ಬೆಳ್ಳುಳ್ಳಿಯ ಔಷಧಿ ಗುಣಗಳು

Share this with your friends...

ಬೆಳ್ಳುಳ್ಳಿಯ ಬಳಕೆಯು ಕೇವಲ ಭಾರತದಲ್ಲಿಲ್ಲದೆ ವಿಶ್ವದ ಎಲ್ಲೆಡೆ ವ್ಯಾಪಿಸಿದೆ. ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ರುಚಿಕಾರಕವಾಗಿ ಬಳಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಕೋನದಿಂದ ಇದರ ಪ್ರಭಾವ ಬಹಳಷ್ಟಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಬೆಳ್ಳುಳ್ಳಿಯ ಪ್ರಮುಖವಾದ ಕಾರ್ಯವೆಂದರೆ ಸಾಮಾನ್ಯವಾಗಿ ಶೀತ ಕೆಮ್ಮು ಮುಂತಾದವುಗಳಿಂದ ರಕ್ಷಣೆಯನ್ನು ಒದಗಿಸುವುದು. ಅಷ್ಟೇ ಅಲ್ಲದೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ತಗ್ಗಿಸಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಬೆಳ್ಳುಳ್ಳಿಯೂ ಈರುಳ್ಳಿಯ ಜಾತಿಗೆ ಸೇರಿದಂತಹ ಒಂದು ಸಸ್ಯವಾಗಿದೆ. ವಿಶ್ವದಾದ್ಯಂತ ಬೆಳೆಯುವಂತಹ, ಅಡುಗೆಯಲ್ಲಿ ಬಳಸುವ, ಒಂದು ಪ್ರಸಿದ್ಧ ಪದಾರ್ಥವೆಂದರೆ ಅದು ಬೆಳ್ಳುಳ್ಳಿ. ಅದ್ಭುತ ರುಚಿ ಮತ್ತು ಅಡುಗೆಗೆ ನೀಡುವ ಸುವಾಸನೆಯೇ ಇದರ ಪ್ರಸಿದ್ಧಿಗೆ ಮುಖ್ಯ ಕಾರಣ ಹಿಂದಿನ ಕಾಲದಿಂದಲೂ ಬಹಳ ಚಾಲ್ತಿಯಲ್ಲಿರುವಂತ ಅಡುಗೆಯ ಪದಾರ್ಥವಿದು. ನಮ್ಮ ಹಿಂದಿನವರು ಸಹ ಕೇವಲ ಅಡುಗೆಗೆ ಇದನ್ನು ಬಳಸದೆ ಇದರ ಔಷಧೀಯ ತತ್ವವನ್ನು ಅರಿತು ಮನೆ ಮದ್ದಾಗಿ ಬಳಸಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲದೆ ಚೀನಿಯರು ,ರೋಮನ್ನರು ಅಷ್ಟೇ ಯಾಕೆ ಗ್ರೀಕರು ಸಹ ಬೆಳ್ಳುಳ್ಳಿಯನ್ನು ಆಹಾರ ಪದಾರ್ಥವಾಗಿಯೂ ಮತ್ತು ಔಷಧಿ ಪದಾರ್ಥವಾಗಿಯೂ ಬಳಸಿದ್ದಾರೆ.

ಬೆಳ್ಳುಳ್ಳಿ ಹೇಗೆ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಯುವುದಾದರೆ ಬೆಳ್ಳುಳ್ಳಿಯನ್ನು ಅಗಿಯುವಾಗ, ಹೆಚ್ಚುವಾಗ ಅಥವಾ ಜಜ್ಜುವಾಗ ಸಲ್ಪರ್ ಸಂಯುಕ್ತ ಒಂದು ಬಿಡುಗಡೆಯಾಗುತ್ತದೆ ಈ ಸಂಯುಕ್ತದ ಕಾರಣದಿಂದಲೇ ಬೆಳ್ಳುಳ್ಳಿಯನ್ನು ಸೇವಿಸಿದಾಗ ಬಹಳಷ್ಟು ಆರೋಗ್ಯಕರವಾದ ಪ್ರಭಾವವು ನಮ್ಮ ದೇಹದ ಮೇಲಾಗುತ್ತದೆ. ಸಲ್ಫರ್ ಅಂಶವು ನಮ್ಮ ದೇಹದ ಜೀರ್ಣಾಂಗವನ್ನು ಪ್ರವೇಶಿಸಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಬೆಳ್ಳುಳ್ಳಿಯು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ .ಸಾಮಾನ್ಯ ಜ್ವರ, ಶೀತ, ಕೆಮ್ಮು, ನೆಗಡಿ ಮುಂತಾದವುಗಳನ್ನು ಸಹ ದೂರಕ್ಕೆ ಅಟ್ಟುತ್ತದೆ. ವಿಜ್ಞಾನಿಗಳು ಹೇಳುವಂತೆ ಬೆಳ್ಳುಳ್ಳಿಯ ಅಂಶವೊಂದು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಗೆ ವೈರಸ್ ನ ವಿರುದ್ಧ ಹೋರಾಡುವ ಶಕ್ತಿಯು ಇರುವುದರಿಂದ ನಮ್ಮ ದೇಹಕ್ಕೆ ಯಾವುದೇ ರೋಗಗಳು ಬರದಂತೆ ಕಾಪಾಡುತ್ತದೆ . ಹೀಗಾಗಿ ದಿನನಿತ್ಯ ಬೆಳ್ಳುಳ್ಳಿಯ ಸೇವನೆಯಿಂದಾಗಿ ನಾವು ಆರೋಗ್ಯಕರವಾಗಿರಬಹುದು. ಹಾಗೆಯೇ ಚಿಕ್ಕಚಿಕ್ಕ ನೆಗಡಿ, ಜ್ವರಗಳಿಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಮನೆ ಮದ್ದನ್ನು ತಯಾರಿಸಿ ಸೇವಿಸಬಹುದು. ಇದರಿಂದಾಗಿ ಮಕ್ಕಳು, ವಯಸ್ಕರು, ವೃದ್ಧರು ಹುಷಾರು ತಪ್ಪುವುದು ಕಡಿಮೆಯಾಗುತ್ತದೆ. ಇಂದಿನ ಕಾಲದಲ್ಲಿ ಸಮಯಕ್ಕಿರುವ ಪ್ರಾಮುಖ್ಯತೆ ಬೇರೆ ಯಾವುದಕ್ಕೂ ಇಲ್ಲ. ಹೀಗಾಗಿ ಆರೋಗ್ಯವಂತರಾಗಿ ನಮ್ಮ ದಿನನಿತ್ಯದ ಕೆಲಸವನ್ನ ಯಾವುದೇ ಅಡೆತಡೆಗಳಿಲ್ಲದೆ ಮಾಡುವಲ್ಲಿ ಬೆಳ್ಳುಳ್ಳಿಯೂ ಸಹಾಯ ಮಾಡುತ್ತದೆ.

ಹೃದಯ ರೋಗ ನಿಯಂತ್ರಣಕ್ಕೆ ಬೆಳ್ಳುಳ್ಳಿ ತುಂಬಾ ಉಪಕಾರಿ

ಇತ್ತೀಚಿನ ದಿನಗಳಲ್ಲಿ ಸಾವು ಸಂಭವಿಸುತ್ತಿರುವವರಲ್ಲಿ ಯುವಕರು ಅಥವಾ ಮಕ್ಕಳೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣ ಹೆಚ್ಚಾಗುತ್ತಿರುವ ಹೃದಯ ರೋಗಗಳು. ಹೃದಯದ ಆಘಾತ ಮತ್ತು ಹೃದಯದ ಸ್ಟ್ರೋಕ್ ಮುಂತಾದ ರೋಗಗಳಿಂದ ಅಕಾಲಿಕ ಮರಣ ಹೊಂದುತ್ತಿರುವವರೇ ಜಾಸ್ತಿ. ಈ ವರದಿಯನ್ನ ಸ್ವತಹ ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿದೆ. ಇಂತಹ ಹೃದಯ ಸಂಬಂಧಿ ರೋಗಗಳಿಗೆ ಕಾರಣ ಅನುವಂಶಿಯತೆ ಅದರ ಜೊತೆಗೆ ನಮ್ಮ ಆಧುನಿಕ ಆಹಾರ ಪದ್ಧತಿ. ಪಶ್ಚಿಮಾತ್ಯ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತದಲ್ಲಿ ಕೊಬ್ಬಿನ ಅಂಶವು ಜಾಸ್ತಿಯಾಗುತ್ತದೆ. ಹೀಗೆ ಜಾಸ್ತಿಯಾದ ಕೊಬ್ಬಿನ ಅಂಶವು ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ರಕ್ತ ಸಂಚಾರದಲ್ಲಿ ಅಡೆತಡೆಗಳು ಉಂಟಾದಲ್ಲಿ ಹೃದಯಕ್ಕೆ ಅದು ವಿಪರೀತವಾದಂತ ಪರಿಣಾಮವನ್ನು ಬೀರುತ್ತದೆ. ಇದರಿಂದ ಬಹಳಷ್ಟು ಹೃದಯದ ರೋಗಗಳು ಬರುತ್ತವೆ .ಇದಕ್ಕೆ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ ಹೆಚ್ಚಿನದಾಗಿ ಹೃದಯದ ಆಘಾತದಿಂದ ನಾವು ಸಂಭವಿಸುತ್ತದೆ. ಹೀಗೆ ನಮ್ಮನ್ನು ಹೆಮ್ಮಾರಿಯಾಗಿ ಕಾಡುವ ಹೃದಯ ರೋಗವನ್ನು ತಡೆಗಟ್ಟಲು ಬೆಳ್ಳುಳ್ಳಿಯು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಒಳ್ಳೆಯ ಕೊಬ್ಬಿನಂಶಕ್ಕೆ ಯಾವುದೇ ತೊಂದರೆ ಆಗದಿದ್ದರೂ ಕೊಲೆಸ್ಟ್ರಾಲ್ ಹೆಚ್ಚಳವು ತಗ್ಗುತ್ತದೆ .ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ.//

ರಕ್ತದೊತ್ತಡಕ್ಕೆ ಬೆಳ್ಳುಳ್ಳಿ ಹೇಳಿ ಮಾಡಿಸಿದ ಮನೆಮದ್ದು

ವೈಜ್ಞಾನಿಕ ಸಂಶೋಧನೆಯ ಪ್ರಕಾರ ಬೆಳ್ಳುಳ್ಳಿಯೂ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ಬೆಳ್ಳುಳ್ಳಿಯಲ್ಲಿ ಕಂಡುಬರುವಂತಹ ಅಲಿಸಿನ್ ಎಂಬ ಅಂಶವು ರಕ್ತ ಒತ್ತಡವನ್ನು ಹೆಚ್ಚು ಮಾಡುವಂತಹ ಅಂಜಿಯೋಟೆನ್ಸನ್ ಎನ್ನುವಂತಹ ಹಾರ್ಮೋನ ಉತ್ಪತ್ತಿಯನ್ನು ಕಡಿಮೆ ಮಾಡುವುದರ ಮೂಲಕ ರಕ್ತನಾಳಗಳನ್ನು ಸಡಿಲಪಡಿಸಿ, ರಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ರಕ್ತದ ಒತ್ತಡವು ಕಡಿಮೆಯಾಗುತ್ತದೆ.

ಮನಸಿನ ಒತ್ತಡ ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯಕ

ಬೆಳ್ಳುಳ್ಳಿಯ ಒಂದು ಉತ್ಕರ್ಷಣ ನಿರೋಧಿಯಾಗಿದೆ. ಈಗಿನ ಜೀವನ ಶೈಲಿಯಲ್ಲಿ ಒತ್ತಡವಿಲ್ಲದಿರುವವರು ಯಾರು ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಒತ್ತಡವನ್ನು ಅನುಭವಿಸಿ ಮಾನಸಿಕ ಅಸ್ವಸ್ಥತೆಗೆ ಗುರಿಯಾಗುವವರ ಸಂಖ್ಯೆ ಕಡಿಮೆ ಏನೂ ಇಲ್ಲ. ವಿಶ್ವದಲ್ಲಿಡೆ ಇಂತಹ ಮಾನಸಿಕ ರೋಗಿಗಳು ಹೆಚ್ಚಾಗುತ್ತಲೇ ಇದ್ದಾರೆ .ಮಾನಸಿಕ ಖಿನ್ನತೆ, ಒತ್ತಡ ಇವುಗಳಿಗೆ ಬಲಿಯಾಗಿ ಜೀವನದ ಜೊತೆಗೆ ಜೀವವನ್ನೇ ನಾಶ ಮಾಡಿಕೊಳ್ಳುವವರು ಇದ್ದಾರೆ. ಹೀಗಿರುವಾಗ ಬೆಳ್ಳುಳ್ಳಿಯಲ್ಲಿರುವಂತಹ ಒಂದು ಉತ್ಕರ್ಷಣ ನಿರೋಧಿ ಅಂಶವು ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ನಮ್ಮ ಜೀವನವನ್ನು ಸುಗಮವಾಗಿಸುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯನ ಆರೋಗ್ಯ ಸಮತೋಲನವನ್ನು ಹೊಂದುತ್ತದೆ

ಮನುಷ್ಯನ ಆಯಸ್ಸು ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಸಹಾಯಕ

ಬೆಳ್ಳುಳ್ಳಿಯು ನಿಮ್ಮ ಅಡುಗೆಯ ಸ್ವಾಧವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದರೆ ನಂಬುತ್ತೀರಾ? ಇದಕ್ಕೆ ಪುರಾವೆ ಇದೆ. ಚೀನಾ ದೇಶದ ವಿಜ್ಞಾನಿಗಳು ಸಂಶೋಧನೆ ನಡೆಸಿರುವ ಪ್ರಕಾರ ಬೆಳ್ಳುಳ್ಳಿಯು ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ಹೃದಯ ರೋಗಗಳನ್ನು ಕಡಿಮೆ ಮಾಡುವುದು ಈ ಎಲ್ಲಾ ಅಂಶವನ್ನು ಹೊಂದಿರುವುದರಿಂದ ನಾವು ಅನಾರೋಗ್ಯಕ್ಕೆ ಇಡಾಗುವುದನ್ನು ತಪ್ಪಿಸುತ್ತದೆ. ಚೀನಿಯರ ಸಂಶೋಧನೆಯ ಪ್ರಕಾರ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸಿದ ಜನರು ಬೆಳ್ಳುಳ್ಳಿಯನ್ನು ಸೇವಿಸದ ಜನರಿಗಿಂತ ಹೆಚ್ಚು ಕಾಲ ಬದುಕಿದ್ದಾರಂತೆ. ಹೀಗಿದ್ದ ಮೇಲೆ ನಮ್ಮ ಆರೋಗ್ಯ ಮತ್ತು ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಅವಕಾಶ ಸಿಕ್ಕರೆ ಯಾರಾದರೂ ಬಿಡುವುದುಂಟೆ! ಅಷ್ಟೇ ಅಲ್ಲ ಕೆಲವೊಂದು ಸೋಂಕುಗಳಿಂದಲೂ ಕೂಡ ಬೆಳ್ಳುಳ್ಳಿಯು ನಮ್ಮನ್ನು ರಕ್ಷಿಸುವುದು ಉಂಟು .ಈ ಎಲ್ಲಾ ಕಾರಣಗಳಿಂದ ಒಬ್ಬ ಮನುಷ್ಯನ ಜೀವತ್ತಾವಧಿಯ ವಿಸ್ತರಣೆಗೆ ಬೆಳ್ಳುಳ್ಳಿಯು ಸಹಾಯ ಮಾಡುತ್ತದೆ ಮತ್ತು ರೋಗಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ ಆಯಾಸವಾಗುವುದನ್ನು ಕಡಿಮೆ ಮಾಡುತ್ತದೆ

ಅನಾದಿಕಾಲದಿಂದಲೂ ಮಾನವನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯ ಬಳಕೆ ಹೆಚ್ಚಾಗಿ ಕಂಡು ಬಂದಿದೆ. ನಮ್ಮ ಪೂರ್ವಜರು ತಮ್ಮ ಆಯಾಸವನ್ನು ನೀಗಿಸಲು ಅಥವಾ ಹೆಚ್ಚಿನ ದೈಹಿಕ ಶ್ರಮ ವಹಿಸುವಲ್ಲಿ ಆಯಾಸವಾಗದಿರಲು ಬೆಳ್ಳುಳ್ಳಿಯ ಸೇವನೆಯ ಮೊರೆ ಹೋಗಿದ್ದಾರೆ. ಗ್ರೀಕರಂತೂ ಆಟ ಓಟಗಳ ಸ್ಪರ್ಧೆಯಲ್ಲಿ ಜಯಶಾಲಿಗಳಾಗಲು ಬೆಳ್ಳುಳ್ಳಿಯ ಸೇವನೆಯನ್ನ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ನೀವು ಹೆಚ್ಚಿನ ದೈಹಿಕ ಶ್ರಮ ವಹಿಸುವವರಾಗಿದ್ದರೆ ಅಥವಾ ವ್ಯಾಯಾಮ ಮಾಡುವವರಾಗಿದ್ದರೆ ಬೆಳ್ಳುಳ್ಳಿಯ ಸೇವನೆಯು ನಿಮ್ಮ ಆಯಾಸವನ್ನು ತಗ್ಗಿಸಿ ಇನ್ನಷ್ಟು ಚೈತನ್ಯವನ್ನು ತುಂಬಲು ಸಹಾಯ ಮಾಡುತ್ತದೆ. ಏಕೆಂದರೆ ಬೆಳ್ಳುಳ್ಳಿಯ ಸೇವನೆಯು ವ್ಯಾಯಾಮದ ಸಂದರ್ಭದಲ್ಲಿ ಹೆಚ್ಚಿನ ಆಮ್ಲಜನಕದ ಪೂರೈಕೆಗೆ ಸಹಾಯ ಮಾಡುತ್ತದೆ.

ಈಗಿನ ಆಧುನಿಕ ಆಹಾರ ಪದ್ಧತಿಯಲ್ಲಿ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದು ಒಂದು ದೊಡ್ಡ ಸವಾಲಾಗಿ ಉಳಿದಿದೆ. ನಾವು ಸೇವಿಸುತ್ತಿರುವ ಆಹಾರದಲ್ಲಿರುವ ಒಳ್ಳೆಯ ಅಂಶಗಳಾವುವು ,ಕೆಟ್ಟ ಅಂಶಗಳಾವುವು ಎಂಬುದೇ ನಮಗೆ ತಿಳಿಯದಾಗಿದೆ .ಎಷ್ಟು ಆಹಾರಗಳು ನೋಡಲು ಸುಂದರವಾಗಿ ಕಂಡರೂ, ನೋಡುವ ಕಣ್ಣಿಗೂ, ತಿನ್ನುವ ನಾಲಿಗೆಗೂ ರುಚಿಸಿದರು, ಅರಗಿಸುವ ದೇಹಕ್ಕೆ ರುಚಿಸಲಾರದು. ಏಕೆಂದರೆ ಅವುಗಳಲ್ಲಿರುವ ರಾಸಾಯನಿಕಗಳು ನಮ್ಮ ದೇಹಕ್ಕೆ ಕುತ್ತು ತರುತ್ತವೆ. ಹೀಗೆ ದೇಹಕ್ಕೆ ಕುತ್ತು ತರುವಂತ ಹಲವಾರು ಅಂಶಗಳನ್ನು ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಹೊಡೆದು ಹಾಕುತ್ತವೆ. ಮತ್ತು ಅವುಗಳಿಂದ ನಮ್ಮ ದೇಹಕ್ಕೆ ಆಗುವ ತೊಂದರೆಯನ್ನು ತಪ್ಪಿಸುತ್ತವೆ. ಅಷ್ಟೇ ಅಲ್ಲದೆ ಬೆಳ್ಳುಳ್ಳಿಯು ನಮ್ಮ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ನಾವು ಪ್ರತಿದಿನವೂ ಎರಡು ಗ್ರಾಮಿನಷ್ಟು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ನಮ್ಮ ಮೂಳೆಯ ಆರೋಗ್ಯ ವೃದ್ಧಿಸುತ್ತದೆ.

ಸ್ಥೂಲಕಾಯ ಸಮಸ್ಯೆಗೆ ಬೆಳ್ಳುಳ್ಳಿ ಇಂದ ಪರಿಹಾರ

ನಮ್ಮ ದಿನನಿತ್ಯದ ಆಹಾರದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಬೆಳ್ಳುಳ್ಳಿಯ ಬಳಕೆಯನ್ನು ಮಾಡುವುದರಿಂದ ಬೊಜ್ಜುತನವೂ ನಿವಾರಣೆ ಆಗುತ್ತದೆ. ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಹೀಗೆ ಶೇಖರಣೆ ಆದಂತ ಬೊಜ್ಜನ್ನು ದೂರ ಮಾಡಲು ಬೆಳ್ಳುಳ್ಳಿಯ ಉಪಯೋಗ ಒಳ್ಳೆಯದು. ಇಂತಹ ಬೊಜ್ಜನ್ನು ಹೋಗಲಾಡಿಸಲು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಸಳು ಹುರಿದ ಬೆಳ್ಳುಳ್ಳಿಯನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಕೇವಲ ಬೊಜ್ಜು ಮಾತ್ರವಲ್ಲದೆ ದೇಹದ ಇನ್ನಿತರ ಸಮಸ್ಯೆಗಳು ಪರಿಹಾರವಾಗುತ್ತದೆ.

ಶೀತ, ಕೆಮ್ಮು, ನೆಗಡಿ ಇಂತಹ ಹಲವಾರು ಸಮಸ್ಯೆಗಳು ಬಾಧಿಸುತ್ತಿದ್ದಲ್ಲಿ ಸುಟ್ಟ ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಮಲಗುವ ಮುನ್ನ ಸೇವಿಸುವುದರಿಂದ ಶೀಘ್ರವಾಗಿ ಪರಿಹಾರವನ್ನು ಕಾಣಬಹುದು.

ಬೆಳ್ಳುಳ್ಳಿಯು ನಮ್ಮ ಕಣ್ಣಿನ ಆರೋಗ್ಯದ ಮೇಲೆಯೂ ಪ್ರಭಾವ ಬೀರುತ್ತದೆ. ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆಂಟಿ ಮೈಕ್ರೋಬಿಯಲ್ ನಂತಹ ಅಂಶಗಳನ್ನು ಹೊಂದಿರುವ ಇದು ನಮ್ಮ ಕಣ್ಣಿನ ದೃಷ್ಟಿಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಹೀಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬೆಳ್ಳುಳ್ಳಿಯೂ ಮೂತ್ರಪಿಂಡದ ಸೋಂಕು ಅಥವಾ ಯುಟಿಐ ಅಪಾಯವನ್ನು ಕಡಿಮೆ ಮಾಡುತ್ತದೆ. ಮಹಿಳೆಯರು ಮತ್ತು ಮಕ್ಕಳು ಈ ರೀತಿಯಾಗಿ ಬೆಳ್ಳುಳ್ಳಿಯ ಸೇವನೆ ಮಾಡುವುದು ಅತ್ಯಗತ್ಯವಾಗಿದೆ. ಹೀಗೆ ಬೆಳ್ಳುಳ್ಳಿಯಿಂದ ಅದರಲ್ಲಿಯೂ ಹಸಿಯ ಬೆಳ್ಳುಳ್ಳಿ ತಿನ್ನುವುದರಿಂದ ಬೇಕಾದಷ್ಟು ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಮುಖ್ಯವಾಗಿ ನಮ್ಮ ಪೂರ್ವಜರು ಹೇಳಿಕೊಟ್ಟ ರೀತಿಯಲ್ಲಿ ಅದನ್ನು ಸೇವಿಸುವುದರಿಂದ ಸಾಮಾನ್ಯವಾಗಿ ಶೀತ ಜ್ವರಗಳನ್ನು ಕಡಿಮೆ ಮಾಡುವುದರೊಂದಿಗೆ ಇನ್ನೂ ಹತ್ತು ಹಲವು ಅನಾರೋಗ್ಯ ಹೆಚ್ಚಿಸುವ ಅಂಶಗಳ ವಿರುದ್ಧ ಬೆಳ್ಳುಳ್ಳಿ ಹೋರಾಡುತ್ತದೆ.

“ನಾವು ತಿನ್ನುವ ಆಹಾರವೇ ಔಷಧವಾಗ ಬೇಕೆ ಹೊರತು ತೆಗೆದುಕೊಳ್ಳಬೇಕಾದ ಔಷಧವೇ ಆಹಾರವಾಗಬಾರದು” ಇದು ಪುರಾತನ ಗ್ರೀಕ್ ದೈಹಿಕ ತಜ್ಞ ಹಿಪೋಕ್ರೇಟಸ ಹೇಳಿದಂತಹ ಮಾತುಗಳು. ಈ ಮಾತುಗಳು ಅಕ್ಷರಶಹ ಸತ್ಯವಾಗಿದೆ. ಈಗಿನ ಕಾಲದಲ್ಲಿ ಸಂತುಷ್ಟ ಆಹಾರವನ್ನು ತೆಗೆದುಕೊಳ್ಳುವ ಗೋಜಿಗೆ ಯಾರು ಹೋಗುವುದಿಲ್ಲ. ಸುಲಭವಾಗಿ ಸಿಗುವಂತಹ ಅನಾರೋಗ್ಯ ಕಾರಕವಾದ ಆಹಾರ ಪದ್ಧತಿಯನ್ನೇ ಅನುಸರಿಸುತ್ತೇವೆ. ಸಮಯದ ಅಭಾವದಿಂದಲೂ ಅಥವಾ ಜ್ಞಾನದ ಕೊರತೆಯಿಂದಲೂ ನಮ್ಮ ಮನೆಗಳಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಅಡುಗೆ ಮಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ಹೀಗೆ ಸುಲಭವಾಗಿ ಸಿಗುವಂತಹ ದಿಡೀರ್ ಆಹಾರಗಳು ನಮ್ಮ ದೇಹದ ಮೇಲು ದಿಡೀರ್ ಪರಿಣಾಮವನ್ನು ಬೀರುತ್ತದೆ. ಈ ಪರಿಣಾಮದಿಂದ ನಮ್ಮ ದೇಹದ ಕಾರ್ಯಕ್ಷಮತೆ ಕುಂದಿ ಹೋಗುತ್ತದೆ. ಹೀಗೆ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಗ್ಗಿಸುವ ಆಶಯವಿದ್ದಲ್ಲಿ ಮನೆ ಮದ್ದನ್ನೇ ಬಳಸುವುದು ಬಹಳ ಒಳ್ಳೆಯದು.

ಖರ್ಚಿಲ್ಲದೆ ವೆಚ್ಚವಿಲ್ಲದೆ ಸಿಗುವ ಆಹಾರ ಪದಾರ್ಥವೇ ಮನೆಯ ಮದ್ದಾಗಿದೆ. ಇದು ನಮ್ಮ ಪುರಾತನ ಸಂಸ್ಕೃತಿಯ ಹೆಮ್ಮೆಯಾಗಿದೆ. ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳೇ ಔಷಧೀಯ ಗುಣಗಳನ್ನು ಹೊಂದಿರುವಾಗ ಇತರ ಔಷಧಿಗಳು ಯಾಕೆ ಬೇಕು? ಆದರೆ ಈ ಔಷಧ ಪದಾರ್ಥಗಳನ್ನು ಉಪಯೋಗಿಸುವ ಸರಿಯಾದ ರೀತಿಯನ್ನು ನಾವು ತಿಳಿದುಕೊಳ್ಳಬೇಕು .”ಹೆಚ್ಚಾದರೆ ಅಮೃತವೂ ವಿಷ “ಎಂಬುವಂತೆ ಯಾವುದನ್ನಾದರೂ ಆಗಲಿ ಒಂದು ಮಿತಿಯಲ್ಲಿ ತೆಗೆದುಕೊಂಡಾಗ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿನಿತ್ಯವೂ ಬೆಳ್ಳುಳ್ಳಿಯ ಸೇವನೆಯಿಂದಾಗಿ ಅಪಾರ ಪ್ರಮಾಣದಲ್ಲಿ ಲಾಭಗಳು ಒದಗುತ್ತವೆ. ಇದನ್ನು ಇತಿ ಮಿತಿಯಿಂದ ಸೇವಿಸುವುದರಿಂದ ದೇಹಕ್ಕೆ ಆಗುವ ಎಲ್ಲಾ ಹಾನಿಗಳಿಂದ ಬಚಾವಾಗಬಹುದು.

ಅದ್ಭುತವಾದ ಅಂಶಗಳಿರುವ ಪದಾರ್ಥಗಳು ನಮ್ಮ ಅಡುಗೆಯ ಮನೆಯಲ್ಲೇ ಸಿಗುತ್ತವೆ. ಇದನ್ನೆಲ್ಲಾ ಬಳಸಿಕೊಳ್ಳುವ ಅವಕಾಶದ ಜೊತೆಗೆ ಹೇಗೆ ಬಳಸಿಕೊಳ್ಳುವುದು ಎನ್ನುವ ಜ್ಞಾನವು ಮುಖ್ಯ. ನಮ್ಮಲ್ಲಿರುವ ಈ ಜ್ಞಾನವನ್ನು ಇತರರಿಗೆ ಮುಟ್ಟಿಸುವ ಜವಾಬ್ದಾರಿಯು ನಮ್ಮದಾಗಿದೆ. ಅದರೊಂದಿಗೆ ಪುರಾತನ ಸಂಸ್ಕೃತಿಯ ಔಷಧ ಪದಾರ್ಥಗಳನ್ನು ಇಡೀ ಜಗತ್ತಿಗೆ ಪರಿಚಯಿಸುವ ಕೆಲಸವು ಆಗಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ಈ ಎಲ್ಲಾ ಔಷದ ಪದಾರ್ಥಗಳ ಲಾಭವು ದೊರಕಬೇಕಾದರೆ ಅವರಲ್ಲಿ ಇದರ ಬಗ್ಗೆ ಕಾಳಜಿ ಮೂಡಿಸುವುದು ಅಗತ್ಯ. ಕೇವಲ ಕಾಳಜಿ ಮಾತ್ರವಲ್ಲದೆ ಇದನ್ನು ಉಪಯೋಗಿಸುವ ಬಗೆಗಿನ ಜ್ಞಾನವನ್ನು ಮೂಡಿಸುವುದು ಅಗತ್ಯವಾಗಿದೆ. ನಾವು ನಮ್ಮ ಹಿರಿಯರಿಂದ ಈ ಜ್ಞಾನವನ್ನು ಪಡೆದಂತೆ ನಮ್ಮ ಮುಂದಿನ ಪೀಳಿಗೆಯ ನಮ್ಮಿಂದ ಜ್ಞಾನವನ್ನು ಪಡೆದು ಆರೋಗ್ಯಕರವಾದ ಜೀವನವನ್ನು ನಡೆಸಲಿದೆ. ಪ್ರತಿಯೊಂದು ದೈಹಿಕ ಮಾನಸಿಕ ಸಮಸ್ಯೆಗೂ ಆಂಗ್ಲ ಔಷಧೀಯ ಮೊರೆ ಹೋಗದೆ ನಮ್ಮಲ್ಲೇ ಸುಲಭವಾಗಿ ಸಿಗುವ ಸಸ್ಯಗಳು ಆಹಾರ ಪದಾರ್ಥಗಳನ್ನು ಬಳಸಿಕೊಂಡು ನಾವೇ ಔಷಧವನ್ನು ತಯಾರಿಸಿ ಬಳಸಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬೆಳೆಸಿಕೊಂಡು ಔಷಧಿಗಳನ್ನು ತಯಾರಿಸುವ ಯಾವುದೇ ಅವಶ್ಯಕತೆಯೂ ಇಲ್ಲ. ಈ ಎಲ್ಲಾ ಪದಾರ್ಥಗಳೇ ಔಷದಿ ಗುಣವನ್ನು ಹೊಂದಿರುವುದರಿಂದ ಸರಿಯಾದ ಪ್ರಮಾಣದಲ್ಲಿ ಅವುಗಳನ್ನು ಸೇವಿಸಬೇಕು.


Share this with your friends...

Leave a Comment

Your email address will not be published. Required fields are marked *