ನೆಲ್ಲಿಕಾಯಿಯ ಔಷಧಿ ಗುಣಗಳು (Indian Gooseberry or Amla)

Share this with your friends...

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತದೆ. ಇದು ಹೆಚ್ಚಾಗಿ ಮಲೆನಾಡಿನ ಬೆಟ್ಟದ ಪ್ರದೇಶದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಬೆಟ್ಟದ ನೆಲ್ಲಿಕಾಯಿ ಎಂದು ಕರೆಯುತ್ತಾರೆ. ಮುಖ್ಯವಾಗಿ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಆಹಾರದಲ್ಲೂ ಉಪಯೋಗಿಸುತ್ತಾರೆ. ಹಾಗು ಇದನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ನೆಲ್ಲಿಕಾಯಿಗೆ ತುಂಬಾ ಮಹತ್ವವಿದೆ. ನೆಲ್ಲಿಕಾಯಿಯು ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವವನ್ನು ಹೊಂದಿರುತ್ತದೆ.

ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. ಆದರೆ ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ, ಸಿಹಿಯ ಅನುಭವಾಗುತ್ತದೆ. ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಲು ಇಚ್ಚಿಸದವರು ಅದನ್ನು ಉಪ್ಪಿನಕಾಯಿ, ಚಟ್ನಿ, ಹಾಗು ತಂಬುಳಿಗಳನ್ನಾದರೂ ಮಾಡಿಕೊಂಡು ಸೇವಿಸಬಹುದು. ಬಹಳಷ್ಟು ಜನರು ನೆಲ್ಲಿಕಾಯಿಯನ್ನು ಒಣಗಿಸಿಕೊಂಡು ವರ್ಷಪೂರ್ತಿ ಉಪಯೋಗಿಸುತ್ತಾರೆ. ನೆಲ್ಲಿಕಾಯಿಯ ಗಿಡದ ಬೇರು, ಎಲೆ, ಕಾಯಿ ಎಲ್ಲವು ಔಷಧಿ ಗುಣಗಳನ್ನು ಹೊಂದಿವೆ. ನೆಲ್ಲಿಕಾಯಿ ಗಿಡವು ಚಳಿಗಾಲದ ಸಮಯದಲ್ಲಿ ಕಾಯಿ ಬಿಡುತ್ತದೆ. ಅಕ್ಟೊಬರ್ ನಿಂದ ಜನವರಿವರೆಗೂ ನಾವು ನೆಲ್ಲಿಕಾಯಿಯನ್ನು ಕಾಣಬಹುದು. ಆದರೆ ಈಗ ಬರುವಂತ ದೊಡ್ಡಗಾತ್ರದ ನೆಲ್ಲಿಕಾಯಿಗಳನ್ನು ನಾವು ಯಾವಾಗಲು ಮಾರುಕಟ್ಟೆಯಲ್ಲಿ ನೋಡಬಹುದು. ಇಂತಹ ತಳಿಗಳು ಹೈಬ್ರಿಡ್ ನೆಲ್ಲಿಕಾಯಿಗಳಾಗಿದ್ದು ಇದನ್ನು ಔಷಧಿಗೆ ಉಪಯೋಗಿಸುವುದಿಲ್ಲ. ಔಷಧಿಗಾಗಿ ಉಪಯೋಗಿಸುವುದು ಬೆಟ್ಟದ ನೆಲ್ಲಿಕಾಯಿ ಮಾತ್ರ. ಇದರ ವೈಜ್ಞಾನಿಕ ಹೆಸರು “Phyllanthus emblica” ಒಂದು ವೇಳೆ ನಿಮಗೆ ಬೆಟ್ಟದ ನೆಲ್ಲಿಕಾಯಿ ಲಭ್ಯವಾಗದೇ ಇದ್ದಾಗ ನೀವು ನಮಗೆ ಕಾಮೆಂಟ್ ಮಾಡಿರಿ ಅಥವಾ ಇಮೇಲ್ ಕಳಿಸಿ.

ಮಧುಮೇಹ ನಿಯಂತ್ರಣಕ್ಕೆ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಸಣ್ಣ ತುಂಡುಗಳನ್ನು ಮಾಡಿ ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಜೀರಿಗೆ ಪುಡಿ, ಮೆಂತ್ಯೆ ಪುಡಿ, ಸ್ವಲ್ಪ ಅರಿಸಿನ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ರೀತಿಯಾಗಿ ಕಷಾಯವನ್ನು ಮಾಡಿಕೊಂಡು ಪ್ರತಿನಿತ್ಯ ಕುಡಿಯುವುದರಿಂದ ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ, ಮಧುಮೇಹವು ಹತೋಟಿಗೆ ಬರುತ್ತದೆ.

ಮುಖದ ಆರೋಗ್ಯಕ್ಕೆ ನೆಲ್ಲಿಕಾಯಿ ಉತ್ತಮ ಔಷಧಿಯಾಗಿದೆ

ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿ ಪೇಸ್ಟ್ ಮಾಡಿಕೊಂಡು, ಒಂದು ಚಮಚ ಪೇಸ್ಟ್ ಗೆ ಅರ್ಧ ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿಕೊಳ್ಳಬೇಕು. ಇದಕ್ಕೆ ನೀರನ್ನು ಸೇರಿಸುವ ಅಗತ್ಯ ಇರುವುದಿಲ್ಲ, ಕಾರಣ ಹಸಿ ನೆಲ್ಲಿಕಾಯಿಯನ್ನು ನಾವು ಉಪಯೋಗಿಸುವುದರಿಂದ ಅದರ ರಸದಲ್ಲೇ ಕಲಸಿ, ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಇದು ಮುಖದ ಆರೋಗ್ಯವನ್ನು ಕಾಪಾಡುತ್ತದೆ. ಚರ್ಮದ ಆರೋಗ್ಯಕ್ಕೆ ಬೇಕಾದ ಕೊಲಾಜೆನ್ ನ ರಚನೆಗೆ ಇದು ತುಂಬಾ ಸಹಕಾರಿಯಾಗಿದೆ. ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ.

ಉಸಿರಾಟದ ತೊಂದರೆಗೆ ಬೆಟ್ಟದ ನೆಲ್ಲಿಕಾಯಿ

ಹಸಿ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಅದಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.

ಬಿಕ್ಕಳಿಕೆ ನಿಲ್ಲಿಸುವುದಕ್ಕೆ ನೆಲ್ಲಿಕಾಯಿ ಸಹಕಾರಿಯಾಗಿದೆ

ಬೆಟ್ಟದ ಹಸಿ ನೆಲ್ಲಿಕಾಯಿಯ ಪೇಸ್ಟ್ ಮಾಡಿಕೊಂಡು, ಅದಕ್ಕೆ ಅರ್ಧ ಚಮಚ ಜೇನು ತುಪ್ಪ ಮತ್ತು ಸ್ವಲ್ಪ ನೀರು ಸೇರಿಸಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಹೊಟ್ಟೆನೋವು ನಿವಾರಣೆಗೆ ನೆಲ್ಲಿಕಾಯಿ ಸಹಕಾರಿಯಾಗಿದೆ

ಹಸಿ ಬೆಟ್ಟದ ನೆಲ್ಲಿಕಾಯಿಯ ರಸವನ್ನು ತೆಗೆದುಕೊಂಡು, ಅದಕ್ಕೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ

ಶೀತ ಮತ್ತು ಕಫ ನಿವಾರಣೆಗೆ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ, ಅಂದರೆ 2 ಚಮಚ ನೆಲ್ಲಿ ರಸಕ್ಕೆ 2 ಚಮಚ ಜೇನುತುಪ್ಪ ಬೆರಸಿ ತಿನ್ನುವುದರಿಂದ ಕಫ ನಿವಾರಣೆಯಾಗಿ, ಶೀತವು ಕಡಿಮೆಯಾಗುವುದು.

ನೆಲ್ಲಿಕಾಯಿಯು ದೇಹದ ತೂಕವನ್ನು ಕಡಿಮೆಮಾಡುತ್ತದೆ

ನೆಲ್ಲಿಕಾಯಿ ಅತಿ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಆದ್ದರಿಂದ ಪ್ರತಿದಿನ ನೆಲ್ಲಿಕಾಯಿಯ ರಸ ಸೇವಿಸುವುದರಿಂದ, ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಉತ್ಪಾದನೆಯನ್ನು ನಿಯಂತ್ರಿಸಿ, ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆಲ್ಲಿಕಾಯಿಯು ಸಹಕಾರಿಯಾಗಿದೆ

ಮಾರ್ಕೆಟನಲ್ಲಿ ಸಿಗುವ ರಾಸಾಯನಿಗಳನ್ನು ಉಪಯೋಗಿಸಿ ತಯಾರಿಸಿದ ಎಣ್ಣೆಗಳನ್ನು ಉಪಯೋಗಿಸುವ ಬದಲು, ನೈಸಗರಿಕವಾಗಿ ಸಿಗುವ ನೆಲ್ಲಿಕಾಯಿಯನ್ನು ಬಳಸಿ, ಎಣ್ಣೆಯನ್ನು ತಯಾರಿಸಬಹುದು. ಎಣ್ಣೆಯನ್ನು ಮಾಡುವ ವಿಧಾನ : ಬೆಟ್ಟದ ನೆಲ್ಲಿಕಾಯಿಯನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಆ ಎಣ್ಣೆಯ ಬಣ್ಣ ಹಸಿರಾಗಿ ಬದಲಾದ ಮೇಲೆ ತಣಿಸಿಕೊಂಡು ಪ್ರತಿನಿತ್ಯ ಕೂದಲಿಗೆ ಹಾಕುವುದರಿಂದ ಕೂದಲು ಕಪ್ಪಾಗುತ್ತದೆ. ಹಾಗೂ ಕೂದಲು ಕಾಂತಿಯುತವಾಗುತ್ತದೆ.

ಗಂಟಲು ನೋವು ನಿವಾರಣೆಗೆ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿಯ ಕಷಾಯವನ್ನು ಮಾಡಿಕೊಂಡು, ಪ್ರತಿದಿನ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

ನೆಲ್ಲಿಕಾಯಿಯ ಬೀಜವು ಮೂಗಿನ ರಕ್ತ ಸೋರುವಿಕೆಯನ್ನು ತಡೆಯುತ್ತದೆ

ಮೂಗಿನಿಂದ ರಕ್ತ ಸೋರುತ್ತಿದ್ದರೆ, ನೆಲ್ಲಿ ಬೀಜಗಳನ್ನು ತುಪ್ಪದಲ್ಲಿ ಹುರಿದು ಸಣ್ಣಗೆ ಪುಡಿಮಾಡಿಕೊಂಡು ಹಣೆಗೆ ಲೇಪಿಸುವುದರಿಂದ ಮೂಗಿನ ರಕ್ತಸ್ರಾವ ನಿಲ್ಲುತ್ತದೆ.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನೆಲ್ಲಿಕಾಯಿಯ ಉಪಯೋಗ

ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ರಾತ್ರೆ ನೆನೆಸಿಟ್ಟು, ನಂತರ ಬೆಳ್ಳಿಗ್ಗೆ ಅದನ್ನು ಸೋಸಿಕೊಂಡು ಆ ನೀರಿಗೆ ನೆಲ್ಲಿಕಾಯಿಯ ಜ್ಯೂಸ್ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ.

ಕಣ್ಣಿನ ಸುತ್ತ ಇರುವ ಕಪ್ಪು ಕಲೆಯ ನಿವಾರಣೆಗೆ ನೆಲ್ಲಿಕಾಯಿಯು ಸಹಕಾರಿಯಾಗಿದೆ

ಕೆಲವರಿಗೆ ಕಣ್ಣಿನ ಸುತ್ತಲೂ ಕಪ್ಪಗಾಗಿರುತ್ತದೆ. ಇದನ್ನು ಹೋಗಲಾಡಿಸಲು ರಾಸಾಯನಿಕ ಕ್ರೀಮ್ ಗಳ ಬಳಕೆ ಮಾಡುತ್ತಾರೆ. ಇದರಿಂದ ಒಮ್ಮೊಮ್ಮೆ ಕಪ್ಪು ಕಲೆಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅದರ ಬದಲು ನೆಲ್ಲಿಕಾಯಿಯ ಪೇಸ್ಟ್ ಮಾಡಿಕೊಂಡು, ಕಣ್ಣಿನ ಸುತ್ತಲೂ ಹಚ್ಚಿಕೊಳ್ಳುವುದರಿಂದ ಕಣ್ಣು ತಂಪಾಗುವುದಲ್ಲದೆ, ನಿಧಾನವಾಗಿ ಕಪ್ಪು ಕಲೆಯು ನಿವಾರಣೆಯಾಗುತ್ತದೆ.

ನೆಲ್ಲಿಕಾಯಿಯು ರಕ್ತ ಶುದ್ಧೀಕರಿಸುತ್ತದೆ

ತಾಜಾ ಇರುವ ಬೆಟ್ಟದ ನೆಲ್ಲಿಕಾಯಿಯನ್ನು ತಂದು, ಜ್ಯೂಸ್ ಮಾಡಿಕೊಂಡು, ಅದಕ್ಕೆ ಜೇನು ತುಪ್ಪ ಸೇರಿಸಿಕೊಂಡು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ರಕ್ತವು ಶುದ್ಧಿಯಾಗುತ್ತದೆ.

ನೆಲ್ಲಿಕಾಯಿಯು ಮಲಬದ್ಧತೆ ನಿವಾರಣೆಗೆ ಸಹಕಾರಿಯಾಗಿದೆ

ಬೆಟ್ಟದ ನೆಲ್ಲಿಕಾಯಿಯ 15 ml ರಸವನ್ನು, 250ml ನೀರಿಗೆ ಬೆರಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಉರಿ ಮೂತ್ರ ನಿವಾರಣೆಗೆ ನೆಲ್ಲಿಕಾಯಿ ಸಹಕಾರಿಯಾಗಿದೆ

ಬೆಟ್ಟದ ನೆಲ್ಲಿಕಾಯಿ ರಸವನ್ನು ದಿನಕ್ಕೆ ಎರಡು ಬಾರಿ 2 ಚಮಚ ಕುಡಿಯುವುದರಿಂದ ಉರಿ ಮೂತ್ರ ಕಡಿಮೆಯಾಗುತ್ತದೆ.


Share this with your friends...

1 thought on “ನೆಲ್ಲಿಕಾಯಿಯ ಔಷಧಿ ಗುಣಗಳು (Indian Gooseberry or Amla)”

Leave a Comment

Your email address will not be published. Required fields are marked *