ಲವಂಗದ ಔಷಧಿ ಗುಣಗಳು

Share this with your friends...

ಲವಂಗವು ಭಾರತದ ಪ್ರತಿಯೊಂದು ಅಡಿಗೆಯ ಮನೆಯಲ್ಲಿಯೂ ಸಿಗುವ ಒಂದು ಮಸಾಲಾ ಪದಾರ್ಥವಾಗಿದೆ. ಲವಂಗಗಳು ಇಂಡೋನೇಷಿಯ ದ್ವೀಪದಲ್ಲಿ ಮೂಲತಃ ಕಂಡುಬಂದಿದ್ದಾಗಿವೆ. ಇವುಗಳು ಮರದಲ್ಲಿ ಬಿಡುವ ಹೂವಿನ ಮೊಗ್ಗುಗಳಾಗಿವೆ ಮತ್ತು ಇದರ ವೈಜ್ಞಾನಿಕ ಹೆಸರು ಸಿಜಿಜಿಎಂ ಅರುಮ್ಯಾಟಿಕಮ್. ವಿಜ್ಞಾನದಲ್ಲಿ ಅರೋಮಾ ಎಂದರೆ ವಾಸನೆ ಎಂದರ್ಥ. ಇದರ ಹೆಸರೇ ಸೂಚಿಸುವಂತೆ ಸುವಾಸನಾಭರಿತವಾಗಿರುವ ಮಸಾಲ ಪದಾರ್ಥವೇ ಲವಂಗ. ಇದರ ಸುಗಂಧ ಮತ್ತು ರುಚಿಯಿಂದ ಯಾವ ಅಡುಗೆಯನ್ನಾದರೂ ರುಚಿಕರವನ್ನಾಗಿಸುವ ಸಾಮರ್ಥ್ಯ ಲವಂಗಕ್ಕಿದೆ. ಭಾರತದಲ್ಲಿ ತಯಾರಿಸಲ್ಪಡುವ ಅತಿ ಹೆಚ್ಚು ಆಹಾರ ಪದಾರ್ಥಗಳ ಮುಖ್ಯ ಭಾಗಗಳಲ್ಲೊಂದು ಈ ಲವಂಗ. ಅಡುಗೆಗೆ ರುಚಿಯನ್ನು ನೀಡುವ ಲವಂಗ ಆರೋಗ್ಯಕ್ಕೂ ಸಹ ಅಷ್ಟೇ ಸಹಾಯಕಾರಿಯಾಗಿದೆ. ಭಾರತದಲ್ಲಿ ಹಿಂದಿನಿಂದಲೂ ನಡೆದು ಬಂದ ಪುರಾತನ ಔಷಧ ಪದ್ಧತಿಗಳಲ್ಲಿ ಬಳಸುವ ವಸ್ತುಗಳಲ್ಲಿ ಲವಂಗವೂ ಒಂದು. ಲವಂಗವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕೆಲವೊಂದು ಆಂಟಿ ಮೈಕ್ರೋಬಿಯಲ್ ಅಂಶಗಳು ಇರುವುದರಿಂದ ಬಾಯಿಯ ಸಮಸ್ಯೆಗಳು ಮತ್ತು ತಲೆನೋವಿನ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗುತ್ತದೆ.

ಜೀರ್ಣ ಕ್ರಿಯೆಯ ಸಮಸ್ಯೆಗೆ ಲವಂಗದ ಉಪಯೋಗ

ನಮ್ಮಲ್ಲಿ ಹಲವರಿಗೆ ಜೀರ್ಣಕ್ರಿಯೆ ಸಮಸ್ಯೆ ಬೆಂಬಿಡದೆ ಕಾಡುತ್ತದೆ. ಸರಿಯಾದ ಪೋಷಕಾಂಶಗಳಿರುವ ಆಹಾರ ತೆಗೆದುಕೊಳ್ಳದೆ ಇರುವುದು ಅಜೀರ್ಣಕ್ಕೆ ಒಂದು ಕಾರಣವಾಗಿದೆ. ಇಂತಹ ಅಜೀರ್ಣವನ್ನು ಹೋಗಲಾಡಿಸಲು ಸಹಾಯ ಮಾಡುವುದೇ ಲವಂಗ. ನಾವು ತೆಗೆದುಕೊಂಡ ಆಹಾರದಲ್ಲಿರುವ ಪೋಷಕಾಂಶಗಳನ್ನು ನಮ್ಮ ದೇಹವು ಹೀರಿಕೊಳ್ಳಬೇಕೆಂದರೆ ಜೀರ್ಣಕ್ರಿಯೆಯು ಸುಲಲಿತವಾಗಿ ಆಗುವುದು ಅಗತ್ಯ. ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಯಾವ ಅಡೆತಡೆಗಳಿಲ್ಲದೆ ನಡೆಸಲು ದೇಹಕ್ಕೆ ಶಕ್ತಿಯು ಅಗತ್ಯ. ಈ ಶಕ್ತಿಯು ದೊರಕಬೇಕಾದರೆ ನಾವು ಸೇವಿಸಿದ ಆಹಾರವು ನಮ್ಮ ದೇಹದೊಳಗೆ ಸೇರಿ, ಸಣ್ಣ ಸಣ್ಣ ಅಣುಗಳಾಗಿ ವಿಭಜನೆ ಹೊಂದಬೇಕು. ಹೀಗೆ ವಿಭಜನೆ ಹೊಂದದಿದ್ದರೆ ನಾವು ಸೇವಿಸಿದ ಆಹಾರದಲ್ಲಿರುವ ಪೋಷಕಾಂಶಗಳನ್ನು ನಮ್ಮ ದೇಹ ಹೀರಿಕೊಳ್ಳುವುದು ಅಸಾಧ್ಯವಾಗುತ್ತದೆ, ಮತ್ತು ಮಾನವನ ದೇಹದ ಬೆಳವಣಿಗೆಯು ಕುಂಟಿತಗೊಳ್ಳುತ್ತದೆ. ಈ ಎಲ್ಲಾ ಕ್ರಿಯೆಗಳು ಸರಾಗವಾಗಿ ಆಗಬೇಕೆಂದರೆ ಜೀರ್ಣಕ್ರಿಯೆಯು ಸಲೀಸಾಗಿ ಆಗುವುದು ಅವಶ್ಯಕವಾಗಿದೆ. ಹೀಗೆ ಜೀರ್ಣವಾಗಲು ಜೀರ್ಣಕಾರಿ ಕಿಣ್ವಗಳ ಉತ್ಪತ್ತಿಯು ಅವಶ್ಯಕ. ದಿನಾಲು ಬೆಳಗ್ಗೆ ಒಂದರಿಂದ ಎರಡು ಲವಂಗಗಳನ್ನು ಸೇವಿಸುವುದರಿಂದ ಈ ಕಿಣ್ವಗಳ ಉತ್ಪತ್ತಿ ಹೆಚ್ಚುತ್ತದೆ. ಇದರಿಂದಾಗಿ ಜೀರ್ಣಕ್ರಿಯ ಸಮಸ್ಯೆಗಳು ಸರಿಹೊಂದುತ್ತವೆ. ಮತ್ತು ಮಲಬದ್ಧತೆ ಅಂತ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ. ಅಷ್ಟೇ ಅಲ್ಲದೆ ಲವಂಗವು ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವನ್ನು ಹೊಂದಿದೆ. ಇದು ಸಹಿತ ಜೀರ್ಣ ಕ್ರಿಯೆಯಲ್ಲಿ ಬಳಕೆಯಾಗುವ ಮುಖ್ಯ ಅಂಶ. ಇದೆಲ್ಲದರಿಂದ ಜೀರ್ಣಕ್ರಿಯೆಯನ್ನು ಸಲ್ಲಿಸಾಗಿಸಲು ಲವಂಗವು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲವಂಗ 

ಮಾಲಿನ್ಯಗೊಂಡ ಈ ಪ್ರಕೃತಿಯಲ್ಲಿ ಮನುಷ್ಯನಿಗೆ ಕಾಣುವ ಮತ್ತು ಕಾಣದ ಜೀವಿಗಳು ಹಲವಾರು. ಮನುಷ್ಯನ ಕಣ್ಣಿಗೆ ಕಾಣುವ ಜೀವಿಗಳು ಅವನನ್ನು ಆಕ್ರಮಿಸಿದರೆ ತಪ್ಪಿಸಿಕೊಳ್ಳುವುದು ಸುಲಭ. ಆದರೆ ಕಣ್ಣಿಗೆ ಕಾಣದ ಚಿಕ್ಕ ಚಿಕ್ಕ ಜೀವಿಗಳು ಆಕ್ರಮಿಸಿದಾಗ ಅದರಿಂದ ಹೊರಬರುವುದು ಅತ್ಯಂತ ಕಷ್ಟವಾಗುತ್ತದೆ. ಹೀಗೆ ನಮ್ಮ ಕಣ್ಣಿಗೆ ಕಾಣದ ವೈರಸ್ ಗಳು , ಬ್ಯಾಕ್ಟೀರಿಯಾ ಅಥವಾ ಶಿಲೀಂದ್ರಗಳಂತಹ ಸೂಕ್ಷ್ಮಜೀವಿಗಳು ನಮ್ಮ ದೇಹದೊಳಗೆ ಸೇರಿ ಕೆಲವೊಂದು ರಾಸಾಯನಿಕಗಳನ್ನು ಉತ್ಪತ್ತಿ ಮಾಡುವ ಮೂಲಕ ಹಲವಾರು ಸೋಂಕು ಮತ್ತು ರೋಗಗಳನ್ನು ತರುತ್ತವೆ. ಇದರಿಂದ ರಕ್ಷಣೆ ಹೊಂದಲು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಆಂಟಿ ಮೈಕ್ರೋಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಲವಂಗವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ಜಠರಕ್ಕೆ ಆಗುವ ಸಮಸ್ಯೆಗಳನ್ನು ದೂರ ತಳ್ಳಿ ಜಠರವನ್ನು ಸಹ ರಕ್ಷಿಸುತ್ತದೆ.

ಮಧುಮೇಹ ನಿಯಂತ್ರಣದಲ್ಲಿ ಲವಂಗ 

ಲವಂಗದ ಇನ್ನೊಂದು ಔಷಧಿಯ ಗುಣವೆಂದರೆ ಅದು ಮಧುಮೇಹದ ನಿಯಂತ್ರಣ. ಆಧುನಿಕ ಆಹಾರ ಪದ್ಧತಿಯಿಂದ ಮನುಷ್ಯನ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಆಹಾರದಲ್ಲಿರುವ ಹೆಚ್ಚಿನ ಸಕ್ಕರೆಯ ಅಂಶ ಮತ್ತು ನಂಜು ಅಂಶಗಳು, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಆದರೆ ಲವಂಗವು ನಂಜು ನಿರೋಧಕವಾಗಿದ್ದು ,ಇನ್ಸುಲಿನ ಉತ್ಪಾದನೆಯನ್ನು ಜಾಸ್ತಿ ಮಾಡುವುದರ ಮೂಲಕ ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ. ಲವಂಗ ಮತ್ತು ಶುಂಠಿಯನ್ನು ಒಟ್ಟಾಗಿ ಸೇವಿಸುವುದರ ಮೂಲಕ ಮಧುಮೇಹವನ್ನು ಹೋಗಲಾಡಿಸಬಹುದಾಗಿದೆ.

ಹಲ್ಲು ನೋವು ನಿವಾರಣೆ ಗೆ ಲವಂಗ

ಬಾಯಿ ಮತ್ತು ದವಡೆಯ ನೋವುಗಳು ನಿಮ್ಮನ್ನು ಕಾಡುತ್ತಿದ್ದರೆ ,ದವಡೆಯಲ್ಲಿ ರಕ್ತಸ್ರಾಗವು ಆಗುತ್ತಿದ್ದರೆ ಈ ತೊಂದರೆಗೆ ಪರಿಹಾರ ಲವಂಗ. ಅನಾದಿಕಾಲದಿಂದ ಹಲ್ಲು ನೋವಿನ ಸಮಸ್ಯೆಯಲ್ಲಿ ಅಥವಾ ದವಡೆಯ ಯಾವುದೇ ಸಮಸ್ಯೆಯಲ್ಲಿ ಲವಂಗವನ್ನು ಹೆಚ್ಚಾಗಿ ಬಳಸುತ್ತಾರೆ. ಒಂದುವೇಳೆ ಮನೆಯಲ್ಲಿ ಯಾರಿಗಾದರೂ ಹಲ್ಲು ನೋವು ಕಾಣಿಸಿಕೊಂಡರೆ ಲವಂಗವನ್ನು ಉಪಯೋಗಿಸಲು ನಮ್ಮ ಹಿರಿಯರು ಹೇಳಿದ್ದುಂಟು. ಅವರು ಹೇಳುವುದು ಅವರ ಅನುಭವದ ಕಾರಣದಿಂದ. ಹಾಗೆಂದು ಅವರ ಮಾತನ್ನು ನಿರ್ಲಕ್ಷಿಸಬೇಕೆಂದೇನೂ ಅಲ್ಲ. ಏಕೆಂದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಲವಂಗದಲ್ಲಿ ಯೂಜೆನಾಲ್ ಎಂಬ ರಾಸಾಯನಿಕವು ಕಂಡು ಬರುತ್ತದೆ. ಈ ರಾಸಾಯನಿಕವು ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯಕ. ಬ್ಯಾಕ್ಟೀರಿಯಾದ ಸೋಂಕಿನಿಂದ ಆದಂತಹ ದವಡೆಯ ನೋವು ಅಥವಾ ದವಡೆಯ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಈ ರಾಸಾಯನಿಕವು ಸಹಾಯ ಮಾಡುತ್ತದೆ. ಹೀಗಾಗಿ ಇದನ್ನು ದಂತ ವೈದ್ಯಶಾಸ್ತ್ರದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇಂತಹ ಸಮಸ್ಯೆ ಇರುವ ಜಾಗದಲ್ಲಿ ಇಡೀ ಲವಂಗವನ್ನು ಹತ್ತಾರು ನಿಮಿಷಗಳ ಕಾಲ ಇರಿಸಿ ನಂತರ ತೆಗೆಯುವುದರಿಂದ ಈ ನೋವು ಮತ್ತು ಬಾವು ಕಡಿಮೆಯಾಗುತ್ತದೆ.

ಲವಂಗವು ತಲೆನೋವನ್ನು ಕಡಿಮೆ ಮಾಡುತ್ತದೆ

ಇಂದಿನ ಯುಗದಲ್ಲಿ ತಲೆನೋವು ಸರ್ವೇಸಾಮಾನ್ಯವಾಗಿದೆ. ಒಂದಲ್ಲ ,ಎರಡಲ್ಲ ಹಲವಾರು ರೀತಿಯ ತಲೆನೋವುಗಳನ್ನು ನಾವು ಕಾಣಬಹುದು. ತಲೆನೋವಿನ ವಿಧ ಯಾವುದೇ ಇರಲಿ, ಆದರೆ ಅದಕ್ಕೆ ಪರಿಹಾರ ಇಲ್ಲಿದೆ. ಲವಂಗವನ್ನು ಪುಡಿ ಮಾಡಿ , ಒಂದು ಬಟ್ಟೆಯಲ್ಲಿ ಕಟ್ಟಿ ಅದರ ವಾಸನೆಯನ್ನು ತೆಗೆದುಕೊಳ್ಳುವುದರ ಪರಿಣಾಮವಾಗಿ ತಲೆನೋವು ನಿವಾರಣೆ ಆಗುತ್ತದೆ.

ಲವಂಗವು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ

ಲವಂಗವು ಅತಿಯಾದ ತೂಕವನ್ನು ಕರಗಿಸುವ ಮೂಲಕ ಮಾನವನ ಜೀವನವನ್ನು ಆರೋಗ್ಯವಾಗಿಡಲು ಲವಂಗವು ಸಹಾಯ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆಯ ಮಟ್ಟ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ನಮ್ಮ ಮೂಳೆಗಳು ಮತ್ತು ಕೀಲುಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಗಳ ಉತ್ತೇಜನಯಲ್ಲಿ ಲವಂಗವು ಸಹಾಯ ಮಾಡುತ್ತದೆ .ಹೀಗೆ ಚಯಾಪಚಯ ಕ್ರಿಯೆಗಳನ್ನು ಸರಳಗೊಳಿಸಿ ತೂಕವನ್ನು ಕಳೆದುಕೊಳ್ಳಲು ಲವಂಗ ದೊಂದಿಗೆ ದಾಲ್ಚಿನ್ನಿ, ಮೆಣಸು ಮತ್ತು ಜೀರಿಗೆಯನ್ನು ಮಿಶ್ರಣ ಮಾಡಿ ಸೇವಿಸುವುದು ಒಂದು ಒಳ್ಳೆಯ ಉಪಾಯವಾಗಿದೆ. ಇದರಿಂದ ಅನಾವಶ್ಯಕ ಬೊಜ್ಜು ನಿವಾರಣೆಯಾಗಿ ದೇಹದ ಆರೋಗ್ಯವು ವೃದ್ಧಿಸುತ್ತದೆ.

ಕ್ಯಾನ್ಸರ್ ನ್ನು ಹತೋಟಿಯಲ್ಲಿಡಲು ಲವಂಗ ಸಹಾಯಕ

ಕ್ಯಾನ್ಸರ್ ಇಂದಿನ ಕಾಲದಲ್ಲಿ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ. ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುವ ಈ ರೋಗವು, ಜನರು ಇದರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯಾವ ಅವಕಾಶವನ್ನು ನೀಡುವುದಿಲ್ಲ. ಕ್ಯಾನ್ಸರ್ ಗೆ ತುತ್ತಾದ ಹಲವಾರು ಜನರು ಬದುಕುಳಿದ ದಾಖಲೆಗಳೇ ಇಲ್ಲ. ಕಿಮೋಥೆರಪಿ ಅಂತಹ ಹಲವಾರು ಔಷಧೂಪಚಾರಗಳನ್ನು ಮಾಡಿದರೂ, ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಟಿಕಾಣೆ ಹೂಡಿದರು, ಕ್ಯಾನ್ಸರ್ ಗುಣವಾಗುವ ಸಂಭವ ಅಷ್ಟಕ್ಕಷ್ಟೇ. ಇಂತಹ ಕಾನ್ಸರ್ ಬಂದಮೇಲೆ ಅದರೊಂದಿಗೆ ಹೋರಾಡುವುದರ ಜೊತೆಗೆ ನಮ್ಮ ಆರ್ಥಿಕತೆಯಂದಿಗೂ ಹೋರಾಡಬೇಕಾಗುತ್ತದೆ. ಹೀಗಾಗಿ ಈ ಮಹಾಮಾರಿ ಬರೆದಂತೆಯೇ ತಡೆಯುವುದೇ ಲೇಸು. ಹೀಗೆ ಕ್ಯಾನ್ಸರ್ ತಡೆಯಲು ನಮಗೆ ಸಹಾಯ ಮಾಡುವುದು ಲವಂಗ. ಕಾರ್ಸಿನೊಜೆನೆಕ್ ಅಥವಾ ಕೀಮೋಪ್ರಿವೆಂಟಿವ್ ಗುಣಗಳನ್ನು ಹೊಂದಿರುವ ಯೂಜೆನಾಲ್ ಲವಂಗದಲ್ಲಿದೆ. ಹೀಗಾಗಿ ಆರಂಭಿಕ ಹಂತದ ಶ್ವಾಸಕೋಶದ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ತಡೆಯಲು ಸಹಾಯಕವಾಗಿದೆ.

ಬಾಯಿಯ ದುರ್ವಾಸನೆಗೆ ಲವಂಗದ ಉಪಯೋಗ

ಹಾಲಿಟೋಸಿಸ್ ಎಂಬುದು ಬಾಯಿಯ ದುರ್ವಾಸನೆಯ ವೈಜ್ಞಾನಿಕ ಹೆಸರು. ನಾವು ಆಹಾರವನ್ನು ಸೇವಿಸಿದಾಗ ಅದರ ಕಣಗಳು ಬಾಯಿಯಿಂದಲೇ ಜೀರ್ಣವನ್ನು ಹೊಂದಲು ಶುರುವಾಗುತ್ತವೆ. ಆ ಸಂದರ್ಭದಲ್ಲಿ ಬಾಯಲ್ಲಿ ಬ್ಯಾಕ್ಟೀರಿಯಾ ಮತ್ತು ದುರ್ವಾಸನೆಯ ಹೆಚ್ಚಳವಾಗುತ್ತದೆ. ಇದರಿಂದ ನಮ್ಮ ಬಾಯಿಯಿಂದ ದುರ್ವಾಸನೆ ಬರುವುದು ನೈಸರ್ಗಿಕವಾದ ಅಂಶವಾಗಿದೆ. ಲವಂಗಗಳು ತಮ್ಮ ಸುವಾಸನೆಗೆ ಪ್ರಸಿದ್ಧಿಯನ್ನು ಹೊಂದಿದೆ. ವಾಸನೆಯ ಮೂಲಕ ಮತ್ತು ಬ್ಯಾಕ್ಟೀರಿಯಾ ಗಳನ್ನು ತೆಗೆದುಹಾಕುವ ಮೂಲಕ ಲವಂಗ ಬಾಯಿಯ ಭಾಗವನ್ನು ಸ್ವಚ್ಛಗೊಳಿಸುತ್ತವೆ. ಇದರಿಂದ ಬಾಯಿಯಿಂದ ಬರುವ ಅಹಿತಕರ ವಾಸನೆಯೂ ದೂರವಾಗಿ ಬಾಯಿಯ ಆರೋಗ್ಯ ಮತ್ತು ಸುವಾಸನೆ ಎರಡು ವೃದ್ಧಿಯಾಗುತ್ತದೆ. ಹೀಗೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಲವಂಗದ ಎಣ್ಣೆಯನ್ನು ಬಳಸಬಹುದು.

ಒತ್ತಡ ನಿವಾರಕವಾಗಿರುವ ಲವಂಗ

ಲವಂಗದಲ್ಲಿ ಕಂಡು ಬರುವ ಯುಜೆನಾಲ್ ಒತ್ತಡವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇಂದಿನ ಜೀವನ ಶೈಲಿ ಹೆಚ್ಚು ಒತ್ತಡದಾಯಕವಾಗಿದೆ. ಇದರಿಂದ ಹೊರಬರಲು ಹಲವಾರು ಪ್ರಯತ್ನಗಳನ್ನು ಜನರು ಮಾಡುತ್ತಿರುತ್ತಾರೆ. ಮಾನಸಿಕ ಒತ್ತಡ ಹೆಚ್ಚಾಗಿ ವೈದ್ಯರಿಂದ ಚಿಕಿತ್ಸೆ ಪಡೆದು ಔಷಧೂಪಚಾರಗಳನ್ನು ಮಾಡುತ್ತಿರುವ ಜನರನ್ನು ನಾವು ಕಾಣಬಹುದು. ಈ ಮಾನಸಿಕ ಒತ್ತಡಕ್ಕೆ ಅಥವಾ ದುರ್ಬಲತೆಗೆ ಅಹಿತಕರ ಯೋಚನೆಗಳು ಮತ್ತು ದಿನನಿತ್ಯ ಜೀವನದ ಹಲವಾರು ಒತ್ತಡಗಳು ಕಾರಣವಾಗುತ್ತದೆ. ಈ ಒತ್ತಡಗಳನ್ನೆಲ್ಲ ತೊಡೆದುಹಾಕಿ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿಯೂ ಲವಂಗ ಸಹಾಯ ಮಾಡುತ್ತದೆ. ಯೋಜನಾಲ್ ಆಕ್ಸಿಡೇಟೀವ್ ಸಹಾಯದಿಂದ ಲವಂಗವು ನಮ್ಮ ಮನಸ್ಸನ್ನು ಶಾಂತವಾಗಿರಲು ಸಹಾಯ ಮಾಡುತ್ತದೆ ಮತ್ತು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ.

ಪ್ರಸಿದ್ಧ ಪೌಷ್ಟಿಕ ತಜ್ಞರಲ್ಲಿ ಒಬ್ಬರಾಗಿರುವ ಅರುಷಿ ಗಾರ್ಗ್ ಹೇಳುವ ಪ್ರಕಾರ ಲವಂಗವು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ವೃದ್ಧಿಸುತ್ತದೆ. ಯಕೃತ್ತಿನ ಯಾವುದೇ ಸಮಸ್ಯೆ ಆಗಲಿ ಅದರಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ. ಹೊಸ ಜೀವಕೋಶಗಳ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಮತ್ತು ಎಲ್ಲಾ ತರಹದ ಸೋಂಕುಗಳಿಂದ ಯಕೃತ್ತನ್ನು ದೂರವಿಡುವ ಮೂಲಕ ಅದರ ಆರೋಗ್ಯವನ್ನು ಹೆಚ್ಚಿಸುತ್ತದೆ.

ಅಷ್ಟೇ ಅಲ್ಲ ಮೂಳೆಗಳ ಆರೋಗ್ಯಕ್ಕೂ ಲವಂಗ ಬಹಳ ಒಳ್ಳೆಯದು .ಪ್ಲೇವನೈಡ್ ಮತ್ತು ಮ್ಯಾಂಗನೀಸ್ ಅಂತಹ ಅಂಶಗಳನ್ನು ಹೊಂದಿರುವ ಲವಂಗವು ಮೂಳೆಯನ್ನು ಗಟ್ಟಿಗೊಳಿಸಲು ಮತ್ತು ಅವುಗಳ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲದೆ ಹಾನಿಗೊಂಡಿರುವ ಅಂಗಾಂಶಗಳನ್ನು ಸರಿಪಡಿಸುವ ಕೆಲಸಕ್ಕೂ ಬರುತ್ತವೆ. ಈ ಮೂಲಕ ಮೂಳೆಗೆ ಸಂಬಂಧಿಸಿದ ಎಲ್ಲಾ ನೋವುಗಳನ್ನು ಪರಿಹರಿಸಿ, ಮೂಳೆ ಆರೋಗ್ಯವನ್ನು ಹೆಚ್ಚಿಸುತ್ತವೆ. ತೆಂಗಿನ ಎಣ್ಣೆಯಲ್ಲಿ ಲವಂಗವನ್ನು ಹಾಕಿ ಚೆನ್ನಾಗಿ ಕಾಯಿಸಿ, ಲವಂಗದ ಅಂಶಗಳನ್ನಲ್ಲ ಎಣ್ಣೆಯು ಹೀರಿಕೊಳ್ಳುವಂತೆ ಮಾಡಿ ಆ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ.

ಹೀಗೆ ಲವಂಗವೆನ್ನುವ ಚಿಕ್ಕ ಮೊಗ್ಗು ಇಷ್ಟೆಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ. ಸುವಾಸನೆ ಭರಿತವಾದ ಈ ಪದಾರ್ಥವು ಕೇವಲ ಆಹಾರದಲ್ಲಿ ಮಾತ್ರ ಬಳಕೆಯಾಗದೆ ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿಯೂ ಬಳಕೆ ಆಗುತ್ತದೆ. ಇದರ ಔಷಧಿ ತತ್ವಗಳು ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ನಮ್ಮ ಹಿರಿಯರು ಬಳಸುತ್ತಾ ಬಂದಿರುವ ಅದ್ಭುತ ತತ್ವಗಳು. ಅವರಿಗೆ ಆರೋಗ್ಯ ಸಮಸ್ಯೆಗಳು ಬಂದಾಗ ಅದನ್ನು ಬಳಸಿ ಅದರಿಂದ ಪರಿಹಾರವನ್ನು ಪಡೆದುಕೊಂಡ ಮೇಲೆ ಈ ಎಲ್ಲಾ ಔಷಧಿಯ ಗುಣಗಳಿರುವ ಲವಂಗವನ್ನು ಬಳಸಲು ನಮಗೆ ಉತ್ತೇಜಿಸಿದ್ದು. ಚಿಕ್ಕ ಚಿಕ್ಕ ಸಮಸ್ಯೆಗೆ ಆಸ್ಪತ್ರೆಗೆ ಓಡುವ ಬದಲಾಗಿ ಹೀಗೆ ಮನೆಯಲ್ಲೇ ಸಿಗುವ ಮನೆಮದ್ದನ್ನು ಬಳಸಿ ನಾವೇ ಪರಿಹಾರವನ್ನು ಕಂಡುಕೊಳ್ಳಬಹುದು. ಪುರಾತನ ಕಾಲದಿಂದ ಆಯುರ್ವೇದವು ಹೇಳಿರುವ ಪದಾರ್ಥಗಳನ್ನೇ ಬಳಸಿ ನಾವು ದಿನನಿತ್ಯವೂ ಆಹಾರವನ್ನು ತಯಾರಿಸುವುದು ನಿಜಕ್ಕೂ ಅದ್ಭುತವಾದ ಸಂಗತಿ. ಯಾವ ಪದಾರ್ಥಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆಯೋ ಅವುಗಳು ಪ್ರತಿಯೊಂದು ಮನೆಯಲ್ಲೂ ಸಿಗುವ ಹಾಗೆ ಮಾಡಿರುವುದು ನಮ್ಮ ಹಿರಿಯರ ಬುದ್ಧಿವಂತಿಕೆ. ದಿನನಿತ್ಯ ಸೇವಿಸುವ ಆಹಾರದ ಸರಿಯಾದ ಪ್ರಮಾಣವನ್ನು ತಿಳಿದುಕೊಂಡರೆ ಅವೇ ಮದ್ದಾಗುತ್ತವೆ. ಇದನ್ನು ನಾವು ಅರಿತುಕೊಂಡು ನಮ್ಮ ಮುಂದಿನ ಪೀಳಿಗೆಗೂ ಅರಿವು ಮೂಡಿಸುವುದು ಅತ್ಯಗತ್ಯ. ಏಕೆಂದರೆ ಪಾಶ್ಚಿಮಾತ್ಯರ ಆಂಗ್ಲ ಔಷಧಿಗಳು ಬರುವ ಮುಂಚೆಯೇ ನಮ್ಮ “ಧನ್ವಂತರಿ” ಮಹಾಶಯರು ಆಯುರ್ವೇದ ಎಂಬ ಅಮೃತವನ್ನೇ ಸೃಷ್ಟಿಸಿದ್ದಾರೆ. ಹೀಗಿರುವಾಗ ಭಾರತೀಯ ಮೂಲದ ಔಷಧಗಳನ್ನು ಬಳಸದೆ ಪಶ್ಚಿಮಾತ್ಯ ಔಷಧಗಳಿಗೆ ಮಾರುಹೋಗುವುದು ಮೂರ್ಖತನವೇ ಸರಿ .ನಮ್ಮ ಸ್ವಂತ ನೆಲದ ಔಷಧಿ ಗುಣಗಳನ್ನು ಹೊಂದಿರುವ ಹಲವಾರು ಮನೆಮದ್ದುಗಳನ್ನು ಬಳಸುವುದರ ಮೂಲಕ ನಾವು ಸಹ ನೂರು ವರ್ಷಗಳ ಕಾಲ ಆರೋಗ್ಯದಿಂದಿರಬಹುದು. ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಬದಲು ಸಾತ್ವಿಕ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬಹುದು.


Share this with your friends...

Leave a Comment

Your email address will not be published. Required fields are marked *