ನಿಂಬೆ ಹಣ್ಣಿನ ಔಷಧಿ ಗುಣಗಳು ಮತ್ತು ಉಪಯೋಗಿಸುವ ವಿಧಾನ

Share this with your friends...

ಎಲ್ಲಾ ಋತುವಿನಲ್ಲೂ ಸಿಗುವ ಏಕೈಕ ಹಣ್ಣೆಂದರೆ ನಿಂಬೆಹಣ್ಣು. ಚಳಿಗಾಲದಲ್ಲಿ ಹೇರಳವಾಗಿ ಬಿಡುವ ನಿಂಬೆ, ಬಹಳಷ್ಟು ಔಷಧಿಯ ಗುಣಗಳನ್ನು ಹೊಂದಿದೆ. ಆದರೆ ಬೇಸಿಗೆ ಕಾಲದಲ್ಲೇ ಇದರ ಬೇಡಿಕೆ ಹೆಚ್ಚು. ಬೇಸಿಗೆಯ ರಣಬಿಸಿಲಿನಲ್ಲಿ ನಿಂಬು ಪಾನೀಯವನ್ನು ಕುಡಿದರೆ ಆಗುವ ಆನಂದಕ್ಕೆ ಮಿತಿ ಇಲ್ಲ. ನಿಂಬೆಯ ಪಾನಕವು ಮಾನವನ ದೇಹದಲ್ಲಿನ ದಾಹವನ್ನು ತೀರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ನಿಂಬೆ ಹಣ್ಣಿನಲ್ಲಿ 88 ಪ್ರತಿಶತ ಸಿಟ್ರಿಕ್ ಆಮ್ಲವಿರುವುದರಿಂದ ಮಾನವನ ದೇಹವನ್ನು ಅದು ಹೈಡ್ರಿಕರಿಸುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಫಾಲಿಕ್ ಆಮ್ಲ ,ವಿಟಮಿನ್ ಸಿ ಮತ್ತು ಬಿ, ಕ್ಯಾಲ್ಸಿಯಂ, ಮೆಗ್ನೀಷಿಯಂ ಪಾಸ್ಪರಸ್ ಇರುವುದರಿಂದ ಮಾನವನ ಆರೋಗ್ಯದ ಹಿತ ದೃಷ್ಟಿಯಿಂದ ಇದನ್ನು ಸೇವಿಸುವುದು ಬಹಳ ಉತ್ತಮ.

ಹೊಟ್ಟೆಯುಬ್ಬರಕ್ಕೆ ಔಷಧವಾಗಿ ನಿಂಬೆ ಹಣ್ಣು

ಹೊಟ್ಟೆಯುಬ್ಬರಕ್ಕಂತೂ ಇದು ರಾಮಬಾಣ. ಅರ್ಧ ನಿಂಬೆ ಹಣ್ಣನ್ನು ಒಂದು ಲೋಟ ನೀರಿಗೆ ಬೆರೆಸಿ ,ಅದಕ್ಕೆ ನಾಲ್ಕೈದು ಹನಿ ಹಸಿ ಶುಂಠಿಯ ರಸವನ್ನ ಹಾಕಿ ಅದರೊಂದಿಗೆ ಕಾಲು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕಲಸಿ ಜ್ಯೂಸ್ ತಯಾರಿಸುವುದರಿಂದ ಹೊಟ್ಟೆಯುಬ್ಬರ ಇಳಿಯುತ್ತದೆ. ಮಾನವನ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಸಿಡ್ ಇರುತ್ತದೆ, ಅದು ಜೇಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಂಬೆಯ ರಸದಲ್ಲಿರುವ ಸಿಟ್ರಿಕ್ ಆಮ್ಲವೂ ಈ ಆಸಿಡ್ ನ ಸ್ರವಿಸುವಿಕೆಯನ್ನು ಹೆಚ್ಚಿಸುವುದರ ಮೂಲಕ ಜೀರ್ಣಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ನಿದ್ದೆ ಆವರಿಸುವುದಕ್ಕೂ ಸಹಾಯ ಮಾಡುತ್ತದೆ.

ರಕ್ತದ ಒತ್ತಡ ನಿವಾರಣೆಗೆ ನಿಂಬೆ ಹಣ್ಣಿನ ಉಪಯೋಗ

ಇಂದಿನ ಕಾಲದಲ್ಲಿ ಒತ್ತಡವಿಲ್ಲದೆ ಇರುವ ಮನುಷ್ಯರು ಯಾರು ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಂದಲ್ಲ ಒಂದು ರೀತಿಯ ಒತ್ತಡವನ್ನು ಎದುರಿಸುತ್ತಿರುವುದನ್ನು ನಾವು ಕಾಣಬಹುದು. ಶಾಲಾ ಮಕ್ಕಳಿಗೆ ಓದು ಬರಹದ ಒತ್ತಡವಾದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಭವಿಷ್ಯದ ಒತ್ತಡ. ಮಧ್ಯ ವಯಸ್ಕರಿಗೆ ಕೆಲಸದ ಒತ್ತಡವಾದರೆ ವೃದ್ಧರಿಗೆ ಸಾವಿನದೇ ಒತ್ತಡ. ಈ ಎಲ್ಲಾ ಒತ್ತಡಗಳಿಂದ ಜಾಸ್ತಿ ಆಗುವುದು ನಮ್ಮ ರಕ್ತದೊತ್ತಡ. ಈ ರಕ್ತದ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ನಿಂಬೆಹಣ್ಣಿನ ಪಾತ್ರ ಬಹಳ ದೊಡ್ಡದು. ರಕ್ತದೊತ್ತಡ ಕಡಿಮೆ ಇರುವವರು ನಿಂಬೆಹಣ್ಣಿನ ಜ್ಯೂಸ್ ಗೆ ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ ಕುಡಿಯುವುದರಿಂದ ತಕ್ಷಣಕ್ಕೆ ಬಿಪಿಯು ಸರಿಯಾಗುತ್ತದೆ.

ತಲೆಸುತ್ತು ನಿವಾರಣೆಗೆ ನಿಂಬೆ ಹಣ್ಣಿನ ಉಪಯೋಗ

ತಲೆ ಸುತ್ತಿನ ತಕ್ಷಣ ನಿವಾರಣೆಗಾಗಿಯೂ ಸಹ ನಿಂಬೆ ಹಣ್ಣಿನ ರಸವನ್ನು ಉಪಯೋಗಿಸಬಹುದು. ತಲೆ ಬುರುಡೆಗಳಲ್ಲಿ ಗಾಳಿ ತುಂಬಿದ ಸ್ಥಳವನ್ನು ಸೈನಸ್ ಗಳು ಎಂದು ಕರೆಯುತ್ತೇವೆ. ಅವುಗಳು ಹಣೆಯಲ್ಲಿ ,ಮೂಗಿನ ಮೂಳೆಗಳಲ್ಲಿ ,ಕೆನ್ನೆ ಮತ್ತು ಕಣ್ಣುಗಳ ಹಿಂದೆ ಕಾಣಲ್ಪಡುತ್ತದೆ. ಇಂತಹ ಸೈನ್ಸ್ ನ ಸಮಸ್ಯೆಗಳು ಈಗ ಸರ್ವೇಸಾಮಾನ್ಯ. ಇದನ್ನು ನಿವಾರಿಸಲು ಸಹ ನಿಂಬೆ ಹಣ್ಣನ್ನು ಬಳಸಬಹುದಾಗಿದೆ. ಹತ್ತರಿಂದ ಹನ್ನೆರಡು ನಿಂಬೆಯ ಎಲೆಗಳನ್ನ ಮಂದ ಉರಿಯಲ್ಲೇ ನೀರಿನೊಂದಿಗೆ ಕುದಿಸಿ ,ಚೆನ್ನಾಗಿ ಕುದಿ ಬಂದ ನಂತರ ಅದನ್ನು ಇಳಿಸಿ ಮುಖಕ್ಕೆ ಹಬೆ ತೆಗೆದುಕೊಳ್ಳುವುದರಿಂದ ಸೈನಸ್ ಸಮಸ್ಯೆ ಕಡಿಮೆಯಾಗುತ್ತದೆ. ಕೇವಲ ದೊಡ್ಡ ದೊಡ್ಡ ಸಮಸ್ಯೆಗಳು ಮಾತ್ರವಲ್ಲದೆ ದಿನನಿತ್ಯ ನಮ್ಮನ್ನು ಕಾಡುವಂತ ಚಿಕ್ಕ ಚಿಕ್ಕ ಸಮಸ್ಯೆಗಳಾದ ಶೀತ ನೆಗಡಿ ಕೆಮ್ಮು ಮುಂತಾದವುಗಳನ್ನು ಸಹ ಕಡಿಮೆ ಮಾಡುವ ತಾಕತ್ತು ನಿಂಬೆಗಿದೆ.

ಗಂಟಲು ನೋವನ್ನು ನಿವಾರಿಸಲು ನಿಂಬೆ ಹಣ್ಣು

ವಾತಾವರಣದ ಬದಲಾವಣೆಯಿಂದ ಗಂಟಲು ನೋವು ಬರುವುದು ಸರ್ವೇಸಾಮಾನ್ಯ .ಹೀಗೆ ಬರುವ ಗಂಟಲು ನೋವು ನಮ್ಮ ಗಂಟಲಲ್ಲಿ ದಪ್ಪ ಲೋಳೆಯನ್ನು ಉಂಟುಮಾಡುತ್ತದೆ ಮತ್ತು ಇದು ಮತ್ತಷ್ಟು ಗಂಟಲು ಕೆರೆತ ಮತ್ತು ನೋವಿಗೆ ಕಾರಣವಾಗುತ್ತದೆ. ಹೀಗಿರುವಾಗ ನಿಂಬೆಹಣ್ಣು ಮ್ಯೂಕಸ್ ಪದರ ಅಥವಾ ಲೋಳೆಯ ಪದರವನ್ನು ಒಡೆಯುವುದರ ಮೂಲಕ ಉರಿ ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ನಿಂಬೆ ಎಲೆಗಳನ್ನು ಹಾಕಿ ಕುದಿಸಿದ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಅರಿಶಿಣವನ್ನು ಹಾಕಿ ಸೋಸಿ ಗಂಟಲಲ್ಲಿ ಗಳಗಳ ಮಾಡುವುದರಿಂದ ಈ ಎಲ್ಲಾ ನೋವುಗಳಿಂದ ನಮಗೆ ತ್ವರಿತವಾಗಿ ಪರಿಹಾರವನ್ನು ಒದಗಿಸುತ್ತದೆ. ಅದಲ್ಲದೆ ನಿಂಬೆಹಣ್ಣಿನಲ್ಲಿರುವಂತಹ ವಿಟಮಿನ್ ಸಿ ಬಹಳಷ್ಟು ಸೋಂಕುಗಳ ವಿರುದ್ಧ ಹೋರಾಡಲು ಸಹ ಉಪಯುಕ್ತವಾಗಿದೆ.

ಇಂದಿನ ಕಾಲದ ಜನರಿಗೆ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದಂತಹ ಮನೆ ಮದ್ದಿನ ಬಗ್ಗೆ ಎಳ್ಳಷ್ಟು ಮಾತ್ರವೇ ತಿಳಿದಿದೆ. ನಾವೆಲ್ಲರೂ ಹಣ್ಣಾಗಲಿ ಹಂಪನಾಗಲಿ ಬರಿಯ ಹಣ್ಣನ್ನಷ್ಟೇ ತಿಂದು ಸಿಪ್ಪೆಯನ್ನು ಎಸೆಯುವುದಿದೆ. ಆದರೆ ನಿಂಬೆಹಣ್ಣಿನ ವಿಷಯದಲ್ಲಿ ನೋಡುವುದಾದರೆ ನಿಂಬೆ ಹಣ್ಣಿನಲ್ಲಿರುವಂಥ ಪೋಷಕಾಂಶಗಳಿಗಿಂತ ಮೂರು ಪಟ್ಟು ಜಾಸ್ತಿ ಪೋಷಕಾಂಶಗಳು ನಿಂಬೆಹಣ್ಣಿನ ಸಿಪ್ಪೆಯಲ್ಲಿರುತ್ತದೆ. ಹೀಗಾಗಿ ಕೇವಲ ಹಣ್ಣಿನ ಪಾನೀಯವನ್ನು ಅಥವಾ ಮದ್ದನ್ನು ಸೇವಿಸುವುದಕ್ಕಿಂತ ಸಿಪ್ಪೆಯನ್ನು ಬಳಸಿಕೊಂಡು ಹಲವಾರು ರೀತಿಯ ಔಷಧಗಳನ್ನ ತಯಾರಿಸಬಹುದಾಗಿದೆ. ನಿಂಬೆ ಸಿಪ್ಪೆಗಳು ಅದ್ಭುತವಾದ ರೋಗನಿರೋಧಕ ಶಕ್ತಿ ಹೊಂದಿದೆ. ಅವುಗಳಲ್ಲಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದಲ್ಲದೇ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಪರಿಣಾಮಕಾರಿ ಕ್ಲೆನ್ಸರ್ ಮಾಡುತ್ತದೆ.

ನಿಂಬೆಯ ಮೋಡಿ

ಜನರು ದಿನ ನಿತ್ಯ ಒಂದಲ್ಲ ಒಂದು ಕಡೆಗೆ ಪ್ರಯಾಣಿಸುತ್ತಲೇ ಇರುತ್ತಾರೆ. ಕೆಲವರಿಗೆ ಅದು ಜೀವನ ನಿರ್ಮಿಸಿಕೊಳ್ಳುವ ಅವಕಾಶವಾದರೆ ಇನ್ನು ಕೆಲವರಿಗೆ ಅನಿವಾರ್ಯ. ನಮ್ಮಲ್ಲಿ ಬಹಳಷ್ಟು ಜನರಿಗೆ ಪ್ರಯಾಣದ ಸಮಯದಲ್ಲಿ ತಲೆ ಸುತ್ತುವುದು ಮತ್ತು ವಾಂತಿ ಬರುವುದು ಸರ್ವೇಸಾಮಾನ್ಯವಾಗಿದೆ. ಬಹಳಷ್ಟು ಔಷಧಿಗಳು ಮಾತ್ರೆಗಳು ಇದ್ದರೂ ಸಹ ತಕ್ಷಣಕ್ಕೆ ವಾಂತಿಯನ್ನು, ತಲೆಸುತ್ತನ್ನು ನಿವಾರಿಸುವಲ್ಲಿ ಆಯುರ್ವೇದದ ಮೂಲವನ್ನು ಹೊಂದಿರುವಂತಹ ನಿಂಬೆಹಣ್ಣು ಉಪಯೋಗಕ್ಕೆ ಬರುತ್ತದೆ. ನಮಗೆ ಇಂತಹ ಸಮಸ್ಯೆಗಳು ಎದುರಾದಾಗ ನಮ್ಮ ಹಿರಿಯರು ಒಂದು ಒಂದು ಚಿಕ್ಕ ಲೋಟದಲ್ಲಿ ನೀರಿನೊಂದಿಗೆ ಒಂದಿಷ್ಟು ಸಕ್ಕರೆ ನಿಂಬೆಯ ರಸ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಸುವುದಿದೆ. ಇದರಿಂದ ವಾಂತಿ ಹಾಗೂ ತಲೆಸುತ್ತು, ತಕ್ಷಣಕ್ಕೆ ಕಡಿಮೆ ಆಗುತ್ತದೆ ಎನ್ನುವುದು ನಂಬಿಕೆ ಅಷ್ಟೇ ಅಲ್ಲ, ಸತ್ಯವೂ ಹೌದು.

ನಮ್ಮ ಹಿರಿಯರು ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಲ್ಲಿ ನಿಂಬೆಹಣ್ಣ ಹಿಂಡಿಕೊಂಡು ಕುಡಿಯಲು ಸೂಚಿಸುತ್ತಿದ್ದರು. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ನಿಂಬೆಯಲ್ಲಿರುವಂತಹ ಸಿಟ್ರಿಕ್ ಆಮ್ಲವು ನಮ್ಮ ದೇಹಕ್ಕೆ ಅಗತ್ಯವಾದ ವಸ್ತುವಾಗಿದೆ. ಈ ಸಿಟ್ರಿಕ್ ಆಮ್ಲದ ಕಾರಣದಿಂದಾಗಿ ನಮ್ಮ ದೇಹದಲ್ಲಿರುವ ಕೊಬ್ಬಿನ ಕೋಶಗಳು ಒಡೆದು ನಾಶವಾಗುತ್ತದೆ. ಇದರಿಂದ ನಮ್ಮ ದೇಹ ಉತ್ತೇಜನ ಭರಿತವಾಗುತ್ತದೆ. ಹೀಗಾಗಿ ಬೆಳಗಿನ ಜಾವದಲ್ಲಿ ನಿಂಬೆಯ ಹಣ್ಣಿನ ರಸವನ್ನು ಕುಡಿಯುವುದರಿಂದ ಇಡೀ ದಿನ ನಮಗೆ ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ. ಹೀಗಾಗಿ ಕೇವಲ ಬೆಳಗಿನ ಜಾವದಲ್ಲದೆ ನಮಗೆ ಸುಸ್ತಾದಾಗ ಈ ನಿಂಬೆಹಣ್ಣಿನ ಪಾನಕವನ್ನು ಮಾಡಿ ಕುಡಿಯುವುದರಿಂದ ನಮ್ಮ ಸುಸ್ತು ತ್ವರಿತವಾಗಿ ಮಾಯವಾಗುತ್ತದೆ.

ಸೊಳ್ಳೆಗಳ ಕಾಟ ನಿವಾರಣೆಗಾಗಿ ನಿಂಬೆ ಹಣ್ಣು

ಮಳೆಗಾಲ ,ಚಳಿಗಾಲ, ಬೇಸಿಗೆಗಾಲ ಎಂಬುದಿಲ್ಲದೆ ಸೊಳ್ಳೆ ಕಾಟ ಯಾವಾಗಲೂ ಜಾಸ್ತಿ ಇದೆ. ಸೊಳ್ಳೆಯ ಕಾಟದಿಂದ ಮುಕ್ತಿ ಹೊಂದುವುದರಲ್ಲಿ ನಿಂಬೆ ಹಣ್ಣಿನಿಂದ ಒಂದು ಚಮತ್ಕಾರಿಯದಂತಹ ಉಪಯೋಗವಿದೆ . ಅದೇನೆಂದರೆ ಅರ್ಧ ಕತ್ತರಿಸಿದಂತಹ ನಿಂಬೆಹಣ್ಣನ್ನು ಅಡ್ಡಲಾಗಿ ಚರ್ಮದ ಭಾಗದ ಮೇಲೆ ಶಬರಿ ಕೊಳ್ಳುವುದರಿಂದ ಸೊಳ್ಳೆಯು ಕಡಿಯುವುದಿಲ್ಲ. ಕೇವಲ ಸೊಳ್ಳೆ ಮಾತ್ರ ಅಲ್ಲ ಇನ್ನಷ್ಟು ಚಿಕ್ಕ ಚಿಕ್ಕ ಕೀಟಗಳು ಕಡಿದು ಉರಿಯಾಗುತ್ತಿದ್ದಲ್ಲಿ ನಿಂಬೆ ರಸವನ್ನು ಉರಿಯಾಗುವ ಭಾಗದ ಮೇಲೆ ಹಾಕಿ ಸವರಿದಾಗ ತಕ್ಷಣಕ್ಕೆ ಉರಿ ಕಡಿಮೆಯಾಗುವುದಿದೆ. ಆಮ್ಲ ಭರಿತವಾದ ರಸವನ್ನ ಚರ್ಮಕ್ಕೆ ತಾಗಿಸಿದಾಗ ; ಅದರಲ್ಲಿಯೂ ಕಚ್ಚಿದ ಗಾಯಕ್ಕೆ ತಾಗಿಸಿದರೆ ಉರಿಯಾಗುವುದಂತೂ ಉಂಟು. ಆದರೆ ಈ ಉರಿಯು ಕ್ಷಣಿಕವಾಗಿದ್ದು, ನಿಧಾನವಾಗಿ ಪರಿಣಾಮ ಬೀರುತ್ತದೆ.

ದೇಹದ ಬೊಜ್ಜು ನಿವಾರಣೆಯಲ್ಲಿ ನಿಂಬೆ ಹಣ್ಣಿನ ಪಾತ್ರ

ಇಂದಿನ ಜನಾಂಗದಲ್ಲಿ, ಅದರಲ್ಲಿಯೂ ಯುವ ಜನಾಂಗದಲ್ಲಿ ಬೊಜ್ಜುತನ ಎನ್ನುವುದು ದೊಡ್ಡ ಪೀಡೆಯಾಗಿ ಹೋಗಿದೆ. ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಈ ಸಮಸ್ಯೆ ಕಾಡುತ್ತದೆ . ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೂಡ ಬೊಜ್ಜನ್ನು ಕರಗಿಸಲು ಹರಸಾಹಸ ಮಾಡುತ್ತಿದ್ದಾರೆ. ಇಂತಹ ಮಂಡು ಬೊಜ್ಜು ಕರಗಿಸಲು ಹಲವಾರು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಯಾಕೆ! ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ನಮ್ಮ ಮನೆಯಲ್ಲಿಯೇ ಒಂದು ಪರಿಹಾರವಿದೆ. ನಿಂಬೆಹಣ್ಣು ವಿಟಮಿನ್ ಸಿ ಮತ್ತು ಇನ್ನಿತರ ಮುಖ್ಯವಾದಂತಹಾ ಖನಿಜಗಳಿಂದ ಸಮೃದ್ಧವಾಗಿದೆ. ಹೀಗಾಗಿ ಇದರ ರಸವು ಕೊಬ್ಬನ್ನು ಕರಗಿಸುವಲ್ಲಿ ಅತ್ಯುತ್ತಮವಾದ ಫಲಿತಾಂಶವನ್ನು ನೀಡುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಮತ್ತು ಆರೋಗ್ಯವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನಲ್ಲಿ ನಿಂಬುರಸದ ಜೊತೆಗೆ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಕೊಬ್ಬು ಅಥವಾ ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ.

ನಿಂಬೆ ಹಣ್ಣಿನ ಉಪಯೋಗ ಇಷ್ಟಕ್ಕೆ ಮುಗಿದಿಲ್ಲ, ಸೇಲ್ವೆಸ್ಟ್ರೋಲ್ ಮತ್ತು ಲೆಮನೊನ್ ಅಂಶವನ್ನು ಹೊಂದಿರುವ ನಿಂಬೆ ಕ್ಯಾನ್ಸರ್ ಕೋಶಗಳ ಪ್ರತಿಕೃತಿಯ ಪ್ರಕ್ರಿಯೆಯನ್ನು ನಿಲ್ಲಿಸುವುದಿಲ್ಲವಾದರೂ ಸಹ ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೂದಲು ಉದುರುವಿಕೆಯನ್ನು ತಡೆಗಟ್ಟುವ ನಿಂಬೆಹಣ್ಣು

ನಿಂಬೆಯ ಔಷಧೀಯ ಗುಣವು ಅಕ್ಷಯ ಪಾತ್ರೆಯಂತೆ ಎಷ್ಟು ಹೇಳಿದರೂ ,ಎಷ್ಟು ಉಪಯೋಗಿಸಿದರು ಕಡಿಮೆಯಾಗದಂತಹ ತತ್ವವದು. ನಿಂಬೆ ಹಣ್ಣಿನ ಉಪಯೋಗದಿಂದ ಕೂದಲು ಉದುರುವಿಕೆಯನ್ನು ತಡೆಯಬಹುದು ಎಂದರೆ ನಂಬುತ್ತೀರಾ ? ನಂಬಲೇಬೇಕು! ಏಕೆಂದರೆ, ಆಧುನಿಕ ಜೀವನ ಶೈಲಿ ಒತ್ತಡದಿಂದ ಕೂಡಿದೆ. ಮುಂಜಾನೆಯಿಂದ ಹಿಡಿದು ಸಂಜೆವರೆಗೆ ಎಲ್ಲಿ ನೋಡಿದರೂ ಧಾವಂತ. ಕೆಲಸದ ಒತ್ತಡ, ಭವಿಷ್ಯದ ಒತ್ತಡ, ಮನೆಯ ಒತ್ತಡಗಳಲ್ಲಿ, ತಲೆ ಬಿಸಿಗಳಲ್ಲಿ ಕೂದಲು ಉದುರುವಿಕೆ ಎಲ್ಲೆಡೆಯೂ ಆಕ್ರಮಿಸಿದೆ. ಹರೆಯದ ತರುಣರು ಸಹ ಕೂದಲುದುರುವಿಕೆಯಿಂದ ವೃದ್ಧರಂತಾಗಿದ್ದಾರೆ. ನೀರು,ವಾತಾವರಣ, ಹವಾಮಾನ ವೈಪರಿತ್ಯ ಇವಗಳಿಂದಷ್ಟೇ ಅಲ್ಲದೆ ರಾಸಾಯನಿಕಗಳು ಉಳ್ಳ ಸಾಬೂನು, ಶಾಂಪುಗಳ ಬಳಕೆಯಿಂದಾಗಿ ಕೂದಲು ಉದುರುವುದು ಇನ್ನೂ ಹೆಚ್ಚಾಗುತ್ತದೆ. ಕೂದಲು ಉದುರುತ್ತಿದೆಯಲ್ಲ ಎಂಬ ಒತ್ತಡವೇ ಕೂದಲುದುರುವಿಕೆಯ ಇನ್ನೊಂದು ಕಾರಣವಾಗಿ ಹೋಗಿದೆ. ಹೀಗಿರುವಾಗ ಎಲ್ಲಾ ಸಮಸ್ಯೆಗಳಂತೆ ಈ ಸಮಸ್ಯೆಗೂ ಪರಿಹಾರವಾಗಿ ಕಾಣಿಸಿಕೊಳ್ಳುವುದು “ನಿಂಬೆಹಣ್ಣು “. ಅದರಲ್ಲಿರುವ ಹೇರಳವಾಗಿರುವ ವಿಟಮಿನ್ ಸಿ ಯು ಕೂದಲಿನ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಅಗತ್ಯವಾಗಿರುವ ಕೊಲಾಜಿನ್ ಉತ್ಪತ್ತಿಯನ್ನು ಜಾಸ್ತಿಗೊಳಿಸುತ್ತದೆ. ಅಷ್ಟೇ ಅಲ್ಲದೆ ತಲೆ ಹೊಟ್ಟು ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಹೇಗೆಂದರೆ ನಿಂಬೆಹಣ್ಣನ್ನು ಅರ್ಧವಾಗಿ ಕತ್ತರಿಸಿ, ಅದನ್ನು ಕೂದಲಿನ ಬುಡಕ್ಕೆ ತಿಕ್ಕುವುದರಿಂದ ತಲೆ ಹೊಟ್ಟು ನಿವಾರಣೆ ಆಗುತ್ತದೆ. ಇಲ್ಲದಿದ್ದಲ್ಲಿ ತಂಗಿನ ಎಣ್ಣೆಗೆ ಸ್ವಲ್ಪ ಪ್ರಮಾಣದಲ್ಲಿ ನಿಂಬೆಯ ರಸವನ್ನು ಮಿಶ್ರಣಗೊಳಿಸಿ, ಕೂದಲಿಗೆ ಹಚ್ಚಿ, 2 ಗಂಟೆಯ ನಂತರ ಸ್ನಾನ ಮಾಡುವುದರಿಂದಲೂ ಸಹ ತಲೆ ಹೊಟ್ಟನ್ನು ನಿವಾರಿಸಬಹುದಾಗಿದೆ.

ಇನ್ನು ನಿಂಬೆ ಸಿಪ್ಪೆ ಹಾಗೂ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ ಹಣೆಗೆ ಹಚ್ಚುವುದರಿಂದ ತೀವ್ರವಾದ ತಲೆನೋವನ್ನು ಕಡಿಮೆಗೊಳಿಸಬಹುದು.

ಮೊಡವೆ ಕಲೆ ಕಪ್ಪು ಚುಕ್ಕೆಗಳ ನಿವಾರಣೆಗೆ ನಿಂಬೆಹಣ್ಣು

ಆಧುನಿಕ ಜಗತ್ತಿನಲ್ಲಿ ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಬೆಲೆ ಜಾಸ್ತಿ. “ಮುಖ ನೋಡಿ ಮಣೆ ಹಾಕು” ಎನ್ನುವಂತೆ ಜನರು ಒಬ್ಬ ವ್ಯಕ್ತಿಯ ಬಾಹ್ಯ ಸೌಂದರ್ಯವನ್ನೇ ನಂಬಿ ಆತನೊಂದಿಗೆ ಸ್ನೇಹ ಸಂಬಂಧವನ್ನು ಬಯಸುತ್ತಾರೆ. ಹೀಗಿರುವಾಗ ಪ್ರತಿಯೊಬ್ಬ ವ್ಯಕ್ತಿಯೂ ಸಹ ಬಾಹ್ಯ ಸೌಂದರ್ಯವನ್ನೇ ಜಗತ್ತಿಗೆ ತೋರಿಸಲು ಇಷ್ಟಪಡುತ್ತಾನೆ. ದೈಹಿಕ ಸೌಂದರ್ಯಕ್ಕೆ ಮಾರು ಹೋಗಿರುವ ಈ ಜಗತ್ತು ಬಯಸುವುದು ಅದನ್ನೇ. “ನಗುವೇ ಮುಖಕ್ಕೆ ಶೃಂಗಾರ” ಎನ್ನುವಂತ ಕಾಲ ಮುಗಿದು ಹೋಗಿದೆ . ಈಗ ಏನಿದ್ದರೂ ಸೌಂದರ್ಯವರ್ಧಕಗಳ ಕಂಪನಿಗಳ ಕಾರುಬಾರು. ಆದರೆ ಅಷ್ಟೆಲ್ಲ ಹಣ ವ್ಯಯ ಮಾಡಿ ಸೌಂದರ್ಯವರ್ಧಕಗಳನ್ನ ಬಳಸಿ ಸಿಗುವಂತ ಸೌಂದರ್ಯವೂ ಮನೆಯ ಮದ್ದಿನಿಂದಲೇ ಸಿಗುತ್ತದೆ ಎಂದರೆ ಆಶ್ಚರ್ಯವಾಗಬಹುದು. ಮುಖದ ಮೇಲಿನ ಮೊಡವೆ, ಕಲೆ, ಕಪ್ಪು ಚುಕ್ಕೆಗಳನ್ನು ನಿವಾರಿಸುವ ಸಲುವಾಗಿ ಜನರು ಪರದಾಡುವುದು ಅಷ್ಟಿಷ್ಟಲ್ಲ .ಈ ಕ್ರೀಮ್ ,ಆ ಕ್ರೀಮ್ ಎಂದುಕೊಂಡು ಲಕ್ಷಾಂತರ ರೂಪಾಯಿಗಳನ್ನ ಸೌಂದರ್ಯವರ್ಧಕಗಳ ಕಂಪನಿಗಳ ಮೇಲೆ ಸುರಿಯುತ್ತಾರೆ. ಇದರ ಬದಲಾಗಿ ಮನೆಯಲ್ಲೇ ಸಿಗುವಂತಹ ,ವೈದ್ಯಕೀಯ ಅಂಶಗಳುಳ್ಳಂತಹ ಸಾಮಗ್ರಿಗಳನ್ನು ಬಳಸಿಕೊಂಡು ಸೌಂದರ್ಯವನ್ನು ವೃದ್ಧಿಸಬಹುದಾಗಿದೆ .ಅದರಲ್ಲಿ ನಿಂಬೆಹಣ್ಣು ಒಂದು. ನಿಂಬೆಹಣ್ಣಿನ ರಸದ ಜೊತೆಗೆ ಅರಿಶಿಣ ,ಜೇನುತುಪ್ಪ ಇತ್ಯಾದಿಗಳನ್ನ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಚಿಕ್ಕ ಚಿಕ್ಕ ಕಲೆಗಳು ಕಡಿಮೆ ಆಗುತ್ತದೆ.

ಹೀಗೆ ದೈಹಿಕ ಅನಾರೋಗ್ಯದಿಂದ ಹಿಡಿದು ಮುಖದ ಕಾಂತಿಯನ್ನು ಹೆಚ್ಚಿಸುವವರೆಗೂ ನಿಂಬೆಹಣ್ಣಿನ ಉಪಯೋಗ ಬಹಳಷ್ಟಿದೆ. ಇಂದಿನ ಹೈಟೆಕ್ ಬದುಕಿನಲ್ಲಿ ರಾಸಾಯನಿಕಗಳಿಂದ ತಯಾರಾದಂತಹ ವಿಷಪೂರಿತವಾದ ಔಷಧಗಳನ್ನು ಬಳಸುವ ಬದಲು ಹೀಗೆ ಮನೆಯಲ್ಲೇ ಸುಲಭವಾಗಿ ಸಿಗುವ, ಹಿರಿಯರಿಂದ ಸೂಚಿಸಲ್ಪಟ್ಟಿರುವಂತಹ ಸಾಮಾಗ್ರಿಗಳನ್ನು ಬಳಸಿ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದರಿಂದ ನಮ್ಮ ಜೀವಿತಾವಧಿಯು ವೃದ್ದಿಸುತ್ತದೆ. ನಿಂಬೆ ಹಣ್ಣು ,ಬಾಳೆಯ ಗಿಡಗಳಂತಹ ಸಸ್ಯಗಳು ಬಹಳ ಸುಲಭವಾಗಿ ನಮ್ಮ ಮನೆಯಂಗಳದಲ್ಲೇ ದೊರಕುವಂಥವುಗಳು. ಇವುಗಳನ್ನ ಬೆಳೆಸುವುದಕ್ಕಾಗಲಿ ಅಥವಾ ಉಪಯೋಗಿಸುವುದಕ್ಕಾಗಲಿ ಹೆಚ್ಚಿನ ಶ್ರಮವಾಗಲಿ, ಹಣವಾಗಲಿ ಬೇಕಾಗಿಲ್ಲ. ಹೀಗಿರುವಾಗ ಕಡಿಮೆ ಖರ್ಚಿನಲ್ಲಿ, ಸಂಪೂರ್ಣವಾಗಿ ಫಲ ಕೊಡುವಂತಹ ಇಂತಹ ಸಾಮಗ್ರಿಗಳನ್ನ ಬಳಸಿಕೊಳ್ಳುವುದು ಬಹು ಮುಖ್ಯವಾಗಿದೆ .ಒಂದು ನಿಂಬೆ ಗಿಡ ಬೆಳೆದು ದೊಡ್ಡದಾಗಿ ಹಣ್ಣನ್ನು ನೀಡುವವರೆಗೆ ಸ್ವಲ್ಪ ಸಮಯ ಹಿಡಿಯಬಹುದು; ಆದರೆ ಹೀಗೆ ಸಿಕ್ಕ ಪ್ರತಿಫಲ ಜೀವನಪರ್ಯಂತ ನಮ್ಮೊಡನೆ ಇರುತ್ತದೆ .ಇಂತಹ ಸಸ್ಯಗಳನ್ನ ಬೆಳೆಸುವುದರಿಂದ ಅಥವಾ ಇಂತಹ ಸಾಮಗ್ರಿಗಳನ್ನ ಉಪಯೋಗಿಸುವುದರಿಂದ ಪ್ರಕೃತಿಗೂ ಒಳ್ಳೆಯದು, ಮಾನವನಿಗೂ ಒಳ್ಳೆಯದು.


Share this with your friends...

Leave a Comment

Your email address will not be published. Required fields are marked *