ಮೆಂತ್ಯ ಸೊಪ್ಪಿನ ಔಷಧಿ ಗುಣಗಳು

Share this with your friends...

ಮೆಂತ್ಯ ಸೊಪ್ಪಿನ ಔಷಧಿ ಗುಣಗಳು

ಮೆಂತ್ಯ ಸೊಪ್ಪು ಮತ್ತು ಮೆಂತ್ಯೆ ಕಾಳುಗಳನ್ನು ನಾವು ದಿನನಿತ್ಯ ಅಡುಗೆಯಲ್ಲಿ ಬಳಸಿ ಬಳಸುತ್ತೇವೆ. ಎರಡರಿಂದ ಮೂರು ಫೀಟ್ನಷ್ಟು ಬೆಳೆಯುವ ಮೆಂತೆ ಗಿಡ, ಹಚ್ಚ ಹಸಿರು ಎಲೆಗಳು ಮತ್ತು ಹೂವುಗಳಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೆ ನಾವು ದಿನನಿತ್ಯ ಬಳಸುವಂತಹ ಕಂದು ಬಣ್ಣದ ಮೆಂತೆ ಕಾಳುಗಳು ಅದರದ್ದೇ ಗಿಡದಲ್ಲಿ ಬೆಳೆಯುವ ಬೀಜಗಳಾಗಿವೆ. ಅನಾದಿಕಾಲದಿಂದಲೂ ಮೆಂತ್ಯೆ ಕಾಳುಗಳನ್ನು ಮತ್ತು ಸೊಪ್ಪುಗಳನ್ನು ಕೇವಲ ಆಹಾರ ಪದಾರ್ಥವಾಗಿ ಬಳಸದೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಲ್ಲಿ ಬಳಸುತ್ತಿದ್ದೇವೆ. ಕೂದಲುದುರುವಿಕೆ ಮುಂತಾದ ಸಮಸ್ಯೆಗಳಿಗೆ ಮೆಂತ್ಯಸೊಪ್ಪು ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಚೀನಿಯರು ಅಸಂಖ್ಯಾತ ತ್ವಚೆಯ ಸಮಸ್ಯೆಗಳಿಗೂ ಇದನ್ನು ಮದ್ದಾಗಿ ಬಳಸುತ್ತಾರೆ. ಭಾರತವು ಸೇರಿದಂತೆ ವಿಶ್ವದೆಲ್ಲೆಡೆ ಇದನ್ನು ಮುಖ್ಯ ಆಹಾರ ಪದಾರ್ಥವಾಗಿ ಬಳಸುತ್ತಾರೆ.

ಮೆಂತೆಯು ಎದೆ ಹಾಲನ್ನು ಹೆಚ್ಚು ಮಾಡಲು ಸಹಾಯಕ

ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿಯ ಎದೆ ಹಾಲು ಅತ್ಯಗತ್ಯವಾಗಿದೆ. ಎದೆ ಹಾಲಿನಲ್ಲಿರುವ ಪೋಷಕಾಂಶಗಳು ಹಸುಗೂಸುಗಳನ್ನು ಆರೋಗ್ಯವಾಗಿರಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ಹಲವಾರು ತಾಯಂದಿರು ಎದೆ ಹಾಲಿನ ಅನಿರ್ದಿಷ್ಟ ಉತ್ಪತ್ತಿಯಿಂದ ಬೇಸತ್ತಿದ್ದಾರೆ. ಇಂತವರಿಗೆ ಅತ್ಯುತ್ತಮ ಪರಿಹಾರವೆಂದರೆ “ಮೆಂತ್ಯೆ”. ಇದೊಂದು ನೈಸರ್ಗಿಕ ಎದೆಹಾಲು ಉತ್ಪತ್ತಿ ಮಾಡುವ ಔಷಧಿಯಂತೆ ವರ್ತಿಸುತ್ತದೆ. ಮೆಂತ್ಯದ ಸೊಪ್ಪು ಅಥವಾ ಮೆಂತ್ಯದ ಕಾಳಿನ ಸೇವನೆ ಎದೆ ಹಾಲು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಕೇವಲ ಎದೆ ಹಾಲನ್ನು ಹೆಚ್ಚಿಸುವುದು ಮಾತ್ರ ಅಲ್ಲದೆ ಗರ್ಭಿಣಿಯರಿಗೆ ಸುಲಭ ಹೆರಿಗೆಯಾಗಲು ಪ್ರೇರೇಪಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆರಿಗೆಯ ಸಂದರ್ಭದಲ್ಲಿ ಗರ್ಭಿಣಿಯರು ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗಿದೆ. ಹೆರಿಗೆ ಸಮಯದಲ್ಲಿ ಅದರಲ್ಲಿಯೂ ಸಾಮಾನ್ಯ ಹೆರಿಗೆಯ ಸಮಯದಲ್ಲಿ, ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಮಗುವಿಗೆ ಜನ್ಮ ನೀಡುವ ಸಂದರ್ಬದಲ್ಲಿ ತಾಯಂದಿರು ಅತಿಹೆಚ್ಚಿನ ನೋವಿಗೆ ಒಳಪಡುತ್ತಾರೆ. ಇಂತಹ ನೋವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲು ಮತ್ತು ಸುಲಭವಾಗಿ ಹೆರಿಗೆ ಆಗಲು ಮೆಂತ್ಯ ಸೊಪ್ಪಿನ ಸೇವನೆ ಸಹಾಯ ಮಾಡುತ್ತದೆ. ಇದು ಮಗುವಿನ ಜನನದ ಸಮಯದಲ್ಲಿ ಗರ್ಭಾಶಯವನ್ನು ಸಂಕುಚಿತಗೊಳಿಸುವ ಮೂಲಕ ಹೆರಿಗೆಯ ನೋವನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಿ, ಸುಸೂತ್ರವಾಗಿ ಹೆರಿಗೆಯಾಗಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು ಮೆಂತ್ಯ ಕಾಳನ್ನು ಅಥವಾ ಮೆಂತೆ ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಗರ್ಭಪಾತ ಅಥವಾ ಅಕಾಲಿಕ ಹೆರಿಗೆ ಆಗುವ ಸಾಧ್ಯತೆ ಇರುವುದರಿಂದ ಇದನ್ನು ಮಿತಿಯಾಗಿ ಸೇವಿಸುವುದು ಅವಶ್ಯಕವಾಗಿದೆ!

ಮೆಂತ್ಯೆ ಇಂದ ಡಯಾಬಿಟಿಸ್ ಹತೋಟಿಗೆ ಬರುತ್ತದೆ

ಮೆಂತ್ಯ ಇದರ ಇನ್ನೊಂದು ವೈದ್ಯಕೀಯ ಗುಣವೆಂದರೆ ಡಯಾಬಿಟಿಸ್ ಅನ್ನು ಹತೋಟಿಗೆ ತರುವುದು ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಿಡಿತಕ್ಕೆ ತರುವುದು. ಮೆಂತೆಯಲ್ಲಿ ಅನೇಕ ಪೋಷಕಾಂಶಗಳಿವೆ. ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂ ಮುಂತಾದ ಪೋಷಕಾಂಶಗಳ ಸಲುವಾಗಿ ಇದು ವೈದ್ಯಕೀಯ ಗುಣವನ್ನು ಹೊಂದಿದೆ. ಮೆಂತ್ಯ ಸೊಪ್ಪಿನಲ್ಲಿರುವ ಹೈ ಫೈಬರ್, ಎಂದರೆ ನಾರಿನಂಶ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹಿಡಿತಕ್ಕೆ ತರುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ದಿನನಿತ್ಯ ಮೆಂತ್ಯ ಸೊಪ್ಪಿನ ಸೇವನೆಯನ್ನು ಮಾಡುವುದು ಅತ್ಯುತ್ತಮ. ಏಕೆಂದರೆ ಇದರಲ್ಲಿ ನೈಸರ್ಗಿಕವಾಗಿ ಕಂಡು ಬರುವ ಗ್ಲಾಕ್ಟೋಮನನ್ ಎಂಬ ನಾರಿನಂಶವು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ದೇಹವು ಅತಿಯಾಗಿ ಹೀರಿಕೊಳ್ಳುವುದನ್ನು ತಪ್ಪಿಸುತ್ತದೆ ಮತ್ತು ದೇಹದಲ್ಲಿ ಇನ್ಸುಲೆನ್ನ ಉತ್ಪತ್ತಿ ಕಾರ್ಯದಲ್ಲಿ ಮೆಂತೆಯಲ್ಲಿರುವ ಅಮೈನೋ ಆಮ್ಲವು ಮುಖ್ಯ ಪಾತ್ರವಹಿಸುತ್ತದೆ. ಅದರೊಂದಿಗೆ ಪುರುಷರಲ್ಲಿ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನಿನ ಉತ್ಪತ್ತಿಯನ್ನು ಪ್ರೇರೇಪಿಸುತ್ತದೆ. ದಿನಾಲು ಮೆಂತ್ಯ ಪುಡಿಯನ್ನು ಅಥವಾ ಮೆಂತ್ಯ ಸೊಪ್ಪನ್ನು ಸೇವಿಸುವುದರಿಂದ ಬೊಜ್ಜುತನ ನಿವಾರಣೆಯನ್ನು ಕಾಣಬಹುದು. ಏಕೆಂದರೆ ಇದರಲ್ಲಿರುವ ಫೈಬರ್ನ ಅಂಶ ತೂಕ ಇಳಿಕೆಗೆ ಬಹಳ ಉಪಯೋಗಕಾರಿ.

ಹೃದಯ ಸಂಬಂಧಿ ಕಾಯಿಲೆಗಳಿಗೆ ಮೆಂತ್ಯೆ ಮನೆ ಮದ್ದಾಗಿದೆ

ಗ್ಲಾಕ್ಟೋಮನನ್ ಕೇವಲ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಲ್ಲಿಯೂ ವಿಶೇಷ ಪಾತ್ರವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯಘಾತ ಮತ್ತು ಕಾರ್ಡಿಯಾಕ್ ಅರೆಸ್ಟ್ ಅತ್ಯಂತ ಅಪಾಯಕಾರಿಯಾಗಿವೆ. ಹದಿಹರೆಯದ ಮಕ್ಕಳಿಂದ ಮುದುಕರವರೆಗೂ ಹೃದಯಾಘಾತದಿಂದ ಸಾವನ್ನಪ್ಪುವುದು ಸಾಮಾನ್ಯವಾಗಿ ಹೋಗಿದೆ. ಶಾಲಾ ಮಕ್ಕಳನ್ನು ಸಹ ಈ ಹೃದಯಘಾತ ಬಿಟ್ಟಿಲ್ಲ. ಈ ಅಕಾಲಿಕ ಮರಣಗಳಿಗೆ ಹೃದಯಘಾತ ಕಾರಣವಾಗಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಇಂತಹ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಮತ್ತು ಮುನ್ನಚ್ಚರಿಕೆವಹಿಸುವುದು ನಮ್ಮ ಕರ್ತವ್ಯ. ದಿನನಿತ್ಯವೂ ಮೆಂತೆ ಸೊಪ್ಪನ್ನು ಅಥವಾ ಮೆಂತೆ ಕಾಳನ್ನು ಸೇವಿಸುವುದರಿಂದ ಇಂತಹ ಹೃದಯ ಸಂಬಂಧಿ ಕಾಯಿಲೆಗೆ ಪೂರ್ಣ ವಿರಾಮವನ್ನಿಕ್ಕಬಹುದು.

ಜೀರ್ಣ ಕ್ರಿಯೆಯಲ್ಲಿ ಮೆಂತೆಯ ಪಾತ್ರ

ಜೀರ್ಣಕ್ರಿಯೆ ಸಮಸ್ಯೆ ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ದಿನನಿತ್ಯದ ಆಹಾರ ವ್ಯತ್ಯಾಸದಲ್ಲಿ ಅಥವಾ ನಮ್ಮ ದೇಹಕ್ಕೆ ಒಗ್ಗದ ಆಹಾರ ಪದಾರ್ಥವನ್ನು ಸೇವಿಸಿದಾಗ ಅಜೀರ್ಣದ ಸಮಸ್ಯೆ ಎದುರಾಗುತ್ತದೆ. ಇಂತಹ ಸಮಸ್ಯೆಯನ್ನು ತಡೆಗಟ್ಟಲು ಮೆಂತ್ಯ ಸೊಪ್ಪು ಮತ್ತು ಕಾಳು ಇವೆರಡು ಸಹಾಯಕ್ಕೆ ಬರುತ್ತವೆ. ದೇಹದಿಂದ ವಿಷಕಾರಿ ಅಂಶವನ್ನು ಹೊರ ಹಾಕುವ ಗುಣವನ್ನು ಮೆಂತೆಯು ಹೊಂದಿರುವುದರಿಂದ ಇದು ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ .ಅಷ್ಟೇ ಮಲಬದ್ಧತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಋತುಚಕ್ರದ ಸಮಯದಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಮತ್ತು ಕಿರಿಕಿರಿಗಳನ್ನು ಅನುಭವಿಸುತ್ತಾರೆ. ಇದನ್ನೆಲ್ಲಾ ಹೋಗಲಾಡಿಸಲು ಸಹ ಮೆಂತೆ ಸೊಪ್ಪು ಸಹಾಯಕ್ಕೆ ಬರುತ್ತದೆ. ಈಸ್ಟ್ರೋಜನ್, ಡಿಯೋಸ್ಗನಿನ ಸಂಯುಕ್ತವು ಋತುಚಕ್ರದ ಸಮಯದಲ್ಲಿ ಉಂಟಾಗುವ ಕಿರಿಕಿರಿ, ಹೊಟ್ಟೆ ಮತ್ತು ಕಿಪುಟ್ಟೆಗಳ ಭಾಗದಲ್ಲಿ ಉಂಟಾಗುವ ಸೆಳೆತವನ್ನು ಕಡಿಮೆ ಮಾಡುತ್ತದೆ . ಅಷ್ಟೇ ಅಲ್ಲದೆ ಮೆನಪಾಸ್ ಎಂದರೆ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ.

ದೇಹದಲ್ಲಿ ಕಬ್ಬಿಣದ ಅಂಶನವನ್ನು ಹೆಚ್ಚಿಸಲು ಮೆಂತ್ಯೆ ಸಹಾಯಕ 

ಮಹಿಳೆಯರು ಸಾಮಾನ್ಯವಾಗಿ ಕಬ್ಬಿಣದ ಅಂಶದ ಕೊರತೆಯಿಂದ ಬಳಲುತ್ತಲೇ ಇರುತ್ತಾರೆ. ಋತುಚಕ್ರದ ಆರಂಭ, ಗರ್ಭಧಾರಣೆ ,ಹೆರಿಗೆಯ ನಂತರ ಹಾಲುಣಿಸುವ ಸಂದರ್ಭದಲ್ಲಿಯೂ ಸಹ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯು ಎದುರಾಗುತ್ತದೆ. ಮೆಂತ್ಯ ಸೊಪ್ಪು ಒಂದು ಹಸಿರು ತರಕಾರಿ ಆಗಿರುವುದರಿಂದ ಇದರಲ್ಲಿ ಸಾಕಷ್ಟು ಕಬ್ಬಿಣ ಅಂಶದ ತತ್ವವಿದೆ. ಇದನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಕಬ್ಬಿನಾಂಶದ ಪೂರೈಕೆಯು ಸಲೀಸಾಗಿ ಆಗುತ್ತದೆ . ಹೀಗೆ ಮಹಿಳೆಯರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಲ್ಲಿ ಮೆಂತ್ಯ ಸೊಪ್ಪು ಪರಿಹಾರವನ್ನು ಒದಗಿಸುತ್ತದೆ.

ತೂಕ ಇಳಿಸುವಿಕೆ ಮತ್ತು ದೇಹದಾರ್ಢ್ಯ ದಲ್ಲಿ ಮೆಂತೆಯ ಉಪಯೋಗ

ಮೆಂತ್ಯ ಸೊಪ್ಪಿನಿಂದ ಇನ್ನೂ ಅಧಿಕವಾದ ಔಷಧಿ ಲಾಭವನ್ನು ನಾವು ಪಡೆದುಕೊಳ್ಳಬಹುದು. ಹಲವರು ಎಷ್ಟೇ ದೈಹಿಕ ವ್ಯಾಯಾಮವನ್ನು ಮಾಡಿದರು, ಆಹಾರ ಪದ್ಧತಿಯಲ್ಲಿ ಯಾವ ಒಳ್ಳೆಯ ಬದಲಾವಣೆಯನ್ನು ಮಾಡಿಕೊಳ್ಳದಿದ್ದರೆ ಅವರು ಬಯಸಿದ ಪ್ರತಿಫಲ ಎಂದಿಗೂ ಸಿಗುವುದಿಲ್ಲ. ಏಕೆಂದರೆ ತೂಕ ಇಳಿಕೆಯಲ್ಲಾಗಲಿ ಅಥವಾ ದೇಹದಾಢ್ಯತೆಯಲ್ಲಾಗಲಿ ನಾವು ಮಾಡುವ ವ್ಯಾಯಾಮದ ಪ್ರತಿಫಲ ಕೇವಲ 20 ಪ್ರತಿಶತವಾಗಿರುತ್ತದೆ. ಉಳಿದ 80 ಪ್ರತಿಶತ ನಮ್ಮ ದೇಹದ ಬದಲಾವಣೆಗೆ ಕಾರಣವಾಗುವುದು ನಮ್ಮ ಆಹಾರ ಪದ್ಧತಿ. ದಿನನಿತ್ಯ ನಾವು ಏನು ಸೇವಿಸುತ್ತೇವೆ ಎಂಬುದು ನಮ್ಮ ದೇಹದ ಆರೋಗ್ಯಕ್ಕೆ ಕಾರಣವಾಗುತ್ತದೆ. ಎಷ್ಟು ವ್ಯಾಯಾಮವನ್ನು ಮಾಡುತ್ತೆವೆಯೊ ಅಷ್ಟೇ ಹಸಿವು ಸಹಿತ ಆಗುತ್ತದೆ. ಮೆಂತ್ಯ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯುವುದರಿಂದ ಅದರಲ್ಲಿರುವ ನಾರಿನಂಶವು ಬೇಗನೆ ಹಸಿವಾಗುವುದನ್ನು ತಡೆದು, ಹೊಟ್ಟೆಯನ್ನು ದೀರ್ಘಕಾಲದ ವರೆಗೆ ತುಂಬಿಸಿರುತ್ತದೆ. ಇದರಿಂದ ಸಿಹಿ ಪದಾರ್ಥವಾಗಲಿ ಅಥವಾ ಕರಿದ ಪದಾರ್ಥವನ್ನಾಗಲಿ ತಿನ್ನುವ ಬಯಕೆ ಉಳಿಯುವುದಿಲ್ಲ. ಅಷ್ಟೇ ಅಲ್ಲ ದೇಹದಲ್ಲಿರುವ ಟ್ರೈಗ್ಲಿಸರೈಡ್ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ಮೆಂತ್ಯ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಎದೆ ಉರಿ, ಉರಿಯೂತ ಹೀಗೆ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುವುದು ಮೆಂತ್ಯದ ಸೊಪ್ಪು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮೆಂತೆಯು ಸಹಾಯಕ 

ಮೆಂತ್ಯದ ಸೊಪ್ಪು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಾಯ ಮಾಡುತ್ತದೆ. ಮೆಂತ್ಯದ ಸೊಪ್ಪಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಬೀಟಾ ಕೆರೋಟಿನ್ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಎಲ್ಲಾ ಖಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ನಮ್ಮ ದೇಹಕ್ಕೆ ಲಭಿಸುತ್ತದೆ.

ಮೆಂತ್ಯೆ, ಕೆಮ್ಮು ,ಚರ್ಮದ ಮೇಲೆ ಉಂಟಾಗುವ ಬೊಕ್ಕೆ, ಬ್ರ್ಯಾಂಕೈಟಿಸ್ ಮತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಕಿಡ್ನಿ ಸಮಸ್ಯೆ ಮತ್ತು ಊತ ಏನಾದರೂ ಕಂಡುಬಂದಲ್ಲಿ ಇದನ್ನು ಪರಿಹರಿಸಲು ದಿನಾಲು ಮೆಂತ್ಯ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು .ಸ್ವಲ್ಪ ಪ್ರಮಾಣದಲ್ಲಿ ಕಹಿಯ ಅಂಶ ಇದ್ದರೂನು ಇದು ಎಲ್ಲಾ ರೀತಿಯ ಸೋಂಕುಗಳು ಮತ್ತು ನೋವುಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ಮೆಂತೆ ಹಿಮೋಗ್ಲೋಬೀನ್ ಹೆಚ್ಚಿಸುವಲ್ಲಿ ಸಹಾಯಕ

ಮೆಂತ್ಯೆ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತಹೀನತೆಗೆ ಒಂದು ಮುಖ್ಯ ಕಾರಣವೆಂದರೆ ಅದು ಹಿಮೋಗ್ಲೋಬಿನ ಕೊರತೆ. ಮೆಂತ್ಯ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ಕೊಬ್ಬಿನ ಅಂಶವು ಹಿಮೋಗ್ಲೋಬಿನ್ ಹೆಚ್ಚುವಿಕೆಯನ್ನು ಪ್ರೇರೇಪಿಸಿ, ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ರಕ್ತಹೀನತೆ ಕಂಡು ಬಂದಲ್ಲಿ ಮೆಂತೆ ಸೊಪ್ಪಿನ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ.

ಮೊಡವೆಗಳ ನಿವಾರಣೆಗೆ ಮೆಂತೆಯ ಉಪಯೋಗ

ಹೆಣ್ಣಾಗಲಿ ಗಂಡಾಗಲಿ ಪ್ರೌಡಾವಸ್ಥೆಯ ಸಮಯದಲ್ಲಿ ಮುಖದ ಮೇಲೆ ಮೊಡವೆ ಉಂಟಾಗುವುದು ಸರ್ವೇಸಾಮಾನ್ಯ. ಪ್ರೌಢಾವಸ್ಥೆ ಕಳೆದರು ಕೆಲವರಿಗೆ ಆಹಾರದ ವ್ಯತ್ಯಾಸದಿಂದ ,ನೀರಿನ ವ್ಯತ್ಯಾಸದಿಂದ ಅಥವಾ ಅವರ ದೇಹ ಪ್ರಕೃತಿಯ ಕಾರಣದಿಂದಲೇ ಮೊಡವೆಗಳು ಉಂಟಾಗುತ್ತವೆ. ಕೆಲವು ದಿನಗಳ ಬಳಿಕ ಮೊಡವೆಗಳು ಮಾಯವಾದರೂ ,ಅದರ ಕಲೆ ಹಾಗೆ ಉಳಿದುಕೊಳ್ಳುತ್ತದೆ. ಸ್ವಚ್ಛವಾದ ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಕಲೆಗಳು ಶೋಭೆ ತರುವುದಿಲ್ಲ. ಇಂತಹ ಕಲೆಗಳನ್ನು ಹೋಗಲಾಡಿಸಲು ಮೆಂತೆ ನಮಗೆ ಸಹಾಯ ಮಾಡುತ್ತದೆ. ಮೆಂತ್ಯ ಸೊಪ್ಪನ್ನು ನೀರಿನಲ್ಲಿ ಸೇರಿಸಿ ರುಬ್ಬಿ ಅದರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು, 15 ನಿಮಿಷಗಳ ನಂತರ ಮುಖ ಕಳೆದುಕೊಳ್ಳುವುದರಿಂದ ಮುಖದ ಮೇಲಿನ ಕಲೆ ಹಂತ ಹಂತವಾಗಿ ನಿವಾರಣೆಯಾಗುತ್ತಾ ಬರುತ್ತದೆ. ಮತ್ತು ಮೊಡವೆಗಳು ಮರಳಿ ಬರುವ ಆತಂಕವನ್ನು ದೂರ ಮಾಡುತ್ತವೆ.

ಕೂದಲಿನ ಆರೋಗ್ಯಕ್ಕಾಗಿ ಮೆಂತೆ

ಮೆಂತ್ಯೆಯನ್ನು ಅನಾದಿ ಕಾಲದಿಂದ ಮನೆಮದ್ದಾಗಿ ಬಳಸುತ್ತಿರುವ ಮುಖ್ಯ ಕಾರಣವೆಂದರೆ ಕೂದಲಿನ ಆರೋಗ್ಯವನ್ನು ಕಾಪಾಡುವುದು. ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲದೆ ಇಬ್ಬರಲ್ಲಿಯೂ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಕೂದಲು ಉದುರುವಿಕೆ. ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಮಾನವರಲ್ಲಿ ಉಂಟಾಗುವ ಮಾನಸಿಕ ಒತ್ತಡ ಹೀಗೆ ಹಲವಾರು ಸಮಸ್ಯೆಗಳಿಂದ ಕೂದಲು ಉದುರಲು ಶುರುವಾಗುತ್ತದೆ. ಹೀಗೆ ಉದುರುವ ಕೂದಲನ್ನು ಮತ್ತೆ ಅದರ ನೈಜ ಸ್ಥಿತಿಗೆ ತರಲು ಎಷ್ಟೇ ಪ್ರಯತ್ನ ಪಟ್ಟರು ಅವೆಲ್ಲವೂ ವ್ಯರ್ಥವಾಗಿ ಹೋಗುತ್ತವೆ. ದುಬಾರಿ ಶಾಂಪೂ ,ತೈಲ ಇವುಗಳ ಬಳಕೆಯಿಂದ ಹಣ ವ್ಯವಾಗುತ್ತದೆಯೇ ಹೊರತು, ಯಾವ ಪ್ರತಿಫಲವು ಸಿಗುವುದಿಲ್ಲ. ಆದರೆ ಈ ಸಮಸ್ಯೆಗೆ ಪರಿಹಾರ ನಮ್ಮ ಮನೆಯಲ್ಲಿಯೇ ಇದೆ. ಮೆಂತ್ಯ ಸೊಪ್ಪಿನ ಅಥವಾ ಮೆಂತ್ಯ ಪುಡಿಯ ಪೇಸ್ಟನ್ನು ತಯಾರಿಸಿ ಕೂದಲಿನ ಬುಡಕ್ಕೆ ಅಂದರೆ ನಮ್ಮ ನೆತ್ತಿಗೆ ಹಚ್ಚಿ ಅದು ಒಣಗಿದ ನಂತರ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ, ಹೊಟ್ಟಾಗುವಿಕೆ ಅಷ್ಟೇ ಏಕೆ ಕೂದಲು ಬೆಳ್ಳಗಾಗುವಿಕೆಯನ್ನೂ ತಡೆಯಬಹುದು. ಅಷ್ಟೇ ಅಲ್ಲದೆ ಕೂದಲು ಉದುರುವಿಕೆಗೆ ಇನ್ನೊಂದು ಪರಿಹಾರವೆಂದರೆ ಮೆಂತ್ಯದ ಎಣ್ಣೆ. ಮೆಂತ್ಯದ ಕಾಳನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ ಅದನ್ನು ಸ್ವಲ್ಪ ಪ್ರಮಾಣದಲ್ಲಿ ಬಿಸಿ ಮಾಡಿ, ಮೆಂತೆಯ ಅಂಶವನ್ನು ತೆಂಗಿನ ಎಣ್ಣೆಯು ಹೀರಿಕೊಂಡ ನಂತರ ನಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು, ನಂತರದಲ್ಲಿ ಕೂದಲನ್ನು ಚೆನ್ನಾಗಿ ತೊಳೆಯುವುದರಿಂದಲೂ ಸಹ ಕೂದಲು ದುರುವಿಕೆಯನ್ನು ತಡೆಯಬಹುದು.

ಇಷ್ಟೆಲ್ಲಾ ಔಷಧಿಯ ಗುಣಗಳನ್ನು ಹೊಂದಿರುವ ಮೆಂತೆ ಸೊಪ್ಪು ಮತ್ತು ಮೆಂತೆ ಕಾಳುಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದು ಉತ್ತಮವಾಗಿದೆ. ಇದರಿಂದ ದೇಹಕ್ಕೆ ಅಗತ್ಯವಿರುವ ಪ್ರತಿಯೊಂದು ಪೌಷ್ಟಿಕಾಂಶವೂ ಪೂರ್ತಿ ಗೊಳ್ಳುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳನ್ನು ಬಳಸದೆ, ಮನೆಯಲ್ಲೇ ಸಿಗುವ ಮೆಂತೆ ಸೊಪ್ಪಿನಂತಹ ಹಲವಾರು ಮನೆಮದ್ದುಗಳನ್ನು ಬಳಸಿಕೊಂಡು ನಮ್ಮ ಆರೋಗ್ಯದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕೇವಲ ನಾವು ಮಾತ್ರ ತಿಳಿದುಕೊಳ್ಳುವುದಲ್ಲದೆ ನಮ್ಮ ಮುಂದಿನ ಪೀಳಿಗೆಯವರೆಗೂ ಈ ಎಲ್ಲಾ ಜ್ಞಾನವನ್ನು ಹಸ್ತಾಂತರಿಸುವುದರ ಮೂಲಕ ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಕಾಲದಿಂದ ಕಾಪಾಡಿಕೊಂಡು ಬಂದಿರುವ ಮನೆಮದ್ದು ಅಜರಾಮರವಾಗುತ್ತದೆ. ಹೀಗಾಗಿ ನಮ್ಮ ಮನೆಯಲ್ಲಿ ಸಿಗುವ ಮನೆಮದ್ದುಗಳನ್ನು ಬಳಸಿಕೊಂಡು ನಮ್ಮ ಜೀವನವನ್ನು ಉತ್ತಮವಾಗಿರಿಸಿಕೊಳ್ಳೋಣ. ಅದರೊಂದಿಗೆ ಇತರರಿಗೂ ಈ ಮನೆಮದ್ದುಗಳ ಬಗ್ಗೆ ತಿಳಿಸಿದರೆ ಅವರ ಜೀವನದ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸಿದಂತೆ ಆಗುತ್ತದೆ ಮತ್ತು ನಮ್ಮ ದೇಶದ ಪುರಾತನ ಔಷಧೀಯ ತತ್ವಗಳು ಬೆಳಕಿಗೆ ಬರುತ್ತವೆ.


Share this with your friends...

Leave a Comment

Your email address will not be published. Required fields are marked *