ಪಪ್ಪಾಯದ ಔಷಧಿ ಗುಣಗಳು
ಪಪ್ಪಾಯವು ಕೇವಲ ಸಿಹಿಯಾದ ಹಣ್ಣಲ್ಲ. ಅದು ಔಷಧಿ ಗುಣವನ್ನು ಸಹ ಹೊಂದಿದೆ. ಮಾಗಿದ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಹಣ್ಣು ಮಾತ್ರವಲ್ಲದೆ, ಅದರ ಬೀಜದಿಂದಲೂ ಹಲವಾರು ಔಷಧಿಯನ್ನು ತಯಾರಿಸುತ್ತಾರೆ. ಆಗಸ್ಟ್ ಇಂದ ಸಪ್ಟೆಂಬರ್ ತಿಂಗಳ ವರೆಗೆ ಪಪ್ಪಾಯ ಹಣ್ಣು ಹೇರಳವಾಗಿ ದೊರಕುತ್ತದೆ. ಈ ಸಮಯದಲ್ಲಿ ಇದರ ಉಪಯೋಗವೂ ಹೆಚ್ಚು. ಪಪ್ಪಾಯ ಕಾಯಿ ಮತ್ತು ಹಣ್ಣು ಎರಡರಿಂದಲೂ ನಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇದರಿಂದ ಆಗುವ ಲಾಭ ಹೆಚ್ಚು.
ಯಕೃತ್ತಿನ ಸಮಸ್ಯೆಗೆ ಪಪ್ಪಾಯ ಮನೆಮದ್ದು
ನಿಮ್ಮಲ್ಲಿ ಯಕೃತ್ ನ ಸಮಸ್ಯೆ ಕಾಡುತ್ತಿದ್ದರೆ ಪಪ್ಪಾಯ ಬೀಜವನ್ನು ಉಪಯೋಗಿಸುವುದು ಒಳ್ಳೆಯದು. ಏಕೆಂದರೆ ಪಪ್ಪಾಯ ಬೀಜದಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಪ್ಪಾಯದ ಬೀಜ ಹೊಂದಿದೆ. ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಅಥವಾ ಸೋಂಕನ್ನು ಹೋಗಲಾಡಿಸಲು ಇದು ಸಹಾಯಕಾರಿ.
ಮೊದಲಿಗೆ ಮಾಗಿದ ಪಪ್ಪಾಯ ಹಣ್ಣಿನ ಬೀಜವನ್ನು ಹಣ್ಣಿನಿಂದ ಬೇರ್ಪಡಿಸಬೇಕು. ಹೀಗೆ ಬೇರ್ಪಡಿಸಿದ ಬೀಜವನ್ನು ಮೂರು, ನಾಲ್ಕು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಬೀಜವು ಚೆನ್ನಾಗಿ ಒಣಗಿದ ನಂತರ ಅದನ್ನು ರುಬ್ಬಿ ಪುಡಿಯಾಗಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಯಾವುದೇ ಆಹಾರದ ಜೊತೆಗೂ ಸೇವಿಸಬಹುದು. ಇಲ್ಲವಾದರೆ ಪ್ರತಿನಿತ್ಯ ನಿಂಬೆಯ ರಸದಲ್ಲಿ ಬೆರೆಸಿ ಸೇವಿಸಬಹುದು. ಇದರಿಂದ ಯಕೃತ್ತು ಬಲವಾಗುತ್ತದೆ ಮತ್ತು ಸೋಂಕು ನಿವಾರಣೆ ಆಗುತ್ತದೆ.
ಪಪ್ಪಾಯ ಅಜೀರ್ಣದ ಸಮಸ್ಯೆಗೆ ಮನೆ ಮದ್ದಾಗಿದೆ
ಇತ್ತೀಚಿನ ದಿನಗಳಲ್ಲಿ ಅಜೀರ್ಣದ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಹೀಗಿರುವಾಗ ಪಪ್ಪಾಯವು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಪ್ಪಾಯ ಹಣ್ಣಿನಲ್ಲಿ ಮತ್ತು ಅದರ ಬೀಜಗಳಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಹಲವಾರು ಅಂಶಗಳು ಇರುತ್ತವೆ. ಪಪ್ಪಾಯವು ಒಳ್ಳೆಯ ಬ್ಯಾಕ್ಟೀರಿಯಾ ವಿರೋಧಿಯಾಗಿದೆ, ಬ್ಯಾಕ್ಟೀರಿಯಾ ಗೆ ಸಂಬಂಧಿಸಿದ ಯಾವುದೇ ಕಾಯಿಲೆಯನ್ನು ಸರಿಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಹೀಗಾಗಿ ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಅಥವಾ ಪಪ್ಪಾಯ ಬೀಜದ ಪುಡಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಬಹುದು. ಅಷ್ಟೇ ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸೋಂಕನ್ನು ಸಹ ನಿವಾರಿಸಬಹುದು.
ನಮ್ಮಲ್ಲಿ ಹಲವಾರು ಜನರಿಗೆ ಮೂತ್ರಪಿಂಡದ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದು ಅಥವಾ ಸೋಂಕು ಉಂಟಾಗುವುದು ಹಲವರಲ್ಲಿ ಕಂಡುಬರುತ್ತದೆ. ಇಂತಹ ಸಮಸ್ಯೆಯನ್ನು ದೂರ ಮಾಡುವುದರಲ್ಲಿ ಪಪ್ಪಾಯ ಎತ್ತಿದ ಕೈ. ದಿನನಿತ್ಯ ಪಪ್ಪಾಯದ ನಿಯಮಿತ ಸೇವನೆಯಿಂದ ಇಂತಹ ಸೋಂಕು ದೂರ ಮಾಡಬಹುದು. ಅಷ್ಟೇ ಅಲ್ಲದೆ ಮೂತ್ರಪಿಂಡದ ಕಲ್ಲನ್ನು ಹೊರ ಹಾಕುವಲ್ಲಿಯೂ ಪಪ್ಪಾಯ ಸಹಾಯ ಮಾಡುತ್ತದೆ. ಪಪ್ಪಾಯದ ಜ್ಯೂಸ್ ಅಥವಾ ಮಾಗಿದ ಹಣ್ಣನ್ನು ಹಾಗೆ ತಿನ್ನುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಪಪ್ಪಾಯ ಗಾಯವನ್ನು ಗುಣಪಡಿಸಲು ಮನೆಮದ್ದಾಗಿದೆ
ಪಪ್ಪಾಯ ಇನ್ನೊಂದು ವಿಶೇಷವಾದ ಔಷಧಿ ಗುಣವನ್ನು ಹೊಂದಿದೆ. ಅದುವೇ ಗಾಯವನ್ನು ವಾಸಿ ಮಾಡುವುದು. ಚಿಕ್ಕ ಪುಟ್ಟ ಅಪಘಾತವಾಗಿ, ಗಾಯದಿಂದ ರಕ್ತ ಸುರಿಯುವಾಗ ಈ ಔಷಧವು ಕಾರ್ಯಕ್ಕೆ ಬರುತ್ತದೆ. ಸರಿಯಾಗಿ ಮಾಗದ ಅಥವಾ ಅರೆ ಪಕ್ವವಾದ ಪಪ್ಪಾಯ ಹಣ್ಣನ್ನು ತುರಿದು, ದೇಹದ ಮೇಲೆ ಉಂಟಾದ ಗಾಯಕ್ಕೆ ಹಚ್ಚುವುದರಿಂದ ಗಾಯವು ವಾಸಿಯಾಗುತ್ತದೆ. ನಿಮ್ಮ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದರೆ ಈ ಔಷಧವು ಬಹಳ ಉಪಯೋಗಕ್ಕೆ ಬರುತ್ತದೆ. ಏಕೆಂದರೆ ಚಿಕ್ಕವರು ಹರೆಯದಲ್ಲಿ ಅಡ್ಡಾ ದಿಡ್ಡಿ ಓಡಾಡಿ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಂದರ್ಭ ಹೆಚ್ಚು. ಇಂತಹ ಸಂದರ್ಭದಲ್ಲಿ ಪಪ್ಪಾಯವನ್ನು ಉಪಯೋಗಿಸುವುದು ಒಳ್ಳೆಯದು.
ಜಂತು ಹುಳು ನಿವಾರಣೆಗೆ ಮನೆಮದ್ದಾಗಿ ಪಪ್ಪಾಯ
ಸಣ್ಣ ಮಕ್ಕಳಿಗೆ ಜಂತುಹುಳ ಉಂಟಾಗುವುದು ಸರ್ವೆ ಸಾಮಾನ್ಯ. ಕೇವಲ ಚಿಕ್ಕ ಮಕ್ಕಳಲ್ಲದೆ ದೊಡ್ಡವರಲ್ಲೂ ಸಹ ಈ ಸಮಸ್ಯೆ ಕಾಣುತ್ತದೆ. ಹೊಟ್ಟೆಯಲ್ಲಿ ಉಂಟಾದ ಜಂತು ಹುಳುವಿನಿಂದ ಹೊಟ್ಟೆ ನೋವು ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಪಪ್ಪಾಯವನ್ನು ಉಪಯೋಗಿಸುವುದು ಉತ್ತಮ. ಪಪ್ಪಾಯಿ ಕಾಯಿಯನ್ನು ತುರಿದು ಅದರ ರಸವನ್ನು ತೆಗೆಯಬೇಕು. ಒಂದು ಚಮಚ ಜೇನುತುಪ್ಪದೊಂದಿಗೆ ಪಪ್ಪಾಯಿ ಕಾಯಿಯ ರಸವನ್ನು ಬೆರೆಸಿ, ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಸೇವಿಸಬೇಕು. ಹೀಗೆ ಮಾಡಿದ ಪಾನೀಯವನ್ನು ಸೇವಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಆಗಲಿ ಅಥವಾ ದೊಡ್ಡವರಲ್ಲಾಗಲಿ ಜಂತುಹುಳುವಿನ ಸಮಸ್ಯೆಯ ನಿವಾರಣೆಯಾಗುತ್ತದೆ.
ಪಾಪ್ಪಾಯ ಅಶಕ್ತತೆಗೆ ಮನೆ ಮದ್ದಾಗಿದೆ
ಚಿಕ್ಕ ಮಕ್ಕಳಲ್ಲಿ ಅಶಕ್ತತೆ ಉಂಟಾಗುವುದನ್ನು ನಾವು ಕಾಣುತ್ತೇವೆ. ತಮ್ಮ ಹಠದಿಂದ ಒಳ್ಳೆಯ ಪೋಷಕಾಂಶವಿರುವ ಆಹಾರವನ್ನು ಮಕ್ಕಳು ತಿರಸ್ಕರಿಸುತ್ತಾರೆ. ಸರಿಯಾದ ಸಮಯಕ್ಕೆ ಊಟವನ್ನು ಮಾಡದೆ ಅಥವಾ ಊಟವು ಸರಿಯಾಗಿ ಜೀರ್ಣವಾಗದೆಯು ಅವರಲ್ಲಿ ಅಶಕ್ತತೆ ಉಂಟಾಗುತ್ತದೆ. ಇಂತಹ ಅಶಕ್ತತೆಯನ್ನು ದೂರ ಮಾಡಲು ಪಪ್ಪಾಯ ಹಣ್ಣು ಸಹಾಯ ಮಾಡುತ್ತದೆ. ಒಂದು ಲೋಟ ಹಾಲಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಪಪ್ಪಾಯ ಹಣ್ಣನ್ನು ಸೇರಿಸಿ ಕುಡಿಸುವುದರಿಂದ ಅಶಕ್ತತೆ ಮತ್ತು ದೌರ್ಬಲ್ಯಗಳು ನಿರ್ನಾಮವಾಗುತ್ತದೆ.
ಇರುಳುಗಣ್ಣು ಸಮಸ್ಯೆಗೆ ಮನೆ ಮದ್ದಾಗಿ ಪಪ್ಪಾಯ
ರಾತ್ರಿಯ ಕುರುಡು ಅಥವಾ ಇರುಳುಗಣ್ಣು ಎಂದು ಕರೆಯಲ್ಪಡುವ ರೋಗವು ಪಪ್ಪಾಯದಿಂದ ಗುಣವಾಗುತ್ತದೆ. ದಿನ ನಿತ್ಯ ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಬಾಣಂತಿಯರು ಪಪ್ಪಾಯದ ಸೇವನೆ ಮಾಡುವುದರಿಂದ ಎದೆ ಹಾಲು ವೃದ್ಧಿಸಿ, ಶಿಶುವಿನ ಆರೋಗ್ಯವು ಉತ್ತಮಗೊಳ್ಳುತ್ತದೆ.
ಪಪ್ಪಾಯ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಪ್ರತಿನಿತ್ಯ ಪಪಾಯ ಹಣ್ಣನ್ನು ಸೇವಿಸುವುದರಿಂದ ಅಥವಾ ಪಪ್ಪಾಯ ಜ್ಯೂಸ್ ಮಾಡಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಬೇಗ ಅನಾರೋಗ್ಯಕ್ಕೆ ತುತ್ತಾಗುವುದನ್ನು ಕಡಿಮೆ ಮಾಡುತ್ತದೆ.
ಚರ್ಮ ರೋಗಕ್ಕೆ ಮನೆ ಮದ್ದಾಗಿ ಪಪ್ಪಾಯ
ಪಪ್ಪಾಯದಲ್ಲಿ ಚರ್ಮದ ರೋಗವನ್ನು ಹೋಗಲಾಡಿಸುವ ಗುಣವಿದೆ. ಬ್ಯಾಕ್ಟೀರಿಯಾ ಅಥವಾ ಫಂಗಸ್ ನಿಂದ ಸೋಂಕಿಗೆ ತುತ್ತಾದ ದೇಹದ ಭಾಗ, ಕಜ್ಜಿಗೆ ಒಳಗಾಗುತ್ತದೆ. ಆ ಭಾಗದಲ್ಲಿ ಹೆಚ್ಚಿನ ತುರಿಕೆ ಮತ್ತು ಉರಿಯು ಉಂಟಾಗುತ್ತದೆ. ಇದಕ್ಕೆ ಪಪ್ಪಾಯ ಕಾಯಿಯು ಪರಿಹಾರ ನೀಡುತ್ತದೆ. ಪಪ್ಪಾಯ ಕಾಯಿಯನ್ನು ಜಜ್ಜಿ, ಅದರ ರಸವನ್ನು ಹಿಂಡಿ ಸೋಂಕು ಉಂಟಾಗಿರುವ ಭಾಗಕ್ಕೆ ಹಚ್ಚಿದರೆ ಕ್ರಮೇಣ ಸೋಂಕು ನಿವಾರಣೆ ಆಗುತ್ತದೆ.
ಮುಟ್ಟಿನ ಸಮಸ್ಯೆಗೆ ಮನೆ ಮದ್ದಾಗಿ ಪಪ್ಪಾಯ
ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಇದ್ದಲ್ಲಿ ಅದನ್ನು ನಿವಾರಿಸಲು ಪಪ್ಪಾಯ ಬೀಜ ಸಹಾಯ ಮಾಡುತ್ತದೆ . ಮುಟ್ಟು ಸರಿಯಾಗಿ ಆಗದೆ ಇದ್ದಲ್ಲಿ ಅಥವಾ ಮುಟ್ಟಿನ ಸಂದರ್ಭದಲ್ಲಿ ಹೆಚ್ಚಿನ ನೋವು ಉಂಟಾದಲ್ಲಿ, ಪಪ್ಪಾಯ ಬೀಜವನ್ನು ಪುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ದಿನನಿತ್ಯ ಇದನ್ನು ಸೇವಿಸಿದರೆ ಕ್ರಮೇಣ ಮುಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.
ಮುಖದ ಕಾಂತಿ ಹೆಚ್ಚಿಸಲು ಮನೆಮದ್ದು ಈ ಪಪ್ಪಾಯ
ಮುಖದ ಕಾಂತಿಗೂ ಪಪ್ಪಾಯ ಒಳ್ಳೆಯದು. ಪಪ್ಪಾಯ ಹಣ್ಣಿನ ತಿರುಳನ್ನು ಪೇಸ್ಟ ಆಗಿ ಮಾಡಿ ಅದನ್ನು ಮುಖಕ್ಕೆ ಹಚ್ಚಬೇಕು. ಹದಿನೈದು ನಿಮಿಷ ಬಿಟ್ಟು, ಅದು ಒಣಗಿದ ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮುಖದ ಮೇಲಿನ ಕಲೆ ಮತ್ತು ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿಯು ಹೆಚ್ಚುತ್ತದೆ.