ತೆಂಗಿನಕಾಯಿಯ ಔಷಧಿ ಗುಣಗಳು

Share this with your friends...

ಎಲ್ಲರ ಮನೆಯಲ್ಲೂ ದಿನನಿತ್ಯ ಬಳಸುವ ಅಡುಗೆಯ ಪದಾರ್ಥಗಳಲ್ಲಿ ಒಂದು “ತೆಂಗು”. ಸಾಂಬಾರ್ ಇಂದ ಹಿಡಿದು ಪಾಯಸ, ಕಜ್ಜಾಯಗಳ ತಯಾರಿಕೆಗೂ ಇದು ಅತ್ಯಗತ್ಯ. “ ಇಂಗು ತೆಂಗು ಕೊಟ್ಟರೆ ಮಂಗನೂ ಅಡುಗೆ ಮಾಡುತ್ತದೆ “ ಎಂಬ ಗಾದೆ ಮಾತಿನಂತೆ ತೆಂಗು ಇಲ್ಲದೆ ಅಡುಗೆಯಿಲ್ಲ.ತೆಂಗಿನಕಾಯಿಯಿಂದ ಬಹಳಷ್ಟು ಉಪಯೋಗವಿದೆ. ತೆಂಗಿನ ತಿರುಳು ತಿನ್ನಲು ಬಲು ಸೊಗಸು. ತೆಂಗಿನ ಹಾಲು (ಎಳನೀರು) ಕುಡಿದರೆ ಬೇಸಿಗೆಯಲ್ಲಿ ತಂಪು ಅನುಭವ ನೀಡುತ್ತದೆ. ತೆಂಗಿನ ಕಾಯಿಯನ್ನು ತುರಿದು ಬಹಳಷ್ಟು ಅಡುಗೆಗೆ ಬಳಸುವುದುಂಟು. ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ದೇಹದ ತಾಪ ನೀಗಿಸಲು ತೆಂಗಿನ ಕಾಯಿಯ ಐಸ್ ಕ್ರೀಮ್ ಕೂಡ ಸಿಗುವುದಿದೆ. ಕೇವಲ ಅಡುಗೆ, ತಿಂಡಿ, ತಿನಿಸುಗಳು ಮಾತ್ರವಲ್ಲದೆ ತೆಂಗಿನ ಕಾಯಿಯಿಂದ ಬಹಳಷ್ಟು ದೈಹಿಕ ತೊಂದರೆಗಳ ನಿವಾರಣೆಯು ಆಗುತ್ತದೆ.

ತೆಂಗಿನ ಕಾಯಿಯಲ್ಲಿ ಬೇಕಾದಷ್ಟು ಆಂಟಿ ಬ್ಯಾಕ್ಟೀರಿಯಲ್ ,ಆಂಟಿ ವೈರಲ್ ಮತ್ತು ಆಂಟಿ ಫಂಗಲ್ ನಂತಹ ಅಂಶಗಳು ಇರುವುದರಿಂದ ಇವುಗಳು ಹಲವಾರು ರೋಗಗಳ ವಿರುದ್ಧ ಹೋರಾಡಲು ಮಾನವನ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ತೆಂಗಿನಕಾಯಿ ಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವುದು ಎಂದರೆ ಅದರ ತಿರುಳು. ಆ ತಿರುಳಿನಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಸತು ಮುಂತಾದಂತಹ ಪೋಷಕಾಂಶಗಳಿವೆ. ಇವೆಲ್ಲವೂ ಆರೋಗ್ಯಕರ ಕೊಬ್ಬಿನ ಅಂಶಗಳಾಗಿದ್ದು, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಾಗಿವೆ. ಹೀಗೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ, ತೆಂಗಿನಕಾಯಿ ಸೇವಿಸುವುದರಿಂದ ಅದರಿಂದ ಲಭಿಸುವ ವಿಟಮಿನ್ ಸಿ, ಪೊಲೆಟ್ ಮುಂತಾದವುಗಳು ಸಹಾಯ ಮಾಡುತ್ತವೆ. ವಿಟಮಿನ್ ಇ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಹೇರಳವಾಗಿ ದೊರಕುವ ತೆಂಗಿನಕಾಯಿಯಿಂದ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ. ಕ್ಯಾಲ್ಸಿಯಂ , ಕಬ್ಬಿಣ ಅಂಶ, ಖನಿಜಾಂಶ ಇರುವ ಈ ತೆಂಗಿನ ಕಾಯಿಯನ್ನು ದಿನನಿತ್ಯ ಬಳಸುವುದರಿಂದ ಮಾನವನ ದೇಹಕ್ಕೆ ಅವಶ್ಯಕವಾದಂತಹ ಪೋಷಕಾಂಶಗಳು ಒದಗುತ್ತವೆ. ತೆಂಗಿನಕಾಯಿಯಲ್ಲಿ ಆಲ್ಕಲೈನ್ ಎಣ್ಣೆಯು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಈ ಎಲ್ಲಾ ಅಂಶಗಳಿಂದ ತೆಂಗಿನಕಾಯಿಯೂ ಮಾನವನ ಜೀರ್ಣಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ತೆಂಗಿನ ಕಾಯಿಯ ಅಂಶವೊಂದು ಮಾನವನ ರಕ್ತವನ್ನು ಶುದ್ದಿಗೊಳಿಸುತ್ತದೆ ಮತ್ತು ವಾತ, ಪಿತ್ತ, ಕಫ ಎಂಬ ಮೂರು ದೋಷಗಳನ್ನು ನಿವಾರಿಸುತ್ತದೆ. ಮೂತ್ರನಾಳವನ್ನು ಸರಾಗವಾಗಿಸುತ್ತದೆ.

ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ಸಮಯದಲ್ಲಿ ಬಾಯಿಯಲ್ಲಿ ಕೆಲವೊಂದು ಸಮಸ್ಯೆಗಳು ಕಾಡುವುದಿದೆ. ತಾಪಮಾನ ಕಾರಣದಿಂದಾಗಿ ಗುಳ್ಳೆಗಳು ಉಂಟಾಗುವುದು ಇತ್ಯಾದಿಗಳಿಂದ ಮುಕ್ತಿ ಪಡೆಯಬೇಕಾದರೆ ದಿನನಿತ್ಯವೂ ತೆಂಗಿನ ತುರಿಯನ್ನು ಜಗಿಯುವುದು ಉತ್ತಮ .ಇಷ್ಟು ಮಾತ್ರವಲ್ಲದೆ ಗರ್ಭಿಣಿಯರು ದಿನನಿತ್ಯ ತೆಂಗಿನ ತುರಿಯನ್ನು ತಿನ್ನುವುದರಿಂದ ಆಕೆಯ ಆರೋಗ್ಯಕ್ಕೆ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.

ತೆಂಗಿನಕಾಯಿಯಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ಅಂಶವೆಂದರೆ ಅದು ತೆಂಗಿನ ಹಾಲು ಅಥವಾ ಎಳನೀರು ಎಂದು ಕರೆಯುತ್ತೇವೆ. ಇದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ನಮ್ಮ ಹಿರಿಯರು ತೆಂಗಿನ ಹಾಲು, ತಾಯಿಯ ಎದೆಹಾಲಷ್ಟು ಶುದ್ಧವಾಗಿದೆ ಎಂದು ಹೇಳಿದ್ದಾರೆ. ಇಂತಹ ಹಾಲನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯದಲ್ಲಿ ಬಹಳಷ್ಟು ಲಾಭಗಳು ಉಂಟಾಗಲಿವೆ. ಅದರಲ್ಲಿಯೂ ಚಿಕ್ಕಪುಟ್ಟ ಮಕ್ಕಳು ಇದನ್ನು ದಿನನಿತ್ಯ ಸೇವಿಸಿದರೆ ಅವರಲ್ಲಿ ಕಾಡುವ ಹೊಟ್ಟೆಯ ಸಮಸ್ಯೆ, ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮತ್ತು ಅವರ ಬೆಳವಣಿಗೆಗೆ ಇದು ಬಹಳ ಸಹಕಾರಿಯಾಗಿದೆ.

ತೆಂಗಿನಕಾಯಿ ಅಥವಾ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಳವಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಿಗಿದೆ. ಆದರೆ ಕೊಲೆಸ್ಟ್ರಾಲ್ ನ ಹೆಚ್ಚಳಕ್ಕೆ ಕಾರಣ ಈಗಿನ ಆಹಾರ ಪದ್ಧತಿ. ”ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು” ಎಂಬ ಮಾತಿನಂತೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಅಥವಾ ಕಡಿಮೆಗೊಳಿಸಲು ಒಳ್ಳೆಯ ಕೊಲೆಸ್ಟ್ರಾಲ್ ಅಥವಾ ಒಳ್ಳೆಯ ಕೊಬ್ಬಿನ ಅಂಶವಿರುವ ಆಹಾರವನ್ನು ಸೇವಿಸುವುದು ಅಗತ್ಯ. ಸ್ಯಾಚುರೇಟೆಡ್ ಕೊಬ್ಬು ಎಂದರೆ ದೇಹದ ಕ್ರಿಯೆ ಪ್ರತಿಕ್ರಿಯೆಗಳಿಗೆ ಅವಶ್ಯಕತೆ ಇರುವಂತ ಒಳ್ಳೆಯ ಕೊಬ್ಬು ತೆಂಗಿನಕಾಯಿ ಹೊಂದಿದೆ. ಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುವ ಈ ಕೊಬ್ಬು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಹೀಗಾಗಿ ಪ್ರತಿದಿನವೂ ಸ್ವಲ್ಪ ತೆಂಗಿನ ಕಾಯಿಯನ್ನು ಸೇವಿಸಿದರೆ ಅದು ಹಸಿಯ ತೆಂಗಿನಕಾಯಿ ಇರಲಿ ಅಥವಾ ಒಣ ಕೊಬ್ಬರಿಯಾಗಿರಲಿ ಪ್ರತಿನಿತ್ಯವೂ ಸೇವಿಸಿದಲ್ಲಿ ಕೊಲೆಸ್ಟ್ರಾಲ್ ನ ನಿಯಂತ್ರಣವನ್ನು ಕಾಣಬಹುದು. ತೆಂಗಿನ ಕಾಯಿಯಲ್ಲಿರುವ ವಿಟಮಿನ್ ಮತ್ತು ಮಿನರಲ್ ಅಂಶಗಳೇ ಈ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಕಾರಣವಾಗಿದೆ.

ಅಜೀರ್ಣ ಸಮಸ್ಯೆಯನ್ನು ನಿಯಂತ್ರಿಸಲು ತೆಂಗಿನಕಾಯಿ ಸಹಾಯಕ

ತೆಂಗಿನಕಾಯಿಯ ಔಷಧಿಯ ಗುಣಗಳು ಹೇಳಿದರೆ ಮುಗಿಯದಂತವುಗಳು. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಸೇರಿದಂತೆ ಎಲ್ಲರಲ್ಲಿಯೂ ಅಜೀರ್ಣದ ಸಮಸ್ಯೆ ಕಾಡುತ್ತದೆ. ಸರಿಯಾದ ಪೋಷಕಾಂಶಗಳುಳ್ಳ ಆಹಾರದ ಸೇವನೆಯ ಕೊರತೆ ಆಗಿರಬಹುದು ಅಥವಾ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು ಮುಂತಾದವುಗಳು ಇಂತಹ ಅಜೀರ್ಣದ ಸಮಸ್ಯೆಗೆ ಕಾರಣವಾಗುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಆಹಾರದಲ್ಲಿ ನಾರಿನಂಶದ ಕೊರತೆಯು ಅಜೀರ್ಣದ ಸಮಸ್ಯೆ ಮತ್ತು ಮಲಬದ್ದತೆಯ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಹೀಗೆ ಉಂಟಾದ ಅಜೀರ್ಣವನ್ನು, ಮಲಬದ್ದತೆಯನ್ನು ಹೋಗಲಾಡಿಸಬೇಕಾದರೆ ನಾರಿನಂಶವಿರುವಂತಹ ಆಹಾರದ ಸೇವನೆಯೂ ಅಗತ್ಯ. ತೆಂಗಿನ ಕಾಯಿಯ ತಿರುಳಿನಲ್ಲಿ ಇಂತಹ ನಾರಿನಂಶ ಇರುವುದರಿಂದ ಅದು ಮಲಬದ್ಧತೆ ಅಥವಾ ಅಜೀರ್ಣ ಕ್ರಿಯೆ ಸಂಬಂಧಿತ ತೊಂದರೆಗಳನ್ನು ನಿವಾರಣೆ ಮಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿರುವ ಕರಗುವ ಮತ್ತು ಕರಗದ ನಾರುಗಳು ನಮ್ಮ ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಹೀಗೆ ತೆಂಗಿನ ಹಸಿಯ ತಿರುಳಿನಲ್ಲಿರುವ ನಾರಿನಾಂಶವೂ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ .ಇಷ್ಟೇ ಅಲ್ಲದೆ ನಮ್ಮ ಕರುಳಿನಲ್ಲಿ ಆಹಾರದ ಪಚನ ಸುಲಭಗೊಳಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

ತ್ವಚೆಯ ಸೌಂದರ್ಯ ಕಾಪಾಡಲು ತೆಂಗಿನಕಾಯಿ

ತೆಂಗಿನ ಕಾಯಿಯಲ್ಲಿರುವ ಇನ್ನೊಂದು ವಿಶೇಷತೆ ಎಂದರೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವುದು. ನಮ್ಮ ತ್ವಚೆಯು ಮೃದು ,ನಯ ಮತ್ತು ಕಾಂತಿಯುತವಾಗಿ ಇರಬೇಕೆಂದರೆ ಹಸಿಯ ತೆಂಗಿನ ಕಾಯಿಯ ತಿರುಳನ್ನ ಸೇವಿಸುವುದು ಉತ್ತಮವಾಗಿದೆ. ಏಕೆಂದರೆ ಹಸಿಯ ತೆಂಗಿನ ಕಾಯಿಯಲ್ಲಿ ಮೋನೋ ಲವರಿನ್ ಮತ್ತು ಲಾರಿಕ್ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹಲವಾರು ಬ್ಯಾಕ್ಟೀರಿಯಾ ಗಳನ್ನು ಕೊಲ್ಲಲು ಸಹಾಯ ಮಾಡುತ್ತವೆ. ಇದರಿಂದ ಬ್ಯಾಕ್ಟೀರಿಯಾ ದಿಂದ ಉಂಟಾಗುವಂತಹ ಚರ್ಮದ ಸಮಸ್ಯೆಗಳು ಅಥವಾ ಮೊಡವೆಗಳು ಮುಂತಾದ ಮುಖದ ಸಮಸ್ಯೆಗಳನ್ನ ನಿವಾರಿಸಬಹುದಾಗಿದೆ. ಅಷ್ಟೇ ಅಲ್ಲದೆ ಇಂತಹ ಸಮಸ್ಯೆಗಳು ಮರಳಿ ಬಾರದಂತೆಯೂ ಇದು ಕೆಲಸ ಮಾಡುತ್ತದೆ.

ಜಂತು ಹುಳುಗಳ ನಿವಾರಕವಾಗಿ ತೆಂಗಿನಕಾಯಿ

ರಾತ್ರಿ ಮಲಗುವ ಮುನ್ನ ತೆಂಗಿನ ಕಾಯಿಯನ್ನು ಒಂದು ಚಮಚದಷ್ಟು ಸೇವಿಸುವುದರಿಂದ ಹೊಟ್ಟೆಯಲ್ಲಿ ಉತ್ಪತ್ತಿ ಆಗಿರುವಂತ ಜಂತು ಹುಳಗಳ ಸಮಸ್ಯೆ ನಿವಾರಣೆ ಆಗುತ್ತದೆ. ತೆಂಗಿನ ಹಾಲು ತೆಂಗಿನ ಕಾಯಿಯ ತಿರುಳಿನಿಂದ ಸಿಗುವಂತಹ ಸಿಹಿಯಾದ ಮತ್ತು ಹಾಲಿನಂತಹ ಪದಾರ್ಥವಾಗಿದೆ. ಇದು ರುಚಿಯಾಗಿರಲು ಕಾರಣ ಈ ಹಾಲಿನಲ್ಲಿ ಇರುವಂತಹ ಪ್ರಮಾಣದ ಎಣ್ಣೆ ಮತ್ತು ಸಕ್ಕರೆ ಅಂಶಗಳು. ಇಂತಹ ತೆಂಗಿನ ಹಾಲು ಅಥವಾ ಎಳನೀರಿಗೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಈ ತೆಂಗಿನ ಹಾಲು ನಮ್ಮ ದೇಹದಲ್ಲಿ ಹೆಚ್ಚಾಗಿರುವ ಲಿಪಿಡ್ನ ಅಂಶವನ್ನು ಸರಿದೂಗಿಸುವ ಮೂಲಕ ಮತ್ತು ಜಠರ ಮತ್ತು ಕರುಳಿನ ಭಾಗದಲ್ಲಿ ಉಂಟಾಗುವ ಸೂಕ್ಷ್ಮ ಜೀವಿಗಳನ್ನು ತಡೆಗಟ್ಟುವ ಮೂಲಕ ದೇಹದ ಆರೋಗ್ಯಕ್ಕೆ ಸಹಕಾರ ಮಾಡುತ್ತದೆ.

ತೆಂಗಿನಕಾಯಿಯಲ್ಲಿ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ ಫ್ಯಾಟಿ ಆಮ್ಲಗಳು ಹೆಚ್ಚಾಗಿ ಕಂಡುಬರುತ್ತವೆ.ಅದರೊಂದಿಗೆ ವಿವಿಧ ಬಗೆಯ ಪೌಷ್ಟಿಕ ಸತ್ವಗಳು ಕೂಡ ಲಭ್ಯವಿರುವುದರಿಂದ ಮಾನವನ ಮಾಂಸ ಖಂಡದ ಬೆಳವಣಿಗೆಗೆ ಇವುಗಳು ಸಹಾಯ ಮಾಡುತ್ತವೆ.

ಇಂದಿನ ಕಾಲದಲ್ಲಿ ದಿನನಿತ್ಯದ ವ್ಯಾಯಾಮ ಅತ್ಯಗತ್ಯವಾಗಿದೆ. ಕೆಲವರು ಉತ್ಸಾಹದಿಂದ ಮಾಡಿದರೆ ಇನ್ನು ಕೆಲವರು ಅನಿವಾರ್ಯದಿಂದಲಾದರೂ ವ್ಯಾಯಾಮವನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ದೇಹದ ಶಕ್ತಿಯು ಕಡಿಮೆಯಾಗುತ್ತದೆ ಮತ್ತು ಕೆಲವೊಂದು ಮಾಂಸ ಖಂಡಗಳಿಗೆ ಪೆಟ್ಟು ಬೀಳುತ್ತದೆ. ಇದನ್ನು ಸರಿಪಡಿಸುವ ಕೆಲಸವನ್ನು ಸಹ ತೆಂಗಿನಕಾಯಿ ಮಾಡುತ್ತದೆ. ಎಳನೀರನ್ನು ಸೇವಿಸುವುದರ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು, ಮತ್ತು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಮಧುಮೇಹ ನಿಯಂತ್ರಣದಲ್ಲಿ ತೆಂಗಿನಕಾಯಿಯ ಪಾತ್ರ

ಇತ್ತೀಚಿಗೆ ಸಕ್ಕರೆ ಕಾಯಿಲೆ ಎಂಬುವುದು ವೃದ್ಧರಿಗೆ ಮಾತ್ರವಲ್ಲದೆ ಮಧ್ಯ ವಯಸ್ಕರಲ್ಲಿ ಮತ್ತು ಯುವಕರಲ್ಲಿಯೂ ಕಾಡುವ ಸಾಮಾನ್ಯ ಸಮಸ್ಯೆ ಆಗಿದೆ. ಡಯಾಬಿಟಿಸ್ ಎನ್ನುವುದು ಸಿಹಿಯ ಪದಾರ್ಥವನ್ನು ತಿನ್ನುವ ಕಾರಣಕ್ಕಾಗಿ ಬರುವಂತಹ ರೋಗವಲ್ಲ .ಕೆಲವೊಮ್ಮೆ ಇದು ಅನುವಂಶೀಯವೂ ಆಗಿರಬಹುದು. ಹೀಗೆ ಬರುವ ಸಕ್ಕರೆ ಕಾಯಿಲೆಯಿಂದ ತಮ್ಮ ಪ್ರಿಯವಾದ ಖಾದ್ಯಗಳನ್ನು ತಿನ್ನದೇ ಇರುವ ಮತ್ತು ಅದೆಷ್ಟೋ ಔಷಧಿಗಳನ್ನು ಸೇವಿಸುವ ದುರ್ವಿಧಿ ಒದಗಿದೆ. ದೇಹದಲ್ಲಿ ಹರಿಯುವ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಅಂಶ ಇದ್ದರೆ ಅದು ಮಧುಮೇಹ ಖಾಯಿಲೆಗೆ ಒಂದು ಕಾರಣವಾಗುತ್ತದೆ. ಈ ಎಲ್ಲಾ ಜಂಜಾಟಗಳಿಂದ ದೂರವಿರಬೇಕಾದರೆ ಇಂತಹ ಸಕ್ಕರೆ ಕಾಯಿಲೆಯನ್ನು ದೂರವಿಡಬೇಕು. ಇಲ್ಲವೇ ಅದು ಬರೆದಂತೆಯೇ ಮುನ್ನೆಚ್ಚರಿಕ ಕ್ರಮವನ್ನು ವಹಿಸಬೇಕು. ಹೀಗಾಗಿ ಪ್ರತಿ ನಿತ್ಯ ತೆಂಗಿನ ಹಾಲನ್ನಾಗಲಿ ಅಥವಾ ತೆಂಗಿನ ತಿರುಳನ್ನಾಗಲಿ ತಿನ್ನುವುದರಿಂದ ರಕ್ತದಲ್ಲಿ ಇರುವಂತಹ ಸಕ್ಕರೆಯ ಪ್ರಮಾಣವು ಕಡಿಮೆಯಾಗುತ್ತದೆ. ಅದರೊಂದಿಗೆ ಇನ್ಸುಲಿನ್ನ ಉತ್ಪತ್ತಿಯು ಸಹ ಸರಿಯಾದ ಪ್ರಮಾಣದಲ್ಲಿ ಜರುಗುತ್ತದೆ. ಇದರಿಂದ ಸಕ್ಕರೆ ಕಾಯಿಲೆಯನ್ನು ದೂರವಿಡಬಹುದು ಮತ್ತು ತಡೆಗಟ್ಟಲೂಬಹುದು.

ಇನ್ನೊಂದು ವಿಷಯವೇನೆಂದರೆ ಹಾಲನ್ನು ಬಳಸಿ ಮಾಡುವ ಖಾದ್ಯಗಳು ಮತ್ತು ಸಿಹಿತಿಂಡಿ ಗಳನ್ನು ಹಾಲಿನ ಬದಲಾಗಿ ತೆಂಗಿನ ಕಾಯಿಯ ಹಾಲಿನಿಂದ ತಯಾರಿಸಿದ್ದಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಹಾಲಿನಲ್ಲಿರುವ ಸಕ್ಕರೆಯ ಅಂಶಕ್ಕಿಂತ ತೆಂಗಿನ ಹಾಲಿನಲ್ಲಿರುವ ಸಕ್ಕರೆಯ ಅಂಶವು ಕಡಿಮೆ ಇರುವುದರಿಂದ ನೈಸರ್ಗಿಕವಾಗಿ ಸಿಗುವಂತಹ ತೆಂಗಿನಕಾಯಿಯನ್ನು ಉಪಯೋಗಿಸಿಕೊಂಡು ಮತ್ತು ಅದರ ಹಾಲನ್ನು ಉಪಯೋಗಿಸಿಕೊಂಡು ಸಿಹಿಕಾದ್ಯಗಳನ್ನು ಮಾಡುವುದರಿಂದ ಆರೋಗ್ಯಕ್ಕೆ ಉಂಟಾಗುವ ತೊಂದರೆಯು ಸ್ವಲ್ಪ ಪ್ರಮಾಣದಲ್ಲಿ ತಗುತ್ತದೆ.

ರಕ್ತದ ಒತ್ತಡ ನಿವಾರಣೆಯಲ್ಲಿ ತೆಂಗಿನಕಾಯಿಯ ಪಾತ್ರ

ತೆಂಗಿನ ಹಾಲಿನಲ್ಲಿ ಅಪಾರ ಪ್ರಮಾಣದಲ್ಲಿ ಖನಿಜಾಂಶಗಳು ಇರುವುದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದೊಂದು ಅದ್ಭುತ ಕಾರ್ಯವಾಗಿದೆ. ರಕ್ತದೊತ್ತಡದ ಏರುಪೇರು ಇಲ್ಲದಿರುವ ಜನರೇ ಇಲ್ಲದ ಈ ಕಾಲದಲ್ಲಿ ತೆಂಗಿನ ಉಪಯೋಗ ಅಮೃತದಂತೆ ಕೆಲಸಮಾಡುತ್ತದೆ. ಅದರ ಜೊತೆಗೆ ಹೃದಯ ಸಂಬಂಧಿ ಖಾಯಿಲೆಗೂ ಇದು ರಾಮಬಾಣವಾಗಿದೆ. ತೆಂಗಿನ ಮತ್ತೊಂದು ಅಚ್ಚರಿ ಮೂಡಿಸುವ ಗುಣವೆಂದರೆ, ಎದೆಯ ಭಾಗದಲ್ಲಿ ಮತ್ತು ಇನ್ನಿತರ ಭಾಗಗಳಲ್ಲಿ ಹಲವಾರು ಕಾರಣಗಳಿಂದ ಉಂಟಾಗುವ ಹುಣ್ಣಿನಿಂದ ನಮಗೆ ಮುಕ್ತಿ ಕೊಡುತ್ತದೆ. ತೆಂಗಿನ ಹಾಲನ್ನು ಸೇವಿಸುವ ಮೂಲಕ ಈ ಪರಿಣಾಮ ಕಂಡುಕೊಳ್ಳಬಹುದು. ಹೀಗೆ ಹತ್ತು ಹಲವು ಉಪಯೋಗಗಳನ್ನು ಹೊಂದಿರುವ ತೆಂಗಿನ ಕಾಯಿ ಅಥವಾ ತೆಂಗಿನ ಹಾಲಿನ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇಂದು ಮಾರುಕಟ್ಟೆಗಳಲ್ಲಿ ಬೇಕಾದಷ್ಟು ರಾಸಾಯನಿಕ ಮಿಶ್ರಣ ಮಾಡಿದ, ಅನಾರೋಗ್ಯ ಉಂಟುಮಾಡುವ ಸಕ್ಕರೆ, ಉಪ್ಪು ಮುಂತಾದ ಕಾಲಬೆರಿಕೆ ಮಾಡಿದ ಅಷ್ಟೇ ಅಲ್ಲದೆ ಸಂಸ್ಕರಿಸಿದ ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆ ದೊರಕುತ್ತದೆ. ಇಂತಹ ಕಲಬೆರಿಕೆ ಉತ್ಪನ್ನವನ್ನು ಕೊಂಡುಕೊಳ್ಳುವ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು. ಇಂತಹ ಉತ್ಪನ್ನಗಳು ಅಕ್ಷರಶಹ ವಿಷದ ಸಾಮಾನ. ಹೀಗಾಗಿ ಮಾರುಕಟ್ಟೆಗಳಲ್ಲಿ ಸಿಗುವ ಪದಾರ್ಥ ಬಿಟ್ಟು ಮನೆಯಲ್ಲೇ ಬೆಳೆದ, ಯಾವುದೇ ರಾಸಾಯನಿಕ ಹೊಂದದ ತೆಂಗಿನ ಕಾಯಿ , ಏಳನೀರನ್ನು ಸೇವಿಸಬೇಕು.

ನಮಗಾಗಿ ಅಲ್ಲದಿದ್ದರೂ ನಮ್ಮ ಕುಟುಂಬಕ್ಕಾಗಿ ಒಳ್ಳೆಯ ಆರ್ಗಾನಿಕ್ ಪದಾರ್ಥವನ್ನು ಸೇವಿಸೋಣ. ನಮ್ಮ ಪುರಾತನತತ್ವವು ಹೇಳುವುದು ಇದನ್ನೇ. ತ್ವಚೆಯ ಸೌಂದರ್ಯದಿಂದ ಹಿಡಿದು ಹೊಟ್ಟೆ, ಕರುಳು ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಗುಣವನ್ನು ಹೊಂದಿರುವ ತೆಂಗಿನ ಕಾಯಿಯನ್ನು ದಿನನಿತ್ಯ ಸೇವಿಸೋಣ. ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕ ಮಿಶ್ರಿತ ಹಣ್ಣು ಹಂಪಲುಗಳ ರಸವನ್ನು ಖರೀದಿಸಿ ರೋಗವನ್ನು ಉಚಿತವಾಗಿ ತರುವುದರ ಬದಲಾಗಿ ನಾವೇ ನಮ್ಮ ಮನೆಯಲ್ಲೇ ನೈಸರ್ಗಿಕವಾಗಿ ಬೆಳೆದ ಹಣ್ಣು ಹಂಪಲುಗಳ ಸವಿಯನ್ನು ಸವಿಯೋಣ. ಬೇಸಿಗೆಯ ಸುಡು ಬಿಸಿಲಿನಲ್ಲಿ ದೇಹಕ್ಕೂ, ಮನಸಿಗೂ ಮುದ ನೀಡುವ ಏಳನೀರನ್ನು ಸೇವಿಸೋಣ. ಚಿಕ್ಕ ಪುಟ್ಟ ಮಕ್ಕಳು ಸಹ ಅಕಾಲಿಕ ಮರಣ ಹೊಂದುತ್ತಿರುವ ಈ ಕಾಲದಲ್ಲಿ ನಮ್ಮ ಮನಸ್ಸು ಮತ್ತು ದೇಹ ಗಟ್ಟಿಯಾಗಿರಬೇಕಾದರೆ ಆದಷ್ಟು ಮನೆ ಮದ್ದನ್ನು ಬಳಸಬೇಕು. ಅನಾದಿಕಾಲದಿಂದಲೂ ಬಂದಿರುವ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ತೆಂಗಿನಕಾಯಿ ಅಂತಹ ಒಂದು ಗುಣವನ್ನು ಹೊಂದಿದೆ. ಇದರಿಂದಲೇ ಹಿರಿಯರು ದೇವರಿಗೆ ತೆಂಗಿನ ಕಾಯಿಯ ನೈವೇದ್ಯ ಮಾಡುವ ರೂಢಿ ಬೆಳೆಸಿಕೊಂಡಿರುವುದು. ಆ ನೆಪದಲ್ಲಾದರೂ , ದೇವರ ಹೆಸರಿನಲ್ಲಾದರೂ ದಿನನಿತ್ಯ ಆಹಾರದಲ್ಲಿ ತೆಂಗಿನಕಾಯಿಯ ಬಳಕೆ ಮಾಡಲಿ ಎನ್ನುವುದೇ ನಮ್ಮ ಹಿರಿಯರ ಉದ್ದೇಶ. ಆದ್ದರಿಂದಲೇ ನಮ್ಮ ಪೂರ್ವಜರು ನೂರಾರು ಕಾಲ ಆರೋಗ್ಯವಂತರಾಗಿ ಬಾಳಿ ಬದುಕಿದರು. ಆದರೆ ನಾವು ಪಾಶ್ಚಿಮಾತ್ಯ ಆಹಾರ ಪದ್ಧತಿ ರೂಢಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅದರ ಬದಲಿಗೆ ನಮ್ಮದೇ ಪುರಾತನ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳೋಣ. ನಾವು ನಮ್ಮ ಪೂರ್ವಜರಂತೆ ನೂರಾರು ಕಾಲವಲ್ಲವಾದರೂ, ಬದುಕಿರುವಷ್ಟು ದಿನವಾದರೂ ನೆಮ್ಮದಿಯಾಗಿ, ಆರೋಗ್ಯವಾಗಿ ಬದುಕೋಣ.


Share this with your friends...

Leave a Comment

Your email address will not be published. Required fields are marked *