ಜೀರಿಗೆಯ ಔಷಧಿ ಗುಣಗಳು

Share this with your friends...

Cumin Seeds

ಜೀರಿಗೆಯ ಔಷಧಿ ಉಪಯೋಗಗಳು

”ಜೀರಿಗೆ” ಇದು ಇಲ್ಲದಿರುವ ಭಾರತದ ಮನೆಗಳೇ ಇಲ್ಲ. ಜೀರಿಗೆಯ ಒಗ್ಗರಣೆಯ ಚಟಪಟ ಕೇಳದಿರುವ ಅಡುಗೆ ಮನೆಗಳೇ ಇಲ್ಲ. ಹೀಗೆ ಭಾರತೀಯರ ಅಡುಗೆ ಮನೆಗಳಲ್ಲಿ ಖಾಯಂ ವಿಳಾಸವನ್ನ ಪಡೆದಿರುವಂತಹ ಜೀರಿಗೆ, ಕೇವಲ ದಿನನಿತ್ಯದ ಆಹಾರಗಳಲ್ಲಿ ಮಾತ್ರ ಬಳಕೆಯಾಗುವುದಿಲ್ಲ. ಅದರ ಹೊರತಾಗಿ ಬಹಳಷ್ಟು ಔಷಧಿಯ ಗುಣಗಳನ್ನು ಸಹ ಹೊಂದಿದೆ. ಕೂದಲು ಉದುರುವಿಕೆಗೆ ,ಮುಖದ ಸೌಂದರ್ಯಕ್ಕೆ, ಅಷ್ಟೇ ಅಲ್ಲದೆ ಹೊಟ್ಟೆಯ ಎಲ್ಲಾ ಸಮಸ್ಯೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ವಸ್ತುವೆಂದರೆ ಅದು ಜೀರಿಗೆ. ಇದರಲ್ಲಿ ಸಾಕಷ್ಟು ರೋಗನಿರೋಧಕ ಶಕ್ತಿಯು ಸಹ ಇದೆ. ಅದರ ಜೊತೆಗೆ ಜೀರಿಗೆಯು ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕನ್ನು ಸಹ ನಿವಾರಿಸುತ್ತದೆ. ಆದರೆ ಹೆಚ್ಚಿನ ಪ್ರತಿಶತ ಜನರಿಗೆ ಜೀರಿಗೆಯ ಔಷಧಿ ಗುಣಗಳ ಬಗ್ಗೆ ಅರಿವಿಲ್ಲದೆ ಕೇವಲ ಅಡುಗೆ ಮನೆಯ ಮಸಾಲೆ ಪದಾರ್ಥವನ್ನಾಗಿ ಮಾತ್ರವೇ ಬಳಸುತ್ತಿದ್ದಾರೆ

ಮೆಡಿಟರೇನಿಯನ್ ಸ್ಥಳಗಳಲ್ಲಿ ಬೆಳೆಯುವ ವಾರ್ಷಿಕ ಬೆಳೆಗಳಲ್ಲೊಂದು ಬೆಳೆ ಜೀರಿಗೆ. ಒರಟಾದ ಮೇಲ್ಮೈ ಮತ್ತು ಮೂಗಿಗೆ ಬಡಿಯುವಂತಹ ವಾಸನೆಯನ್ನು ಹೊಂದಿರುವಂತಹ ಜೀರಿಗೆಯು ಅಡುಗೆಯ ಸ್ವಾದವನ್ನೇನೂ ಹೆಚ್ಚಿಸುತ್ತದೆ ಸರಿ, ಅದರೊಂದಿಗೆ ಬಹಳಷ್ಟು ಔಷಧಿಯ ಗುಣಗಳನ್ನು ಸಹ ಹೊಂದಿದೆ. ನಮ್ಮ ಹಿರಿಯರು ಹಿಂದಿನಂದಲೂ ಬಳಸಿಕೊಂಡು ಬಂದಿರುವಂತಹ ಮನೆಮದ್ದುಗಳಲ್ಲಿ ಈ ಜೀರಿಗೆಯು ಸಹ ಒಂದು. ಭಾರತ ,ಮರಾಕೋ ,ಈಜಿಪ್ಟ್ ಮತ್ತು ಇರಾನ್ ನಂತಹ ದೇಶಗಳು ಜೀರಿಗೆಯ ಉತ್ಪಾದನೆಯಲ್ಲಿ ಮೇಲ್ಗೈಯನ್ನು ಹೊಂದಿವೆ. ವೈಜ್ಞಾನಿಕವಾಗಿ ಕ್ಯುಮಿನಂ ಓಡೋರಂ ಅಥವಾ ಕ್ಯೂಮಿನಂ ಸಿಮಿನನ್ ಎಂದು ಕರೆಯಲ್ಪಡುವ ಜೀರಿಗೆಯು ಬಹಳಷ್ಟು ಸಾಂಪ್ರದಾಯಕ ಬಳಕೆಗಳನ್ನ ಹೊಂದಿದೆ. ಇದು ಹೆಚ್ಚಿನದಾಗಿ ಹೊಟ್ಟೆಯ ಸಮಸ್ಯೆಗಳಿಗೆ ಉಪಯೋಗವಾಗುತ್ತದೆ .ವಾಂತಿ ,ಭೇದಿ ಸೇರಿದಂತೆ ಹೊಟ್ಟೆ ಉಬ್ಬುರವನ್ನು ಕಡಿಮೆ ಮಾಡಲು ಸಹ ಜೀರಿಗೆಯ ಪಾನಕವನ್ನು ಮಾಡಿಕೊಡಲಾಗುತ್ತದೆ .ಇಷ್ಟೇ ಅಲ್ಲ ಹೊಟ್ಟೆಯ ನೋವಿಗಂತೂ ಜೀರಿಗೆಯನ್ನು ಉಪ್ಪಿನೊಂದಿಗೆ ಒಂದು ಚಮಚ ಸೇವಿಸಿದರೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ

ಇಂದಿನ ಯುಗದಲ್ಲಿ ಖಾಯಿಲೆ ಇಲ್ಲದ ಮನುಷ್ಯನೇ ಇಲ್ಲ. ಚಿಕ್ಕ ಪುಟ್ಟ ಶೀತ, ಜ್ವರ ಗಳಿಂದ ಹಿಡಿದು ದೊಡ್ಡ ದೊಡ್ಡ ಕಾಯಿಲೆಗಳಾದಂತಹ ಕ್ಯಾನ್ಸರ್, ಹೃದಯ ರೋಗಗಳು ಮಾನವನ ಬದುಕನ್ನು ಚೆಲ್ಲಾಪಿಲ್ಲಿ ಆಗಿಸಿವೆ. ಇದರಿಂದ ತಪ್ಪಿಸಿಕೊಳ್ಳಲು ಮಾನವ ಇಂಗ್ಲಿಷ್ ಔಷಧಿಯ ಮೊರೆ ಹೋಗಿದ್ದಾನೆ. ಗಂಭೀರ ಸಮಸ್ಯೆಗಳಾದಂತಹ ಕ್ಯಾನ್ಸರ್ ಮುಂತಾದ ರೋಗಗಳಿಗೆ ಔಷಧಿ ತೆಗೆದುಕೊಳ್ಳುವ ಜೊತೆ ಜೊತೆಗೆ ಚಿಕ್ಕಪುಟ್ಟ ಶೀತ, ಕೆಮ್ಮು, ಜ್ವರಕ್ಕೂ ಸಹ ಇಂಗ್ಲಿಷ್ ಮೆಡಿಸಿನ್ ಬಳಕೆ ಹೆಚ್ಚಾಗುತ್ತಿದೆ. ಆದರೆ ಈ ಎಲ್ಲಾ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಪರಿಹಾರವನ್ನು ನಮ್ಮ ಹಿರಿಯರು ಕಂಡುಹಿಡಿದಿದ್ದಾರೆ. ಮೊದಲನೆಯದಾಗಿ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ನಮ್ಮ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರಬೇಕು .ಈ ಶಕ್ತಿಯ ಹೆಚ್ಚಳಕ್ಕೆ ಸರಿಯಾಗಿ ಪೋಷಕಾಂಶಗಳ ಸೇವನೆ ಅಗತ್ಯ. ಆದರೆ ಇಂದಿನ ಜೀವನ ಶೈಲಿಯಲ್ಲಿ ನಾವು ತೆಗೆದುಕೊಳ್ಳುವ ಆಹಾರದ ಬಗೆಗಿನ ಮಾಹಿತಿ ನಮಗೆ ತಿಳಿದಿಲ್ಲವಾಗಿದೆ. ತಿಳಿದರೂ ಆ ಮಾಹಿತಿಯನ್ನ ಪಕ್ಕಕ್ಕಿಡುವ ಪರಿಸ್ಥಿತಿ ಬಂದಿದೆ. ಹೀಗಿರುವಾಗ ಬಂದ ಕಾಯಿಲೆಯನ್ನ ಹೋಗಲಾಡಿಸಲು ಔಷಧಿ ತೆಗೆದುಕೊಳ್ಳುವ ಬದಲು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮುಖ್ಯವಾಗಿದೆ. ಇದಕ್ಕೆ ಸಹಾಯ ಮಾಡುವುದು ಜೀರಿಗೆ. ಜೀರಿಗೆಯಲ್ಲಿರುವ ಕಬ್ಬಿಣಾಂಶ ಮತ್ತು ಪೊಟ್ಯಾಶಿಯಂ ನಂತಹ ಅಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೀರಿಗೆಯನ್ನ ರಾತ್ರಿ ಇಡಿ ನೀರಿನಲ್ಲಿ ನೆನೆ ಹಾಕಿ, ಬೆಳಗಿನ ಜಾವದಲ್ಲಿ ಅದನ್ನ ಮತ್ತಷ್ಟು ನೀರಿನೊಂದಿಗೆ ಸೇರಿಸಿ ಕುದಿಸಿ ಚಹಾದ ರೂಪದಲ್ಲಿ ಕುಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

ಜೀರಿಗೆ ಇಂದ ಸೋಂಕು ನಿವಾರಣೆ

ಜೀರಿಗೆಯ ಇನ್ನೊಂದು ಅಂಶವೆಂದರೆ ಇದು ಬ್ಯಾಕ್ಟೀರಿಯಾ ದಿಂದ ಆಗುವಂತಹ ಸೋಂಕನ್ನು ಸಹ ನಿವಾರಿಸುತ್ತದೆ. ಜೀರಿಗೆಯಲ್ಲಿ ಹೇರಳವಾಗಿ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಅಂತಹ ಮುಂತಾದ ಖನಿಜಗಳು ಇವೆ. ಅಷ್ಟೇ ಅಲ್ಲದೆ ವಿಟಮಿನ್ ಎ, ವಿಟಮಿನ್ ಬಿ ,ವಿಟಮಿನ್ ಸಿ ಕೂಡ ಇರುವುದರಿಂದ ಇದು ಸೋಂಕು ನಿವಾರಿಸುತ್ತದೆ. ಇಂದಿನ ಜನಜೀವನದ ಆಹಾರ ಪದ್ಧತಿ ಅಸ್ತವ್ಯಸ್ತವಾಗಿದೆ. ಬೆಳೆಯುವ ಮಕ್ಕಳ ದಿನ ನಿತ್ಯದ ಆಹಾರವೇ ಕಲುಷಿತಗೊಂಡಿದೆ. ಹೊರಗಿನ ಕಲಬೆರಿಕೆಯಾದ ಜಂಕ್ ಫುಡ್ ಅನ್ನು ದಿನನಿತ್ಯ ಸೇವಿಸುವವರು ಇದ್ದಾರೆ. ಹೀಗೆ ಪ್ರತಿನಿತ್ಯ ಸೇವಿಸುವುದರಿಂದ ಬಹಳಷ್ಟು ರೋಗರುಜಿನಗಳು ಬರುತ್ತವೆ. ಅಷ್ಟೇ ಅಲ್ಲದೆ ನಮ್ಮ ದೇಹವು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಸ್ಥೂಲ ಕಾಯ ಉಂಟಾಗುತ್ತದೆ. ಇದಕ್ಕೆಲ್ಲಾ ಕಾರಣ ಆ ಜಂಕ್ ಫುಡ್ ನಲ್ಲಿ ಇರುವಂತಹ ಹೆಚ್ಚುವರಿ ಆದಂತಹ ಕೊಬ್ಬು, ಹಾಗೂ ಸರಳ ಕಾರ್ಬೋಹೈಡ್ರೇಟ್ಸ್ ಗಳು. ಅದರ ಜೊತೆಗೆ ಸಂಸ್ಕರಿಸಿದ ಸಕ್ಕರೆಯೂ ಸೇರಿ ದೇಹವನ್ನ ಅಲ್ಲೋಲಕಲ್ಲೋಲ ಮಾಡುತ್ತವೆ. ಇದರಿಂದ ಹೊಟ್ಟೆಯ ನೋವು ,ಹೊಟ್ಟೆಯ ಮುರಿತ ಅಷ್ಟೇ ಅಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಕೂಡ ಶುರುವಾಗುತ್ತವೆ .ಇದರಿಂದ ಪಾರಾಗಲು ಜೀರಿಗೆಯ ನೀರಿನ ಸೇವನೆಯು ಸಹಾಯ ಮಾಡುತ್ತದೆ. ಜೀರಿಗೆ ನೀರಿನಲ್ಲಿ ಥೈಮೊಕ್ವಿನಾನ್ ಎಂಬ ರಾಸಾಯನಿಕ ಸಂಯುಕ್ತದ ಬಿಡುಗಡೆಯಿಂದಾಗಿ ಯಕೃತ್ತಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಹೀಗಾಗಿ ಜೀರಿಗೆ ನೀರಿನ ಸೇವನೆಯಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಮಹಿಳೆಯರ ಸಮಸ್ಯೆಗಳಿಗೂ ಜೀರಿಗೆ ಇಂದ ಪರಿಹಾರ

ಕಬ್ಬಿಣ ಅಂಶವನ್ನು ಹೇರಳವಾಗಿ ಹೊಂದಿರುವಂತ ಜೀರಿಗೆಯು ಗರ್ಭಿಣಿ ಮತ್ತು ಬಾಣಂತಿಯರಿಗೆ ಆರೋಗ್ಯಕರವಾದಂತಹ ಪಾನೀಯವಾಗಿದೆ. ಅಷ್ಟೇ ಅಲ್ಲದೆ ಎದೆ ಹಾಲಿನ ಹೆಚ್ಚಳಕ್ಕೂ ಸಹಾಯ ಮಾಡುತ್ತದೆ. ಇದರಿಂದ ಅಗತ್ಯವಿರುವ ಪೋಷಕಾಂಶಗಳನ್ನು ಮಗುವಿಗೂ ಸಹ ರವಾನಿಸಲು ಸಹಾಯ ಮಾಡುತ್ತದೆ. ಋತುಸ್ರಾವದಲ್ಲಂತೂ ಜೀರಿಗೆಯ ಬಳಕೆ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಅನಿಯಮಿತ ಋತುಸ್ರಾವದ ಸಮಸ್ಯೆಯಿಂದ ಬಳಲುತ್ತಿದ್ದವರು ಜೀರಿಗೆ ನೀರಿನ ಸೇವನೆ ಮಾಡುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಚರ್ಮದ ಕಾಂತಿಯನ್ನು ಹೆಚ್ಚಿಸಲು ಜೀರಿಗೆ ಸಹಾಯಕ

ಹಾಗೆ ಕ್ಯಾಲ್ಸಿಯಂ ,ಮ್ಯಾಂಗನೀಸ್ ಪೊಟಾಸಿಯಂ , ಸೆಲೆನಿಯಂ ಮುಂತಾದ ಖನಿಜಗಳಿಂದ ಸಮೃದ್ಧವಾಗಿರುವಂತಹ ಜೀರಿಗೆ ನೀರಿನಲ್ಲಿ ಇನ್ನೊಂದು ಮುಖ್ಯವಾದ ಅಂಶವಿದೆ; ಅದುವೇ ಚರ್ಮದ ಕಾಂತಿಯನ್ನ ಹೆಚ್ಚಿಸುವುದು. ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿರುವಂತಹ ವಿಟಮಿನ್ ಇ ಅಂಶವನ್ನು ಹೊಂದಿರುವ ಜೀರಿಗೆ ದಿನನಿತ್ಯದ ಸೇವನೆಯಿಂದ ಮುಖದಲ್ಲಿನ ಸುಕ್ಕನ್ನು ಸಹ ನಿವಾರಣೆ ಮಾಡುತ್ತದೆ. ವಾತಾವರಣದಲ್ಲಿನ ಮಾಲಿನ್ಯದಿಂದಾಗಿಯೂ ಅಥವಾ ಹಾರ್ಮೋನಿನ ವ್ಯತ್ಯಾಸದಿಂದ ಆಗಿಯೋ ಮುಖದ ಮೇಲೆ ಉಂಟಾದಂತಹ ಮೊಡವೆಗೆ ಇದು ರಾಮಬಾಣವಾಗಿದೆ. ಬ್ಯಾಕ್ಟೀರಿಯಾ ವನ್ನು ನಾಶಪಡಿಸುವ ಗುಣವಿರುವ ಜೀರಿಗೆ ,ಮುಖದ ಮೇಲಿನ ಮೊಡವೆಗಳನ್ನು ಸಹ ಕಡಿಮೆ ಮಾಡಲಿದೆ. ಅದರೊಂದಿಗೆ ಮುಖದ ಮೇಲಿನ ಕಲೆಯನ್ನು ಸಹ ಹೊಡೆದೋಡಿಸುತ್ತದೆ.

ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುವ ಜೀರಿಗೆ

ನಮ್ಮ ಹಿರಿಯರು ಜೀರಿಗೆಯನ್ನ ಮನೆಮದ್ದಾಗಿ ಉಪಯೋಗಿಸುವ ಮೂಲ ಕಾರಣವೇ ಅಜೀರ್ಣ ಸಮಸ್ಯೆಯನ್ನು ಹೊಡೆದೋಡಿಸುವುದು. ಬೇಕು ಬೇಡವಾದ ವಸ್ತುಗಳನ್ನ ಸೇವಿಸುವುದರ ಪರಿಣಾಮವಾಗಿ ಉಂಟಾದ ಅಜೀರ್ಣವನ್ನ ನಿವಾರಿಸಲು ಜೀರಿಗೆಯು ಅತ್ಯುತ್ತಮವಾದ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಬೇಕಾದಂತಹ ಕಿಣ್ವಗಳನ್ನ ಹೆಚ್ಚಿಸುವುದರ ಮೂಲಕ ಮತ್ತು ಅವುಗಳ ಚಟುವಟಿಕೆಗಳನ್ನು ವೃದ್ಧಿಸುವುದರ ಮೂಲಕ ಅಜೀರ್ಣದ ಸಮಸ್ಯೆಯನ್ನ ಹೊಡೆದಾಡುವಲ್ಲಿ ಜೀರಿಗೆ ಯಶಸ್ವಿಯಾಗುತ್ತದೆ.

ಜೀರಿಗೆಯು ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ನೀಗಿಸುತ್ತದೆ

ಜೀರಿಗೆಯು ಕಬ್ಬಿಣಾಂಶದ ಒಂದು ಅತ್ಯುತ್ತಮವಾದ ಮತ್ತು ನೈಸರ್ಗಿಕವಾದ ಮೂಲವಾಗಿದೆ. ಕೇವಲ ಒಂದು ಚಮಚ ಜೀರಿಗೆಯು 1.4 ಮಿಲಿ ಗ್ರಾಮಿನಷ್ಟು ಕಬ್ಬಿಣಾಂಶವನ್ನು ಹೊಂದಿರುವುದರಿಂದ ಕಬ್ಬಿಣಾಂಶದ ಕೊರತೆ ಇರುವವರಿಗೆ ಒಳ್ಳೆಯ ಮದ್ದಾಗಿ ಪರಿಣಮಿಸುತ್ತದೆ. ಏಕೆಂದರೆ ಇಂದಿನ ಕಾಲದಲ್ಲಿ ಕಬ್ಬಿಣಾಂಶದ ಕೊರತೆಯು ಸರ್ವೇ ಸಾಮಾನ್ಯವಾಗಿ ಹೋಗಿದೆ. ಅದರಲ್ಲಿಯೂ ಪ್ರೌಢಾವಸ್ಥೆಗೆ ಬಂದಂತ ಹೆಣ್ಣು ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆಯು ಎದ್ದು ಕಾಣುತ್ತದೆ. ಸರಿಯಾಗಿ ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸದೇ ಇರುವುದು ಸಹ ಇದಕ್ಕೊಂದು ಕಾರಣವಾಗಿದೆ .ಕಾರಣವೇನೇ ಇದ್ದರೂ ಈ ದೂರ ಮಾಡಿಸುವಲ್ಲಿ ಜೀರಿಗೆಯು ಪರಿಣಾಮ ಬೀರುವುದಂತೂ ಸತ್ಯ.

ಡಯಾಬಿಟಿಸ್ ನಿಯಂತ್ರಣಕ್ಕೆ ಜೀರಿಗೆ

ಡಯಾಬಿಟಿಸ್ ಎನ್ನುವುದು ವೃದ್ಧರು ಅಥವಾ ಮಧ್ಯ ವಯಸ್ಕರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರಲ್ಲೂ ಕಂಡು ಬರುವ ಒಂದು ರೋಗವಾಗಿದೆ. ಎಷ್ಟೇ ಔಷಧೋಪಚಾರಗಳನ್ನು ಮಾಡಿದರು ಸಹ ಕಡಿಮೆಯಾಗದಿರುವಂತ ಕಾಯಿಲೆ ಅದು .ಇಂತಹ ಕಾಯಿಲೆ ಬಂದ ಮೇಲೆ ಔಷದೋಪಚಾರಗಳನ್ನ ಮಾಡಿ, ಪಥ್ಯವನ್ನು ಸಹ ಮಾಡಿ ಜೀವನದಲ್ಲಿ ಜಿಗುಪ್ಸೆ ಬರುವುದಕ್ಕಿಂತ, ಈ ಕಾಯಿಲೆ ಬರದಂತೆ ತಡೆಯುವುದೇ ಸುಲಭದ ಕೆಲಸ. ಹೀಗೆ ಈ ಕಾಯಿಲೆಯನ್ನ ತಡೆಯುವ ಅಥವಾ ಶುರುವಿನಲ್ಲೇ ಕಾಯಿಲೆಯನ್ನು ಕಡಿಮೆಗೊಳಿಸುವಂತಹ ಸಾಮರ್ಥ್ಯವನ್ನು ಜೀರಿಗೆ ಹೊಂದಿದೆ. ಜೀರಿಗೆಯು ರಕ್ತದಲ್ಲಿ ಇರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದರ ಮೂಲಕ ಡಯಾಬಿಟೀಸ್ ನಂತಹ ರೋಗದಿಂದ ಮುಕ್ತಿಯನ್ನು ಒದಗಿಸುತ್ತದೆ . ಇದರೊಂದಿಗೆ ಜೀರಿಗೆ ಮತ್ತೊಂದು ಅತ್ಯುತ್ತಮವಾದ ಕೆಲಸವೇನೆಂದರೆ ರಕ್ತದಲ್ಲಿರುವಂತಹ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದು .ದಿನಕ್ಕೆರಡು ಬಾರಿ ಕೇವಲ 75 ಮಿಲಿಗ್ರಾಂ ಅಷ್ಟು ಜೀರಿಗೆಯನ್ನ ಸೇವಿಸುವುದರ ಮೂಲಕ ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದಾಗಿದೆ.

ಬೊಜ್ಜು ನಿವಾರಕ ಜೀರಿಗೆ 

ಇಂದಿನ ಯುವಜನಾಂಗದಲ್ಲಿ ಬೊಜ್ಜುತನ ಎನ್ನುವುದು ಕಾಡುತ್ತಿದೆ. ಇದನ್ನು ಹೋಗಲಾಡಿಸಲು ಹಿರಿಯರು ನಮಗೆ ನೀಡಿರುವ ಉಪಾಯವೆಂದರೆ ಅದು ಜೀರಿಗೆ. ಜೀರಿಗೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಅಥವಾ ಜೀರಿಗೆಯ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಜೇನು ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಬೊಜ್ಜುತನವನ್ನು ಹಂತ ಹಂತವಾಗಿ ಕಡಿಮೆ ಮಾಡಬಹುದಾಗಿದೆ.

ದೇಹವನ್ನು ತಂಪಾಗಿರಿಸಲು ಜೀರಿಗೆ ಸಹಾಯಕ

ಇದರೊಂದಿಗೆ ದೈನಂದಿನ ಆಹಾರ ಪದ್ಧತಿಯ ಬದಲಾವಣೆಯು ಸಹ ಅಗತ್ಯವಾಗಿದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆಯ ನೀರನ್ನು ಸೇವಿಸುವುದರಿಂದ ಕೇವಲ ಅಜೀರ್ಣವನ್ನು ನಿವಾರಿಸುವುದು ಒಂದೇ ಅಲ್ಲ ನಮ್ಮ ದೇಹವನ್ನು ತಂಪಾಗಿ ಇಡಲು ಸಹ ಸಹಾಯ ಮಾಡುತ್ತದೆ. ದಿನ ನಿತ್ಯದ ಓಡಾಟದಲ್ಲಿ ಅಥವಾ ವಾತಾವರಣದ ಬದಲಾವಣೆಯಿಂದ ದೇಹವು ತನ್ನ ಪ್ರಕೃತಿಯನ್ನು ಬದಲಾಯಿಸುತ್ತದೆ. ಪರಿಸರದಲ್ಲಿ ಉಷ್ಣಾಂಶವು ಹೆಚ್ಚಾದಾಗ ನಮ್ಮ ದೇಹದ ಒಳಗಿನ ಉಷ್ಣವನ್ನು ಕಡಿಮೆಗೊಳಿಸಲು ತಂಪು ಆಹಾರ ಸೇವನೆಯು ಅಗತ್ಯ. ಕೇವಲ ಬಾಹ್ಯ ಪ್ರಕೃತಿಯ ಉಷ್ಣತೆ ಇಂದಾಗಿ ಮಾತ್ರವಲ್ಲದೆ ದೇಹದ ಒಳಗೂ ಉಷ್ಣತೆಯೂ ಹೆಚ್ಚಾದಾಗ ಅದನ್ನು ತಗ್ಗಿಸಲು ಸಹಾಯ ಮಾಡುವುದು ಜೀರಿಗೆ. ಇದರಿಂದಲೇ ದೇಹಕ್ಕೆ ತಂಪು ಒದಗುತ್ತದೆ. ಅಷ್ಟೇ ಅಲ್ಲ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ಡೈರಿಯ ಸಮಸ್ಯೆಯು ನಿವಾರಣೆಯಾಗುತ್ತದೆ.

ನಮ್ಮ ಪೂರ್ವಜರು ನೂರು ವರ್ಷಕ್ಕಿಂತ ಹೆಚ್ಚು ಕಾಲ ಬದುಕುತ್ತಿದ್ದರು ಅದರ ರಹಸ್ಯವೇನೆಂದರೆ ಎಲ್ಲಾ ಖಾಯಿಲೆಗಳಿಗೂ ಅವರು ಉಪಯೋಗಿಸುತ್ತಿದ್ದ ಮನೆಮದ್ದುಗಳು ಕೇವಲ ಕಾಯಿಲೆ ಬಂದಾಗ ಮಾತ್ರವಲ್ಲದೆ ದಿನನಿತ್ಯದ ಆಹಾರದಲ್ಲಿಯೂ ಸಹ ಔಷಧೀಯ ಗುಣಗಳುಳ್ಳ ವಸ್ತುಗಳನ್ನ ಬಳಸುತ್ತಿದ್ದರು ಹೀಗೆ ಅವರು ದಿನನಿತ್ಯ ಆಚರಿಸುತ್ತಿದ್ದ ಪದ್ಧತಿಗಳಲ್ಲಿ ಜೀರಿಗೆ ನೀರಿನ ಸೇವ ದೇವನೆಯೂ ಒಂದು ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ರಕ್ತದೊತ್ತಡ ಹಿಡಿತಕ್ಕೆ ಬರುತ್ತಿತ್ತು. ಇದರಿಂದಲೇ ನಮ್ಮ ಹಿರಿಯರು ಯಾವುದೇ ರಕ್ತದೊತ್ತಡದ ಸಮಸ್ಯೆ ಆಗಲಿ ಅಥವಾ ಹೃದಯ ಸಂಬಂಧಿ ಸಮಸ್ಯೆ ಆಗಲಿ ಇಲ್ಲದೆ ಆರೋಗ್ಯವಾಗಿದ್ದರು ಯಾವುದೇ ರೋಗರು ಜನಗಳಿಗೆ ತುತ್ತಾಗದೆ ನೆಮ್ಮದಿಯ ಜೀವನ ಸಾಗಿದಿದ್ದರೂ ಹೀಗೆ ನಾವು ಸಹ ನೆಮ್ಮದಿಯ ಜೀವನವನ್ನು ಸಾಗಿಸಬೇಕೆಂದರೆ ಮನೆ ಮದ್ದುಗಳ ಬಳಕೆ ಉಪಯುಕ್ತವಾಗಿದೆ.

ಈಗಾಗಲೇ ಜಗತ್ತಿನಲ್ಲಿ ಬೇಕಾದಷ್ಟು ರೋಗಗಳಿವೆ. ಆದರೂ ಕೂಡ ಇನ್ನಷ್ಟು ಸೋಂಕುಗಳು ನಮ್ಮನ್ನು ಬೆನ್ನಟ್ಟುತ್ತಲೇ ಇವೆ. ಕೊರೊನಾದಂತಹ ಮಹಾಮಾರಿಯ ಕಾರಣದಿಂದಾಗಿ ವರ್ಷಾನುಗಟ್ಟಲೆ ಮನೆಯಲ್ಲೇ ಬಂದಿಗಳಾಗಿದ್ದೆವು .ಅಂತಹ ಸಂದರ್ಭದಲ್ಲಿ ಮನೆಯ ಮದ್ದಿನ ಅವಶ್ಯಕತೆ ಎಷ್ಟಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹೀಗಾಗಿ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸುಲಭವಾಗಿ ಸಿಗುವಂತಹ ಮನೆಮದ್ದನ್ನು ಉಪಯೋಗಿಸಿಕೊಂಡು ನಿತ್ಯವೂ ಸೇವಿಸುವುದರ ಮೂಲಕ ನಾವು ಮತ್ತು ನಮ್ಮ ಕುಟುಂಬದವರು ಸಹ ಆರೋಗ್ಯವಂತರಾಗಿರಬಹುದು. ಅನಾವಶ್ಯಕವಾಗಿ ಹಣ ಮತ್ತು ಸಮಯದ ವ್ಯಯವಿಲ್ಲದೆಯೇ ಮನೆಯಲ್ಲೇ ಚಿಕ್ಕಪುಟ್ಟ ಮದ್ದನ್ನು ತಯಾರಿಸಿ ಅದನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ವೃದ್ಧಿಸಬಹುದು .ಆಯುರ್ವೇದ ಹಾಗೂ ಮುಂತಾದ ಭಾರತದಲ್ಲೇ ಜನ್ಮಿಸಿದಂತಹ ಚಿಕಿತ್ಸಾ ಪದ್ಧತಿಗಳು ಇಂತಹ ಮನೆಮದ್ದನ್ನೇ ಉಪಯೋಗಿಸಿಕೊಂಡು ಪರಿಹಾರವನ್ನು ಒದಗಿಸುತ್ತವೆ. ಮನೆಮದ್ದುಗಳ ಮೇಲೆ ಈ ಎಲ್ಲಾ ಚಿಕಿತ್ಸೆಯ ಮೂಲವೂ ನಿಂತಿದೆ .ಹೀಗಿರುವಾಗ ಕೈಯಲ್ಲಿ ಬೆಣ್ಣೆಯಲ್ಲಿಟ್ಟುಕೊಂಡು ತುಪ್ಪಕ್ಕೆ ಅಲೆದಾಡುವವರ ಹಾಗೆ ಸಾವಿರಾರು ಔಷಧಗಳನ್ನು ಬಳಸಿ ,ಸೇವಿಸಿ ,ತಾಳ್ಮೆ ಮತ್ತು ಹಣವನ್ನು ಕಳೆದುಕೊಳ್ಳುವ ಬದಲು ಹೀಗೆ ಮನೆಯಲ್ಲಿ ಸಿಗುವ ಜೀರಿಗೆ ಅಂತ ಹತ್ತು ಹಲವು ವಸ್ತುಗಳನ್ನು ಉಪಯೋಗಿಸಿ ಔಷಧವನ್ನು ನಾವೇ ತಯಾರಿಸಬಹುದು. ಕಾಯಿಲೆ ಬಂದಮೇಲೆ ಅದಕ್ಕೆ ಔಷಧವನ್ನು ತೆಗೆದುಕೊಳ್ಳುವ ಬದಲು ದಿನನಿತ್ಯ ಇಂತಹ ಪದಾರ್ಥಗಳ ಸೇವನೆಯಿಂದ ಅನಾರೋಗ್ಯದಿಂದ ನಮ್ಮ ದೇಹವನ್ನು ಹಾಗೂ ಮನಸ್ಸನ್ನು ದೂರವಿಡಬಹುದು .ಇಂತಹ ಮನೆಮದ್ದುಗಳು ನಮ್ಮ ಭಾರತ ದೇಶದಲ್ಲಿ ಬೇಕಾದಷ್ಟು ಇದೆ. ಇವನ್ನೆಲ್ಲ ಸದುಪಯೋಗಪಡಿಸಿಕೊಳ್ಳುವ ಅವಕಾಶ ಮತ್ತು ನಮ್ಮ ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.


Share this with your friends...

3 thoughts on “ಜೀರಿಗೆಯ ಔಷಧಿ ಗುಣಗಳು”

  1. Hi! Do you know if they make any plugins to assist with SEO?
    I’m trying to get my blog to rank for some targeted keywords but I’m not seeing very good success.
    If you know of any please share. Kudos! You can read similar text here:
    Escape room

Leave a Comment

Your email address will not be published. Required fields are marked *