀಷಿಯಂ ನ ಅಂಶವು ಮೈಗ್ರೇನ್ ಅಂತಹ ಹಠಮಾರಿ ತಲೆನೋವನ್ನು ತೊಲಗಿಸುವಲ್ಲಿ ಸಹಾಯ ಮಾಡುತ್ತದೆ.

ಗರ್ಭಿಣಿಯರಿಗೆ ಉಪಯುಕ್ತ ಈ ಬಾಳೆ ಹಣ್ಣು

ಗರ್ಭಿಣಿಯರಿಗಂತು ಬಾಳೆಹಣ್ಣು ಬಹಳ ಉಪಯೋಗಕಾರಿ. ಗರ್ಭವಸ್ಥೆಯಲ್ಲಿ ಹೆಣ್ಣು ಮಕ್ಕಳು ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದರಿಂದ ಕೇವಲ ಅವರ ಆರೋಗ್ಯ ವೃದ್ಧಿಸುವುದಲ್ಲದೆ ಹೊಟ್ಟೆಯೊಳಗಿನ ಮಗುವಿನ ಆರೋಗ್ಯ ವೃದ್ಧಿಸುತ್ತದೆ. ಪೋಲಿಕ್ ಆಮ್ಲ ಎಂಬುದು ಬಾಳೆಹಣ್ಣಿನಲ್ಲಿರುವ ಆಮ್ಲ. ಇದು ಮಗುವಿಗೆ ಯಾವುದೇ ದೋಷವಿದ್ದರೂ ಅದನ್ನು ಮಗು ತಾಯಿಯ ಗರ್ಭದಲ್ಲಿರುವಾಗಲೇ ಸರಿಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಗರ್ಭಿಣಿ ಮಹಿಳೆಯರು ದಿನನಿತ್ಯ ಬಾಳೆಹಣ್ಣು ಸೇವಿಸುವುದು ಅತ್ಯುತ್ತಮವಾಗಿದೆ.

ಮೆದುಳಿನ ಆರೋಗ್ಯಕ್ಕೆ ಬಾಳೆಹಣ್ಣು

ದೈಹಿಕ ಪರಿಶ್ರಮಕಿಂತ ಮೆದುಳಿನ ಪರಿಶ್ರಮಕ್ಕೆ ಇಂದಿನ ಕಾಲದಲ್ಲಿ ಬೆಲೆ ಜಾಸ್ತಿ. ಕಡುಬಿಸಲಿನಲ್ಲಿ ನಿಂತು ದುಡಿಯುವ ಮನುಷ್ಯನಿಗಿಂತ ತನ್ನ ಬುದ್ಧಿ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ದುಡಿಯುವ ಮನುಷ್ಯನಿಗೆ ಆದಾಯ ಜಾಸ್ತಿ .ಇದರಿಂದ ಮೆದುಳಿನ ಆರೋಗ್ಯ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ದೈಹಿಕ ಆರೋಗ್ಯಕ್ಕೆ ಮಾನಸಿಕ ಆರೋಗ್ಯವೇ ಮೂಲ. ಮಾನಸಿಕವಾಗಿ ನಾವು ನೆಮ್ಮದಿಯಿಂದ ಇದ್ದರೆ ದೇಹವು ಯಾವ ತೊಂದರೆಗಳು ಇಲ್ಲದೆ ಆರೋಗ್ಯವಾಗಿರುತ್ತದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮಾನಸಿಕ ಆರೋಗ್ಯವನ್ನು ಮೊದಲು ಕಾಪಾಡಿಕೊಳ್ಳಬೇಕು. ಆದರೆ ಇಂದಿನ ವಯಸ್ಕರಲ್ಲಿ ಮೆದುಳಿನ ಕಾರ್ಯವು ದುರ್ಬಲಗೊಳ್ಳುತ್ತಿದೆ. ಇದಕ್ಕೆ ಕಾರಣ ವಿಟಮಿನ್ ಬಿ6 ಕೊರತೆ. ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ6 ಇರುವುದರಿಂದ ಇದು ಮಾನಸಿಕ ದುರ್ಬಲತೆಯನ್ನ ನಿವಾರಿಸಿ, ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ. ಹೀಗಾಗಿ ಮೆದುಳಿನ ಆರೋಗ್ಯಕ್ಕೆ ಬಾಳೆಹಣ್ಣಿನ ಉಪಯೋಗ ತುಂಬಾ ಒಳ್ಳೆಯದು.

ಮೂಳೆಯ ಆರೋಗ್ಯಕ್ಕೆ ಸಹಕಾರಿ ಬಾಳೆಹಣ್ಣು

ಅಷ್ಟೇ ಅಲ್ಲದೆ ಬಾಳೆಯಹಣ್ಣು ಮೂಳೆಯ ಆರೋಗ್ಯಕ್ಕೂ ಬಹಳ ಒಳ್ಳೆಯದು. ದಿನನಿತ್ಯ ಬಾಳೆಹಣ್ಣನ್ನು ತಿನ್ನುವುದರಿಂದ ಮೂಳೆಯ ಅನಾರೋಗ್ಯ ನಿವಾರಣೆ ಆಗುತ್ತದೆ. ಏಕೆಂದರೆ ಮೂಳೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುವುದು ಕ್ಯಾಲ್ಸಿಯಂ ಅಂಶ. ಇದು ಮೂಳೆಗಳ ಬೆಳವಣಿಗೆಗೆ ಮಾತ್ರವಲ್ಲದೆ ಮೂಳೆಗಳ ಶಕ್ತಿ ವೃದ್ಧಿಗೆ ಮತ್ತು ದೀರ್ಘಕಾಲಾವದಿಗೆ ಮೂಳೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂತಹ ಕ್ಯಾಲ್ಸಿಯಂ ಗುಣವನ್ನು ಬಾಳೆಹಣ್ಣು ಹೊಂದಿದೆ. ಅಷ್ಟೇ ಅಲ್ಲದೆ ಮೆಗ್ನೀಷಿಯಂ ಅಂತಹ ಅಂಶವನ್ನು ಹೊಂದಿರುವ ಬಾಳೆಹಣ್ಣಿನಿಂದ ಮೂಳೆಯ ಆರೋಗ್ಯವನ್ನು ಸುಧಾರಿಸಬಹುದು.

ಡಯಾಬಿಟಿಸ್ ನಿಯಂತ್ರಣಕ್ಕೆ ಬಾಳೆಹಣ್ಣು

ಡಯಾಬಿಟಿಸ್ ನಂತಹ ಅಪಾಯಕಾರಿ ಸಮಸ್ಯೆಯ ಪರಿಹಾರದಲ್ಲೂ ಬಾಳೆಹಣ್ಣು ಸಹಾಯ ಮಾಡುತ್ತದೆ. ಬಾಳೆಹಣ್ಣು ಸಾಂಪ್ರದಾಯಿಕ ಔಷಧಿ ಗುಣಗಳನ್ನೂ, ಫೈಬರ್ ನ ಅಂಶವನ್ನೂ ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿರುವ ನಾರಿನಂಶವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ, ಡಯಾಬಿಟಿಸ್ ನ್ನು ನಿಯಂತ್ರಣಕ್ಕೆ ತರುತ್ತದೆ. ಕೇವಲ ಬಾಳೆಹಣ್ಣು ಮಾತ್ರವಲ್ಲದೆ ಅದರ ಜೊತೆಗೆ ಕಾಂಡ ಮತ್ತು ಅದರ ಹೂಗಳು ಸಹ ಮಧುಮೇಹದ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಸಹಾಯ ಮಾಡುತ್ತವೆ.

ಅತಿಸಾರ ಸಮಸ್ಯೆಗೆ ಬಾಳೆಹಣ್ಣಿನಿಂದ ಪರಿಹಾರ

ದೈನಂದಿನ ಆಹಾರ ಪದ್ಧತಿಯಲ್ಲಿನ ಬದಲಾವಣೆ ಮತ್ತು ಇನ್ನಿತರ ರಾಸಾಯನಿಕಗಳ ಆಹಾರದ ಸೇವನೆಯಿಂದ ಅತಿಸಾರ ಎಂದರೆ ಭೇದಿಯ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಳೆಹಣ್ಣು ಸಹಾಯಕವಾಗಬಹುದು. ಪೆಟ್ಟಿನ್ ಎನ್ನುವುದು ಬಾಳೆಹಣ್ಣಿನಲ್ಲಿ ಕಂಡುಬರುವ ನಾರಿನಂಶ. ಈ ನಾರಿನ ಅಂಶವು ಅತಿಸಾರ ಸಮಸ್ಯೆಯನ್ನು ತಡೆದು ಕರುಳಿನ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಆದ್ದರಿಂದ ದಿನನಿತ್ಯ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಅತಿಸಾರದಂತಹ ಸಮಸ್ಯೆಯನ್ನು ಹೋಗಲಾಡಿಸಬಹುದು.

ಕಣ್ಣುಗಳ ಆರೋಗ್ಯಕ್ಕೂ ಬಾಳೆಹಣ್ಣು

ಬಾಳೆಹಣ್ಣು ಕಣ್ಣುಗಳ ಆರೋಗ್ಯಕ್ಕೂ ಬಹಳ ಒಳ್ಳೆಯದು. ಕಣ್ಣಿನಲ್ಲಿ ರೆಟಿನಾ ಎಂಬ ಭಾಗದಲ್ಲಿ ವರ್ಣದ್ರವ್ಯದ ಕೊರತೆಯಿಂದ ಕಣ್ಣುಗಳು ಬಲಹೀನವಾಗುತ್ತವೆ. ಇದನ್ನು ಸರಿಪಡಿಸಲು ಹಲವಾರು ವಿಟಮಿನ್ ಮತ್ತು ಇನ್ನಿತರ ಪೋಷಕಾಂಶಗಳ ಅಗತ್ಯವಿದೆ. ಬಾಳೆಹಣ್ಣಿನಲ್ಲಿ ಇರುವ ಕ್ಯಾರೋಟಿನೈಡ್, ವಿಟಮಿನ್ ಎ ಮುಂತಾದ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇದರ ಮೂಲಕ ಕಣ್ಣಿನ ದೃಷ್ಟಿ ಹೀನವಾಗಿ ಕಣ್ಣು ಕುರುಡಾಗುವುದನ್ನು ತಪ್ಪಿಸುತ್ತದೆ.

ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಔಷಧಿ ಗುಣಗಳಿವೆ 

ಆಂಟಿ ಮೈಕ್ರೋಬಿಯಲ್ ಗುಣವನ್ನು ಹೊಂದಿರುವ ಸಿಪ್ಪೆಯನ್ನು ಹೊಂದಿರುವ ಬಾಳೆಹಣ್ಣು, ಸೊಳ್ಳೆಯ ಕಡಿತದ ಪರಿಣಾಮವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ .ಬಾಳೆಹಣ್ಣಿನ ಸಿಪ್ಪೆಯನ್ನು ಸೊಳ್ಳೆ ಕಡಿದ ಜಾಗಕ್ಕೆ ಉಜ್ಜುವುದರಿಂದ ನೋವನ್ನು ನಿವಾರಿಸಬಹುದಾಗಿದೆ. ಇಷ್ಟೇ ಅಲ್ಲದೆ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವಂತಹ ಬಾಳೆಹಣ್ಣಿನ ಸಿಪ್ಪೆಯು ಮೊಡವೆಯನ್ನು ನಿವಾರಿಸುವುದರಲ್ಲಿಯೂ ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯನ್ನು ಮೊಡವೆಯಾದ ಭಾಗಕ್ಕೆ ಎರಡು ನಿಮಿಷಗಳ ಕಾಲ ಉಜ್ಜುತ್ತಾ ನಂತರ ಮುಖವನ್ನು ತೊಳೆದುಕೊಂಡರೆ ಕ್ರಮೇಣ ಮೊಡವೆಯು ಕಡಿಮೆಯಾಗುತ್ತದೆ.

ಬಾಳೆಹಣ್ಣು ಕೂದಲು ಉದುರುವಿಕೆ ತಡೆಯಲು ಕೂಡ ಉಪಯುಕ್ತ

ಕೂದಲು ಬೆಳವಣಿಗೆಯಲ್ಲೂ ಸಹ ಬಾಳೆಹಣ್ಣಿನ ಕೊಡುಗೆ ಬಹಳಷ್ಟು ಇದೆ. ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರಲು ಶುರುವಾಗುತ್ತದೆ. ಅಷ್ಟೇ ಅಲ್ಲದೆ ಇಂದಿನ ಯುಗದ ಒತ್ತಡದ ಜೀವನ ಶೈಲಿಯಿಂದಲೂ ಕೂದಲು ಉದುರುವಿಕೆ ಸಾಮಾನ್ಯವಾಗಿ ಹೋಗಿದೆ. ವಿಜ್ಞಾನಿಗಳು ಹೇಳುವಂತೆ ಬಾಳೆಹಣ್ಣಿನ ರಸವನ್ನು ನೆತ್ತಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು, ನಂತರ ತಲೆ ಕೂದಲನ್ನು ತೊಳೆದರೆ ಕ್ರಮೇಣ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ . ಅಥವಾ ಬಾಳೆಹಣ್ಣು ಮತ್ತು ಅಲೋವೆರಾದ ಪೇಸ್ಟನ್ನು ತಯಾರಿಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ನಿಲ್ಲಿಸಬಹುದು.


Share this with your friends...

Leave a Comment

Your email address will not be published. Required fields are marked *