ಹಾಲಿನ ಔಷಧಿ ಗುಣಗಳು

Share this with your friends...

“ಭೋಜನಾಂತೆ ಪಿಭೋತ್ತಕ್ರಮ್ ವಾಸರಾಂತೆ ಪಿಬೆತ್ಪಯಃ | ನಿಶಾಂತೇ ಚ ಪಿಬೆದ್ವಾರಿ ತ್ರಿಭಿರ್ರೋಗೋ ನ ಜಾಯತೆ || ” ಎಂದರೆ ಊಟದ ನಂತರ ಮಜ್ಜಿಗೆಯನ್ನು, ರಾತ್ರಿಯಲ್ಲಿ ಹಾಲನ್ನು ಮತ್ತು ಹಗಲಲ್ಲಿ ನೀರನ್ನು ಕುಡಿಯುವುದರಿಂದ ಮನುಷ್ಯನಿಗೆ ಯಾವ ಕಾಯಿಲೆಯೂ ಬರುವುದಿಲ್ಲ. ಇಂಥ ಮಹತ್ವವನ್ನು ಹೊಂದಿರುವ ಹಾಲನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. “ಗೋಮಾತೆ “ಎಂದು ಪೂಜಿಸುವ ಹಸುವಿನ ಕ್ಷೀರ ಶ್ರೇಷ್ಠವಾದದ್ದು. ಹಸುಳೆಯಾಗಿದ್ದಾಗ ತಾಯಿಯ ಎದೆಯ ಹಾಲನ್ನು ಕುಡಿದ ಮನುಷ್ಯ ದೊಡ್ಡವನಾದ ಮೇಲೆ ಕುಡಿಯುವುದು ಗೋಮಾತೆಯ ಹಾಲು. ಇಂತಹ ಹಾಲಿನಲ್ಲಿ ಬಹಳಷ್ಟು ಔಷಧೀಯ ತತ್ವಗಳಿವೆ. ದಿನಾಲು ಹಾಲು ಕುಡಿಯುವುದರಿಂದ ಬೆಳೆಯುವ ಮಕ್ಕಳ ಮೂಳೆಯ ಶಕ್ತಿ ವೃದ್ಧಿಸುತ್ತದೆ ಮತ್ತು ಮೆದುಳಿನ ಸಂಪೂರ್ಣ ಬೆಳವಣಿಗೆಗೆ ಹಾಲು ಉತ್ತಮವಾದ ಆಹಾರವಾಗಿದೆ. ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುವ ಹಾಲು ಒಂದು ಸಂಪೂರ್ಣ ಆಹಾರವಾಗಿದೆ. ಹಾಲು ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಹಲವಾರು ವಿಟಮಿನ್ ಗಳನ್ನು ಹೊಂದಿದೆ. ಕೇವಲ ಹಸುಗಳು ಮಾತ್ರವಲ್ಲದೆ ಇನ್ನೂ ಬಹಳಷ್ಟು ಸಸ್ತನಿಗಳು ಹಾಲನ್ನು ಉತ್ಪತ್ತಿ ಮಾಡುತ್ತವೆ. ಆದರೆ ಅವುಗಳಲ್ಲಿ ಅನಾದಿಕಾಲದಿಂದಲೂ ನಾವು ಸೇವಿಸುತ್ತಾ ಬಂದಿರುವಂತಹ ಹಸುವಿನ ಹಾಲು ಪ್ರಾಮುಖ್ಯತೆಯನ್ನು ಪಡೆದಿದೆ. ಹಿಂದೂ ಧರ್ಮದಲ್ಲಿ ಹಸುವಿನ ಹಾಲನ್ನು ಕೇವಲ ಆಹಾರವನ್ನಾಗಿ ನೋಡದೆ ಅನೇಕ ಹಿಂದೂ ಧರ್ಮಾಚರಣೆಗಳಲ್ಲಿ  ಪರಿಶುದ್ಧವಾದ ತೀರ್ಥದಂತೆ ಕಾಣುತ್ತೇವೆ. ಏಕೆಂದರೆ ಮಾನವನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೊಡೆದು ಹಾಕುವ ಶಕ್ತಿ ಈ ಕ್ಷೀರದಲ್ಲಿದೆ.

ಹಾಲಿನಲ್ಲಿ ಹೇರಳವಾಗಿ ಸಿಗುವಂತ ಅಂಶ ಕ್ಯಾಲ್ಸಿಯಂ. ಕ್ಯಾಲ್ಸಿಯಂ ನಮ್ಮ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ನಮ್ಮ ಹಲ್ಲು ಮತ್ತು ಮೂಳೆಗಳ ಆರೋಗ್ಯಕ್ಕೂ ಕ್ಯಾಲ್ಸಿಯಂ ಒಳ್ಳೆಯದು. ರಕ್ತ ಹೆಪ್ಪುಗಟ್ಟಿಸುವ ಮತ್ತು ಗಾಯವು ಬೇಗನೆ ಮಾಯುವಂತೆ ಮಾಡುವ ಶಕ್ತಿ ಕ್ಯಾಲ್ಸಿಯಂ ಗೆ ಇದೆ. ಅಷ್ಟೇ ಅಲ್ಲದೆ ರಕ್ತ ಒತ್ತಡದ ಸಮತೋಲನ ಕಾಪಾಡುತ್ತದೆ. ಇಂತಹ ಕ್ಯಾಲ್ಸಿಯಂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದಲ್ಲಿ ಡಿ ವಿಟಮಿನ್ ಅವಶ್ಯಕತೆ ಇದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಲಭ್ಯವಿರುವ ಕಾರಣ, ನಮ್ಮ ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ರಾಮಬಾಣದಂತೆ ವರ್ತಿಸುತ್ತದೆ. ಹೃದಯದ ಕಾಯಿಲೆ, ಹೈ ಬಿಪಿ ಮತ್ತು ಕಿಡ್ನಿ ಸ್ಟೋನ್ಸ್ ಸಮಸ್ಯೆಗಳಿಗೆ ಪರಿಹಾರ ಎಂದರೆ ಪೊಟ್ಯಾಶಿಯಂ ನ ಅಂಶ. ಇಂತಹ ಪೊಟ್ಯಾಶಿಯಂ ಸಹಿತ ಹಾಲಿನಲ್ಲಿ ಇರುವುದರಿಂದ ನಮಗೆ ಈ ಎಲ್ಲಾ ರೋಗಗಳು ಬರದಂತೆ ಕಾಪಾಡುತ್ತದೆ.

ಮೆದುಳಿನ ಆರೋಗ್ಯಕ್ಕೂ ಹಾಲು ಸಹಾಯಕ.

ಹಾಲು ಮೆದುಳಿನ ಆರೋಗ್ಯಕ್ಕೂ ಸಹಾಯಕ. ದಿನನಿತ್ಯ ಹಾಲನ್ನು ಸೇವಿಸುವ ಮಕ್ಕಳಲ್ಲಿ ಅತ್ಯುತ್ತಮವಾದ ಮೆದುಳಿನ ಬೆಳವಣಿಗೆಯನ್ನು ನಾವು ಕಾಣಬಹುದು. ಏಕೆಂದರೆ ಹಾಲಿನ ಸೇವನೆಯು ಮೆದುಳಿನ ಆರೋಗ್ಯಕ್ಕೆ ಪುಷ್ಟಿ ನೀಡುವಂತಹ ಗ್ಲೂಟಾಥಿಯೋನ್ ಅನ್ನು ಉತ್ಪತ್ತಿ ಮಾಡುತ್ತದೆ. ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಹಾಲು ಅತ್ಯುತ್ತಮ ಪರಿಹಾರವಾಗಿದೆ. ರಕ್ತ ಮತ್ತು ಹೃದಯದ ಆರೋಗ್ಯಕ್ಕೆ ಕಾರಣವಾಗಿರುವ ಪೊಟ್ಯಾಶಿಯಂ ಅನ್ನು ಹೊಂದಿರುವ ಹಾಲು ಸೋಡಿಯಂ ಅನ್ನು ಕಡಿಮೆ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

ಹಾಲು ಮಾನಸಿಕ ಸ್ಥಿಮಿತವನ್ನು ಕಾಪಾಡುತ್ತದೆ

ಈಗಿನ ಯುಗದಲ್ಲಿ ದೈಹಿಕ ಅನಾರೋಗ್ಯವು ಎಷ್ಟು ಕಾಡುತ್ತಿದೆಯೋ ಅಷ್ಟೇ ಮಾನಸಿಕ ಅನಾರೋಗ್ಯವು ಜನರನ್ನು ಬೆಂಬಿಡದೆ ಕಾಡುತ್ತಿದೆ. ಕೆಲಸ, ಭವಿಷ್ಯ ಎನ್ನುವ ಹಲವಾರು ಒತ್ತಡಗಳಿಂದ ಮಾನಸಿಕ ನೋವುಗಳನ್ನು ಅನುಭವಿಸಿರುವ ಬಹಳಷ್ಟು ಜನರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಈ ಮಾನಸಿಕ ಅಸ್ವಸ್ಥತೆಯಿಂದ ಊಟ, ನಿದ್ದೆಗಳ ಪರಿವಿಲ್ಲದೆ ದಿನವಿಡೀ ಖಿನ್ನತೆಗೆ ಒಳಗಾಗುತ್ತಾರೆ. ಹಾಲಿನಲ್ಲಿರುವ ವಿಟಮಿನ್ ಡಿ ಯು ಹಸಿವು, ನಿದ್ದೆ ಮತ್ತು ಒಳ್ಳೆಯ ಮನಸ್ಥಿತಿಗೆ ಸಹಾಯಕವಾಗುವ ಸೆರಾಟೋನಿನ್ ಎನ್ನುವ ಹಾರ್ಮೋನನ್ನು ಉತ್ಪತ್ತಿ ಮಾಡುವ ಮೂಲಕ ಮಾನವನ ಮಾನಸಿಕ ಆರೋಗ್ಯವನ್ನು ಸಹ ಕಾಪಾಡುತ್ತದೆ.//

ದೇಹಕ್ಕೆ ಬೇಕಾದ ಪ್ರೊಟೀನನ್ನು ಹಾಲು ಒದಗಿಸುತ್ತದೆ

ಹಾಲು ಪ್ರೋಟಿನ್ ನ ಒಂದು ಅತ್ಯುತ್ತಮ ಮೂಲವಾಗಿದೆ. ಮನುಷ್ಯನ ದೇಹಕ್ಕೆ ಬೇಕಾಗಿರುವ ಹಲವಾರು ಅಂಶಗಳಲ್ಲಿ ಪ್ರೋಟೀನ್ ಸಹ ಒಂದು. ದಿನನಿತ್ಯದ ಕಾರ್ಯ ವಹಿವಾಟುಗಳಿಗೆ ಮಾನವನ ದೇಹ ಸ್ಪಂದಿಸಬೇಕಾದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಫ್ಯಾಟ್ಸ್ ಮುಂತಾದವುಗಳು ಅವಶ್ಯಕವಾಗಿ ಬೇಕು. ಅದರಲ್ಲಿಯೂ ಪ್ರೊಟೀನ್ ಅಂಶ ಮಾನವನ ದೇಹಕ್ಕೆ ಬಲು ಮುಖ್ಯ. ದಿನನಿತ್ಯದ ದೈಹಿಕ ಚಟುವಟಿಕೆಗಳಿಂದ ಮನುಷ್ಯನ ಮಾಂಸ ಖಂಡಗಳಿಗೆ ಸಣ್ಣ ಪ್ರಮಾಣದಲ್ಲಿ ಹೊಡೆತ ಉಂಟಾಗುತ್ತದೆ. ಹೀಗೆ ಉಂಟಾಗುವ ಹಾನಿಯನ್ನು ಸರಿಪಡಿಸಲು ಪ್ರೋಟೀನ್ ಅಗತ್ಯ ಇದೆ. ಇಂತಹ ಪ್ರೋಟೀನ್, ಹಾಲಿನಲ್ಲಿ ಹೇರಳವಾಗಿ ದೊರಕುತ್ತದೆ. ಒಂದು ಲೋಟ ಹಾಲಿನಲ್ಲಿ ಎಂಟು ಗ್ರಾಂ ಪ್ರೋಟೀನ್ ಇರುತ್ತದೆ. ಕೇವಲ ಮಾಂಸಖಂಡಗಳ ದುರಸ್ತಿಗಷ್ಟೇ ಅಲ್ಲದೆ ಪ್ರೋಟೀನ್ ತೂಕ ಇಳಿಕೆಗೂ ಬಹಳಷ್ಟು ಸಹಾಯ ಮಾಡುತ್ತದೆ .ತೂಕ ಇಳಿಕೆಯಲ್ಲಿ ಮತ್ತು ದೇಹ ದಾರ್ಡ್ಯತೆ ಯಲ್ಲಿ ಬಹು ಮುಖ್ಯವಾಗಿ ಸೇವಿಸಬೇಕಾದದ್ದು ಪ್ರೋಟಿನ್. ಹೀಗಾಗಿ ಪ್ರೊಟೀನ್ ನ ಮಾತ್ರ ಭರಪೂರವಾಗಿ ಸಿಗುವಂತಹ ಹಾಲನ್ನು ದಿನ ನಿತ್ಯ ಸೇವಿಸುವುದರಿಂದ ನಾವು ಆರೋಗ್ಯದಿಂದಿರಲು ಮತ್ತು ಬಲಿಷ್ಠ ವಾಗಿರಲು ಸಹಾಯಕವಾಗುತ್ತದೆ.

ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿ ಹಾಲಿನ ಪಾತ್ರ

ಹೆಣ್ಣಾಗಲಿ, ಗಂಡಾಗಲಿ ಪ್ರತಿಯೊಬ್ಬರು ತಮ್ಮ ತ್ವಚೆಯ ಸೌಂದರ್ಯಕ್ಕಾಗಿ ಹಲವಾರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇಂತವರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ತ್ವಚೆಯ ಹಲವಾರು ಸಮಸ್ಯೆಗಳಿಗೆ ಪರಿಹಾರ ಹಾಲಿನ ಉಪಯೋಗ. ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇರುತ್ತದೆ. ಈ ಆಸಿಡ್ ಮುಖದ ಚರ್ಮದ ಆಳದ ವರೆಗೆ ಹೋಗಿ ಅಲ್ಲಿ ಸೇರಿರುವ ಎಣ್ಣೆಯ ಅಂಶ ಮತ್ತು ಕೊಳಕನ್ನು ತೆಗೆಯುವುದರ ಮೂಲಕ ಮುಖದ ತ್ವಚೆಯನ್ನು ಸ್ವಚ್ಚ ಮಾಡುತ್ತದೆ. ಅಷ್ಟೇ ಅಲ್ಲದೆ, ಮೋಡವೆಯನ್ನು ಉಂಟುಮಾಡುವ ಬ್ಯಾಕ್ಟೀರಿಯ ವನ್ನು ಮೂಲದಿಂದಲೇ ಹೊಡೆದು ಹಾಕಿ, ಮೊಡವೆಯನ್ನು ನಿವಾರಿಸಿ, ಪುನಃ ಬಾರದಂತೆ ಕಾಳಜಿ ವಹಿಸುತ್ತದೆ. ಕುದಿಸದ, ಆಗತಾನೆ ಸಿಕ್ಕ ಹಸಿಯ ಹಾಲು ಚರ್ಮವನ್ನು ಮೃದುವಾಗಿಸುತ್ತದೆ. ಅದರೊಂದಿಗೆ, ತ್ವಚೆಯ ಉರಿ, ಊತವನ್ನೂ ಸಹ ನಿವಾರಿಸುತ್ತದೆ. ಹಾಲಿನಲ್ಲಿ ತ್ವಚೆಯನ್ನು ಮೃದು ಮತ್ತು ಆರ್ದ್ರ ಗೊಳಿಸುವ ಬಯೋಟಿನ್ ನಂತಹ ಹಲವಾರು ಅಂಶಗಳು ಇರುತ್ತವೆ. ಇಂತಹ ಅಂಶಗಳು ಒಣ, ನಿರ್ಜೀವ ತ್ವಚೆಯನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತವೆ. ಹಾಲಿನಲ್ಲಿರುವ ಅಂಶಗಳು ಚರ್ಮದ ಆಳಕ್ಕೆ ಹೋಗಿ, ಅಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಿ, ಚರ್ಮದಲ್ಲಿ ಹೊಸ ಚೈತನ್ಯ ತರುತ್ತದೆ ಮತ್ತು ಒಳಗಿನಿಂದಲೇ ಚರ್ಮದ ಕಾಂತಿಯನ್ನು ಹಿಂದಿರುಗಿಸುತ್ತದೆ. ನಮ್ಮ ತ್ವಚೆಯನ್ನು ಹೈಡ್ರೈಟ್ ಮಾಡುವುದರ ಮೂಲಕ ಚರ್ಮದ ತುರಿಕೆ, ಉರಿತ ಕಡಿಮೆ ಮಾಡಿ ಹೊಳೆಯುವ ತ್ವಚೆಯನ್ನು ನೀಡುತ್ತದೆ.

ಹಾಲು ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಮುಖವು ಸ್ವಚ್ಚವಾಗಿ, ಮೃದು ಮತ್ತು ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಹಾಲಿನಲ್ಲಿರುವ ವಿಟಮಿನ್ ಗಳು ತ್ವಚೆಯ ಆರೋಗ್ಯವನ್ನು ಕಾಪಾಡುವುದರ ಮೂಲಕ ವಯಸ್ಸಿನಿಂದಾದ ಸುಕ್ಕು, ಕಲೆಗಳನ್ನು ನಿವಾರಿಸಿ ಹರೆಯದ ತ್ವಚೆಯನ್ನು ಹಿಂದಿರುಗಿಸುತ್ತದೆ. ಹಸಿ ಹಾಲಿನಲ್ಲಿರುವ ಬೀಟಾ ಹೈಡ್ರಾಕ್ಸಿ ಎಂಬ ಅಂಶವು ಒಣಗಿದ ಚರ್ಮವನ್ನು ಸುಲಿದು, ಹೊಸ ಚರ್ಮ ಹುಟ್ಟಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಹಾಲಿನಲ್ಲಿ ಇರುವ ಪ್ರೋಟೀನ್ ಕೂಡ ತ್ವಚೆಯ ಹೊಳಪಿಗೆ ಸಹಾಯ ಮಾಡುತ್ತದೆ. ಹಾಲನ್ನು ಸಕ್ಕರೆ ಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಹಳೆಯ ಜೀವಕೋಶಗಳು ಹೋಗಿ ಚರ್ಮ ಇನ್ನಷ್ಟು ಸುಂದರವಾಗುತ್ತದೆ. ಹಾಲಿನಲ್ಲಿ ಇರುವ ಮ್ಯಾಗ್ನಿಸಿಯಂ ಅಂಶವು ಸುಕ್ಕು ನಿವಾರಣೆಗೆ ಸಹಾಯಕವಾಗಿದೆ. ಹಾಲು ಕೋಲಾಜಿನ್ ನ ಉತ್ಪತ್ತಿಯನ್ನು ವೃದ್ದಿಸುವುದರ ಮೂಲಕ ಚರ್ಮದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಅದರೊಂದಿಗೆ ಚರ್ಮವನ್ನು ಸದೃಢ ವಾಗಿಸಿ ಚರ್ಮದ ಆಯುವನ್ನು ಹೆಚ್ಚಿಸುತ್ತದೆ. ಹಾಲಿನಲ್ಲಿ ಇರುವ ವಿಟಮಿನ್ ಡಿ ಅಂಶವು ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ಹಾಲಿನೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖವು ಇನ್ನಷ್ಟು ಆರೋಗ್ಯದಿಂದಿರುತ್ತದೆ.

ಹಾಲು ಚರ್ಮದಲ್ಲಿ ಮೆಲನಿನ್ ಅಂಶವನ್ನು ಕಡಿಮೆ ಮಾಡುತ್ತದೆ

ಚರ್ಮದಲ್ಲಿ ಮೆಲನಿನ್ ಎಂಬ ಅಂಶವು ಹೆಚ್ಚಾಗಿದ್ದಲ್ಲಿ ಚರ್ಮವು ಸೂರ್ಯನ ಕಿರಣಕ್ಕೆ ಅಥವಾ ಕಾಲ ಕ್ರಮೇಣ ಕಪ್ಪಗಾಗುತ್ತಾ ಹೋಗುತ್ತದೆ. ಟೈರೋಸಿನ್ ಎಂಬ ಹಾರ್ಮೋನ್ ಮೆಲನಿನ್ ಅನ್ನು ಹಿಡಿತಕ್ಕೆ ತರುತ್ತದೆ. ಹಸಿ ಹಾಲನ್ನು ದಿನನಿತ್ಯ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಟೈರುಸಿನ್ ಉತ್ಪತ್ತಿಯು ಹೆಚ್ಚಾಗಿ ಮೆಲನಿನ್ ಅಂಶವು ಕಡಿಮೆ ಆಗುತ್ತದೆ. ಇದರಿಂದ ಮುಖದ ಬಣ್ಣದ ಕಪ್ಪಾಗುವಿಕೆ ನಿಲ್ಲುತ್ತದೆ ಮತ್ತು ಮುಖ ಇನ್ನಷ್ಟು ಬೆಳ್ಳಗಾಗುತ್ತದೆ. ಹಸಿಹಾಲು ಕೇವಲ ಮೆಲನಿನ್ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ ಸೂರ್ಯನ ಕಿರಣಗಳಿಂದಾದ ಕಪ್ಪು ತನವನ್ನು ಸಹ ತೆಗೆದು ಹಾಕುತ್ತದೆ. ದಿನದಲ್ಲೇ ಅತಿ ಹೆಚ್ಚು ಸಮಯ ಸೂರ್ಯನ ಕಿರಣಗಳಲ್ಲಿ ಕಳೆದರೆ ಸೂರ್ಯನ ಕಿರಣಗಳಲ್ಲಿರುವ ಯುವಿ ಮತ್ತು ಬಿ ರೇಖೆಗಳು ನಮ್ಮ ಚರ್ಮವನ್ನು ಹಾನಿಗೊಳಿಸುತ್ತವೆ ಮತ್ತು ಕಂದು ಬಣ್ಣದ್ದಾಗಿಸುತ್ತವೆ. ಇದರಿಂದ ಮುಕ್ತಿ ಹೊಂದಲು ಹಾಲು ನಮ್ಮ ಸಹಾಯಕ್ಕೆ ಬರುತ್ತದೆ. ದಿನಾಲು ಹಸಿ ಹಾಲನ್ನು ಹಚ್ಚುವುದರಿಂದ ಹಾನಿಗೊಂಡ ಚರ್ಮವು ಸರಿಹೊಂದುತ್ತದೆ. ಹಸಿ ಹಾಲಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೊಸರನ್ನು ಸೇರಿಸಿ ದಿನನಿತ್ಯ ಮುಖಕ್ಕೆ ಹಚ್ಚುವುದರಿಂದಲೂ, ಈ ಹಾನಿಯನ್ನು ಹೋಗಲಾಡಿಸಬಹುದು.

ಈಗ ಎಲ್ಲೆಡೆ ಹವಾಮಾನ ವೈಪರಿತ್ಯವನ್ನು ನಾವು ಕಾಣಬಹುದು. ಬೇಸಿಗೆಯಲ್ಲಿ ಕಡುಬಿಸಿಲನ್ನು ಕಂಡರೆ, ಮಳೆಗಾಲದಲ್ಲಿ ಧೋ ಎಂದು ಸುರಿಯುವ ಧಾರಾಕಾರ ಮಳೆ. ಇದರಿಂದ ಕೇವಲ ಪ್ರಕೃತಿ ನಾಶವಾಗದೆ, ಮನುಷ್ಯನ ದೇಹಕ್ಕೂ ಹಲವಾರು ತೊಂದರೆಗಳು ಒದಗುತ್ತಿವೆ. ಪ್ರಕೃತಿಯ ತಾಪಮಾನದ ಹೆಚ್ಚಳದಿಂದ ಮಾನವನ ದೇಹದೊಳಗೂ ತಾಪಮಾನದಲ್ಲಿ ಏರುಪೇರು ಉಂಟಾಗುತ್ತದೆ. ಈ ತಾಪಮಾನವು ಮಾನವನ ಮುಖದ ಮೇಲೂ ಪರಿಣಾಮ ಬೀರುತ್ತದೆ. ಹೀಗೆ ತಾಪಮಾನ ಹೆಚ್ಚಾಗಿರುವುದನ್ನು ಕಡಿಮೆ ಮಾಡಿ ಚರ್ಮಕ್ಕೆ ತಂಪನ್ನು ಒದಗಿಸಲು ಹಾಲು ಸಹಾಯ ಮಾಡುತ್ತದೆ. ದಿನನಿತ್ಯ ಹಾಲನ್ನು ಸೇವಿಸುವುದರಿಂದ ಮತ್ತು ಮುಖಕ್ಕೆ ಬಳಸುವುದರಿಂದ ನಮ್ಮ ದೇಹವು ತಂಪಾಗಿರುತ್ತದೆ.

ಹಾಲಿನೊಂದಿಗೆ ನೈಸರ್ಗಿಕವಾಗಿ ಸಿಗುವಂತಹ ಅರಿಶಿಣ ,ಜೇನುತುಪ್ಪ ,ಕಡಲೆ ಹಿಟ್ಟು ,ಸಕ್ಕರೆ ಅಥವಾ ಕಾಫಿ ಪುಡಿ ಮುಂತಾದವುಗಳನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ, ಅದು ಚರ್ಮದಲ್ಲಿರುವಂತಹ ಮೃತಜೀವಕೋಶಗಳನ್ನು ತೆಗೆದು ,ಕೊಳಕನ್ನು ಸ್ವಚ್ಛ ಮಾಡಿ, ಮುಖಕ್ಕೆ ಹೊಸ ಹೊಳಪನ್ನು ನೀಡುತ್ತದೆ.

ಇತ್ತೀಚಿನ ದಿನಗಳಲ್ಲಿ 30 ವಯಸ್ಸು ದಾಟಿದವರಿಗೆ ಮೂಳೆಯ ಸಮಸ್ಯೆಗಳು ಎದುರಾಗಲು ಶುರುವಾಗುತ್ತವೆ. ನಮ್ಮ ಪೂರ್ವಜರು 70 ವರ್ಷ ಕಳೆದರೂ ಹದಿಹರೆಯದವರಂತೆ ಕೆಲಸ ಮಾಡಿಕೊಂಡು, ಆರೋಗ್ಯದಿಂದ ಇದ್ದರು. ಆದರೆ ನಮಗೆ 20ನೇ ವಯಸ್ಸಿನಲ್ಲಿಯೇ ಸೊಂಟ ನೋವು, ಬೆನ್ನು ನೋವು ಎಂದು ಹಲವಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇದೆಲ್ಲದರಿಂದ ಮುಕ್ತಿ ಪಡೆಯಲು ನಾವು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಎಣ್ಣೆಯಲ್ಲಿ ಕರಿದ ಅಥವಾ ಸ್ವಚ್ಛವಾಗಿರದ ಆಹಾರದ ಸೇವನೆಯಿಂದ ಹಲವಾರು ರೋಗಗಳು ಶುರುವಾಗುತ್ತವೆ. ಹೃದಯ ಸಂಬಂಧಿ ಕಾಯಿಲೆಗಳು ,ಕ್ಯಾನ್ಸರ್ ನಂತಹ ಗಂಭೀರ ರೋಗಕ್ಕೂ ತುತ್ತಾಗಬಹುದು. ಇದರ ಬದಲಿಗೆ ಮನೆಯಲ್ಲೇ ನಾವೇ ತಯಾರಿಸಿದಂತಹ ಸಾತ್ವಿಕ ಆಹಾರವನ್ನು ಸೇವಿಸುವುದರಿಂದ ಜೀವನ ಪರ್ಯಂತ ಉತ್ಸಾಹದಿಂದ ಮತ್ತು ಆರೋಗ್ಯದಿಂದ ಇರಬಹುದು. ನಮ್ಮ ಪೂರ್ವಜರ ದೀರ್ಘಾವಧಿಯ ಜೀವನದ ರಹಸ್ಯ ಇದೇ ಆಗಿದೆ.

ಇಷ್ಟೊಂದು ಲಾಭಗಳನ್ನು ಹೊಂದಿರುವ ಹಾಲನ್ನು ಸೇವಿಸಲು ಚಿಕ್ಕವರಿದ್ದಾಗಿನಿಂದ ನಮ್ಮ ತಾಯಿ ,ತಂದೆ, ಅಜ್ಜ ಅಜ್ಜಿಯರು ಒತ್ತಾಯಿಸುತ್ತ ಬಂದಿದ್ದಾರೆ. ಇದರ ಮಹತ್ವ ಆಗ ತಿಳಿಯದಿದ್ದರೂ ಈಗ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಆಧುನಿಕ ಜೀವನ ಶೈಲಿಯ ಆಹಾರ ನಮ್ಮ ಹತೋಟಿಗೆ ಬಾರದಂತೆ ಆಗಿದೆ. ಪಶ್ಚಿಮಾತ್ಯ ಆಹಾರ ಶೈಲಿಯ ಒಲವು ಈಗ ಎಲ್ಲೆಲ್ಲೂ ಹರಡಿದೆ. ನಮ್ಮ ದೇಹಕ್ಕೆ ಒಗ್ಗದ ಆಹಾರವನ್ನು ಸೇವಿಸುವ ಬದಲಾಗಿ ಹಿಂದಿನಿಂದಲೂ ನಮ್ಮ ಪೂರ್ವಜರು ಸೇವಿಸುತ್ತಾ ಬಂದಿರುವ ಮತ್ತು ಅನಾದಿಕಾಲದಿಂದ ರೂಢಿಯಲ್ಲಿರುವ ನಮ್ಮ ದೇಹಕ್ಕೆ ಒಗ್ಗುವ ಆಹಾರವನ್ನು ಸೇವಿಸುವುದು ಅತಿ ಮುಖ್ಯ. ಏಕೆಂದರೆ ನಾವು ಸೇವಿಸುವ ಆಹಾರದಲ್ಲೇ ಔಷಧಿ ತತ್ವಗಳು ಅಡಗಿರುವಾಗ ಇತರ ಔಷಧೋಪಚಾರಗಳನ್ನು ಮಾಡುವ ಅವಶ್ಯಕತೆಯೇ ಇಲ್ಲ. ಅದಕ್ಕಿಂತಲೂ ಮುಂಚೆ ರೋಗವೇ ಬಾರದಂತೆ ತಡೆಯುವುದು ಉತ್ತಮ. ರೋಗ ಬಂದ ಮೇಲೆ ಔಷದೋಪಚಾರಗಳನ್ನು ಮಾಡಿ ಮನಸ್ಸಿಗೆ, ಬಾಯಿಗೆ ಹಿಡಿಸಿದ್ದನ್ನು ಎದುರಿಗಿದ್ದರೂ ತಿನ್ನಲಾಗದೆ ಪತ್ಯವನ್ನು ಮಾಡುವ ಕಾಲ ಎದುರಾಗುವ ಮುನ್ನ ಇಂತಹ ಸಮಸ್ಯೆಗಳೇ ಬರದಂತೆ ಅಡ್ಡಗೋಡೆ ಕಟ್ಟುವುದು ಎಷ್ಟೋ ಮೇಲು. ಆರೋಗ್ಯಕರ ಜೀವನಕ್ಕೆ ನಮ್ಮ ಪೂರ್ವಜರು ಕೊಟ್ಟಂತಹ ಕೊಡುಗೆ ಅಷ್ಟಿಷ್ಟಲ್ಲ. ಎಣಿಸುತ್ತಾ ಹೋದರೆ ಬೇಕಾದಷ್ಟು ಔಷಧಿ ಗುಣಗಳಿರುವ ಸಸ್ಯಗಳು, ಬೇರುಗಳು ನಮಗೆ ಲಭಿಸುತ್ತದೆ. ಇವನ್ನೆಲ್ಲಾ ಹುಡುಕಿ ಕಾಡಿಗೆ ಹೋಗುವ ಪರಿಸ್ಥಿತಿ ಏನು ನಮ್ಮಲ್ಲಿಲ್ಲ. ಅಡುಗೆ ಮನೆಯಲ್ಲಿ ಸಿಗುವಂತಹ ಎಲ್ಲಾ ಉಪಕರಗಳನ್ನು ಬಳಸುವುದನ್ನು ನಾವು ಅರಿಯಬೇಕಾಗಿದೆ. ಹಾಲಿನಲ್ಲಿ ಇರುವ ಔಷಧಿ ಗುಣಗಳನ್ನು ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಮುಂದೆ ಸಾಗುತ್ತಲೇ ಹೋಗುತ್ತದೆ. ಆದರೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಗುವ ಹಾಲಿನ ಪ್ಯಾಕೆಟ್ ಗಳು ಕಲಬೆರಿಕೆಯದ್ದಾಗಿವೆ. ನೈಸರ್ಗಿಕವಾಗಿ ಹಸುವಿನಿಂದ ಸಿಗುವ ಹಾಲಿಗೂ ರಾಸಾಯನಿಕಗಳ ಸಹಾಯದಿಂದ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಹಾಲಿಗೂ ಅಜಗಜಾಂತರ. ಹೀಗಾಗಿ ಮಾರುಕಟ್ಟೆಯಲ್ಲಿ ಇಂತಹ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದ ಖರೀದಿಸಬೇಕು. ನಮಗೆ ನೈಸರ್ಗಿಕವಾಗಿ ಸಿಗುವಂತಹ ಹಾಲಿನಲ್ಲಿರುವ ಪ್ರೋಟೀನ್, ಫ್ಯಾಟ್ ಇತ್ಯಾದಿಗಳು ದೇಹದ ಆರೋಗ್ಯಕ್ಕೆ ಬಹಳ ಮುಖ್ಯವಾಗಿವೆ. ಹಾಲಿನಲ್ಲಿರುವ ಫ್ಯಾಟ್ ಕಾರಣದಿಂದಾಗಿ ಹಲವು ಜನರು ಹಾಲನ್ನು ತ್ಯಜಿಸುವುದು ಇದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಕೆಟ್ಟ ಕೊಬ್ಬನ್ನು ಕರಗಿಸಲು ಒಳ್ಳೆಯ ಕೊಬ್ಬು ಸಹಾಯ ಮಾಡುವುದರಿಂದ ಹಾಲಿನಲ್ಲಿರುವ ಒಳ್ಳೆಯ ಕೊಬ್ಬನ್ನು ಸೇವಿಸುವುದರಿಂದ ಯಾವ ಅಪಾಯವೂ ಇಲ್ಲ. ಅದರ ಬದಲಿಗೆ ಲಾಭವೇ ಹೆಚ್ಚಿದೆ. ಹೀಗಾಗಿ ತೂಕ ಇಳಿಸಲು ಅಥವಾ ಇನ್ನಿತರ ಕಾರಣಗಳಿಂದ ಪ್ರೋಟೀನ್ ಇರುವ ಹಲವಾರು ಪೂರಕ ವಸ್ತುಗಳನ್ನು ಸೇವಿಸುವುದರ ಬದಲಾಗಿ ಹಾಲನ್ನೇ ಕುಡಿಯುವುದು ಉತ್ತಮ. ತನ್ನ ಕರುವಿಗೆ ಮಾತ್ರವಲ್ಲದೆ ಸ್ವಾರ್ಥಿಯಾದ ಮನುಷ್ಯನಿಗೂ ಹಾಲನ್ನು ನೀಡುವ ನಿಸ್ವಾರ್ಥ ಗೋಮಾತೆ ಯನ್ನು ಗೌರವಿಸೋಣ ಮತ್ತು ಇಂತಹ ಔಷಧಿ ಗುಣಗಳಿರುವ ಆಹಾರವನ್ನೇ ಸೇವಿಸೋಣ.


Share this with your friends...

2 thoughts on “ಹಾಲಿನ ಔಷಧಿ ಗುಣಗಳು”

Leave a Comment

Your email address will not be published. Required fields are marked *