ನಿಂಬೆಹುಲ್ಲಿನ ಔಷಧಿ ಗುಣಗಳು (Lemon grass)

Share this with your friends...

Lemon Grass
Lemon Grass

ನಾನು ನಿಂಬೆ ಹಣ್ಣನ್ನು ನೋಡಿದೀನಿ, ಅದರ ಗಿಡನೂ ನೋಡಿದೀನಿ, ಆದರೆ ಇದೇನಿದು ಲಿಂಬೆ ಹುಲ್ಲು ಅಂತ ಯೋಚನೆ ಮಾಡ್ತಾ ಇದ್ದೀರಾ? ಅದೇ ನಾವು ಹೇಳ್ತೀವಲ್ವಾ ಮಜ್ಜಿಗೆಹುಲ್ಲ ಅಂತಾ ಅದೇ ನಿಂಬೆಹುಲ್ಲು. ಇದು ಥೇಟ್ ನಿಂಬೆ ಹಣ್ಣಿನ ಪರಿಮಳ ಬರುವ ಕಾರಣದಿಂದ ಇದನ್ನು ನಿಂಬೆಹುಲ್ಲು ಎಂದು ಕರೆಯುತ್ತಾರೆ. ಇದು ನೋಡಲು ಸಾಮಾನ್ಯ ಹುಲ್ಲಿನಂತೆ ಕಾಣುತ್ತದೆ. ಇದರ ವೈಜ್ಞಾನಿಕ ಹೆಸರು ಸೈಮ್ಬೊಫೊಗನ್ ಸಿಟ್ರಾಟಸ್ (Cymbopogan Citratus).

ನಿಂಬೆಹುಲ್ಲು ಹೆಚ್ಚಾಗಿ ತೋಟಗಳಲ್ಲಿ, ಗದ್ದೆಗಳಲ್ಲಿ ಮತ್ತು ಮನೆಯಂಗಳದಲ್ಲಿ ಬೆಳೆಯುತ್ತದೆ. ಇದನ್ನು ಅಲಂಕಾರಕ್ಕಾಗಿ ಮನೆಯೆದುರುಗಡೆ ಬೆಳೆಸುತ್ತಾರೆ. ನಿಂಬೆಹುಲ್ಲಿನಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಈ ತೈಲವನ್ನು ಸುಗಂಧ ದ್ರವ್ಯಗಳಲ್ಲಿ, ಸಾಬೂನು ತಯಾರಿಕೆಯಲ್ಲಿ, ಕಾಂತಿವರ್ಧಕಗಳಲ್ಲಿ, ಹಾಗು ಔಷಧಿ ತಯಾರಿಕೆಯಲ್ಲಿ ಕೂಡ ಬಳಸಲಾಗುತ್ತದೆ. ಭಾರತದಲ್ಲಿ ಅತ್ಯಧಿಕವಾಗಿ ರಫ್ತಾಗುವ ಸುಂಗಂಧ ತೈಲಗಳಲ್ಲಿ ಇದು ಕೂಡ ಒಂದಾಗಿದೆ. ನಿಂಬೆಹುಲ್ಲನ್ನು ಟೀ, ಸೂಪ್, ತಂಬುಳಿ, ಮತ್ತು ಕಷಾಯ ಮಾಡಲು ಉಪಯೋಗಿಸುತ್ತಾರೆ. ನಿಂಬೆಹುಲ್ಲು ಆಹಾರ ಬೇಗನೆ ಕೆಡದಂತೆ ನೋಡಿಕೊಳ್ಳುವ ಗುಣವನ್ನು ಹೊಂದಿದೆ.

ಇದು ವಾಣಿಜ್ಯ ಬೆಳೆಯೂ ಆಗಿದೆ. ಈ ನಿಂಬೆಹುಲ್ಲು ಕೃಷಿಕರಿಗೂ ತುಂಬಾ ಉಪಯುಕ್ತವಾಗಿದೆ. ಭತ್ತದ ಗದ್ದೆಗಳಲ್ಲಿ, ತರಕಾರಿ ತೋಟಗಳಲ್ಲಿ, ಮತ್ತು ಹೂ ತೋಟಗಳಲ್ಲಿ ಗಿಡಗಳ ಮದ್ಯೆ ನಿಂಬೆ ಹುಲ್ಲನ್ನು ನೇಡುವುದರಿಂದ ಕೀಟ ಬಾದೆಯಿಂದ ಗಿಡಗಳನ್ನು ರಕ್ಸಿಸಬಹುದು. ನಿಂಬೆ ಹುಲ್ಲಿನಲ್ಲಿ ಸಿಟ್ರಿಕ್ ಆಸಿಡ್ ಎಂಬ ರಾಸಾಯನಿಕವಿರುತ್ತದೆ. ದೇಹದೊಳಗೆ ಬ್ಯಾಕ್ಟೀರಿಯಾಗಳು ಸೇರದಂತೆ ತಡೆಯುವ ಆಯಂಟಿ ಬ್ಯಾಕ್ಟೀರಿಯಾ ಗುಣವನ್ನು ಹೊಂದಿದೆ. ಇದು ಆಂಟಿಸೆಪ್ಟಿಕ್ ಹಾಗೂ ಆಂಟಿಫಂಗಲ್ ಗುಣವನ್ನು ಹೊಂದಿರುತ್ತದೆ

ಚಿಕ್ಕ ಮಕ್ಕಳಲ್ಲಿ ಜ್ವರ ಕಡಿಮೆ ಮಾಡಲು ನಿಂಬೆಹುಲ್ಲಿನ ಉಪಯೋಗ

ಚಿಕ್ಕ ಮಕ್ಕಳಿಗೆ ಆಗಾಗ ಜ್ವರ ಬರುತ್ತಾ ಇರುತ್ತದೆ. ಇದನ್ನು ತಡೆಯಲು ನಿಂಬೆಹುಲ್ಲಿನ ಕಷಾಯ ಮಾಡಿ ಅದಕ್ಕೆ 1/4 ಚಮಚ ಶುಂಠಿ ರಸ ಮತ್ತು ಬೆಲ್ಲ ಸೇರಿಸಿ ಕುಡಿಸುವುದರಿಂದ ಜ್ವರ ನಿಧಾನವಾಗಿ ಕಡಿಮೆಯಾಗುತ್ತದೆ.

ಎಸಿಡಿಟಿ ಯನ್ನು ಹತೋಟಿಯಲ್ಲಿಡಲು ನಿಂಬೆಹುಲ್ಲು ಸಹಕಾರಿಯಾಗಿದೆ

ದಿನ ಚಹಾ, ಟಿ, ಮತ್ತು ಕಾಫೀ ಕುಡಿಯುವ ಹವ್ಯಾಸ ವಿದ್ದರೆ ಅದರ ಬದಲು ನಿಂಬೆ ಹುಲ್ಲು ಹಾಕಿ ತಯಾರಿಸಿದ ಚಹಾ ದಿನಕ್ಕೆ 4 ರಿಂದ 5 ಬಾರಿ ಕುಡಿಯುವುದರಿಂದ ಎಸಿಡಿಟಿಯಿಂದ ದೂರವಿರಬಹುದು.

ಮುಟ್ಟಿನಲ್ಲಿ ಬರುವ ಹೊಟ್ಟೆ ನೋವಿಗೆ ನಿಂಬೆಹುಲ್ಲು ಉತ್ತಮ ಔಷಧವಾಗಿದೆ

ಕೆಲವು ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಹೆಚ್ಚು ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ 4 ರಿಂದ 6 ಚಮಚ ನಿಂಬೆ ಹುಲ್ಲಿನ ಕಷಾಯಕ್ಕೆ 1 ಚಿಟಿಕೆ ಕಾಳು ಮೆಣಸಿನ ಪುಡಿ ಹಾಕಿ ಮುಟ್ಟಿನ ದಿನದ ಸಮಯದಲ್ಲಿ ದಿನಕ್ಕೆ 2-3 ಸಲ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಸಂಧಿ ವಾತ ಮತ್ತು ಮೈ ಕೈ ನೋವಿಗೆ ನಿಂಬೆಹುಲ್ಲಿನಿಂದ ಪರಿಹಾರ

ಸಂಧಿ ವಾತದಿಂದ ಬಳಲುತಿದ್ದವರು ಹಾಗೂ ಬಿದ್ದ ಗಾಯದ ನೋವು ಹಾಗೆ ಇರುವವರು, ನಿಂಬೆ ಹುಲ್ಲಿನಿಂದ ತಯಾರಿಸಿದ ತೈಲವನ್ನು ಸ್ವಲ್ಪ ಕೊಬ್ಬರಿ ಎಣ್ಣೆಯ ಜೊತೆ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ನಿಂಬೆಹುಲ್ಲು ನೆಗಡಿ ಮತ್ತು ಕೆಮ್ಮು ಕಡಿಮೆ ಮಾಡುವ ಗುಣವನ್ನು ಹೊಂದಿದೆ

ನೆಗಡಿಯಾದಾಗ ನಿಂಬೆ ಹುಲ್ಲಿನಿಂದ ತಯಾರಿಸಿದ ಕಷಾಯವನ್ನು ಕುಡಿಯಬಹುದು. ಅಥವಾ ನೆಗಡಿಯಾದಾಗ ಮೂಗಿಗೆ ಹಿಡಿಯುವ ಬಟ್ಟೆಗೆ ಸ್ವಲ್ಪ ನಿಂಬೆಹುಲ್ಲಿನ ತೈಲವನ್ನು ಹಾಕಿಕೊಂಡು ಅದರ ಪರಿಮಳವನ್ನು ಆಗಾಗ ತೆಗೆದುಕೊಳ್ಳುವುದರಿಂದ ನೆಗಡಿ ಕಡಿಮೆಯಾಗುತ್ತದೆ.

ದೇಹದ ದುರ್ವಾಸನೆಯನ್ನು ತಡೆಯಲು ನಿಂಬೆಹುಲ್ಲು ಸಹಕಾರಿ

ಕೆಲವರು ದೇಹದ ದುರ್ಗಂಧವನ್ನು ತಡೆಯಲು ರಾಸಾಯನಿಕವನ್ನು ಉಪಯೋಗಿಸಿ ತಯಾರಿಸಿದ ಸುಂಗಂಧ ದ್ರವ್ಯಗಳನ್ನು ಉಪಯೋಗಿಸುತ್ತಾರೆ. ಅದರ ಬದಲು ಈ ಶುದ್ಧ, ಪ್ರಾಕೃತಿಕವಾದ ಪರಿಮಳವುಳ್ಳ ನಿಂಬೆಹುಲ್ಲಿನ ತೈಲವನ್ನು ಉಪಯೋಗಿಸುವುದು ಉತ್ತಮ. ಇದರಿಂದ ರಾಸಾಯನಿಕ ದ್ರವ್ಯದಿಂದ ಚರ್ಮದ ಮೇಲಾಗುವ ಹಾನಿಯನ್ನು ತಡೆಯಬಹುದು.

ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ನಿಂಬೆಹುಲ್ಲು ಸಹಕಾರಿಯಾಗಿದೆ.

ಬಿಸಿಲಿನ ಅಥವಾ ದೂಳಿನ ಕಾರಣದಿಂದ ಮುಖದ ತ್ವಚೆಯ ಮೇಲಾಗುವ ಪರಿಣಾಮವನ್ನು ತಡೆಯಲು ನಿಂಬೆಹುಲ್ಲಿನಿಂದ ತಯಾರಿಸಿದ ತೈಲವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತು ಮೃದುವಾಗಿ ಮಸಾಜ್ ಮಾಡಿ. ನಂತರ ಬಿಸಿನೀರಿಗೆ ಒಂದೆರೆಡು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ಆ ಉಗಿಯನ್ನು ಮುಖಕ್ಕೆ ತೆಗೆದುಕೊಂಡು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದರಿಂದ ಮುಖದಲ್ಲಿನ ಕೊಳೆ ಹೋಗಿ ಮುಖದ ಕಾಂತಿ ಹೆಚ್ಚುತ್ತದೆ.

ಚಳಿಗಾಲದಲ್ಲಿ ಮೈಕೈ ಒಡೆಯುವುದನ್ನು ನಿಂಬೆಹುಲ್ಲು ತಡೆಯುತ್ತದೆ

ಕೆಲವರಿಗೆ ಚಳಿಗಾಲದಲ್ಲಿ ಕಾಲು ಮಾತ್ರವಲ್ಲ ಮೈಕೈ ಕೂಡ ಬಿರಿಯುತ್ತದೆ. ಆದ್ದರಿಂದ ನಿಂಬೆಹುಲ್ಲಿನ ತೈಲವನ್ನು ಪ್ರತಿದಿನ ಸ್ನಾನ ಮಾಡುವ ನೀರಿಗೆ ಹಾಕಿ ಕೊಂಡು ಸ್ನಾನ ಮಾಡುವುದರಿಂದ ಮೈ- ಕೈ ಒಡೆಯುವುದಿಲ್ಲ. ಮತ್ತು ಕೆಲವರಿಗಂತೂ ಅಂಗಾಲು ತುಂಬಾ ಒಡೆಯುತ್ತದೆ ಇದಕ್ಕೂ ಕೂಡ ಒಂದು ಬಕೆಟ್ ನಲ್ಲಿ ಬಿಸಿ ನೀರಿಗೆ 3 ರಿಂದ 4 ಹನಿ ನಿಂಬೆಹುಲ್ಲಿನ ತೈಲವನ್ನು ಹಾಕಿಕೊಂಡು 30 ನಿಮಿಷಗಳ ಕಾಲ, ಕಾಲನ್ನು ನೆನೆಸಿಟ್ಟುಕೊಳ್ಳುವುದರಿಂದ ಕಾಲುಗಳ ಒಡಕು ನಿಧಾನವಾಗಿ ಕಡಿಮೆಯಾಗುತ್ತದೆ.

ಹೊಟ್ಟೆನೋವು, ಹೊಟ್ಟೆ ಉಬ್ಬರವನ್ನು ನಿಂಬೆಹುಲ್ಲು ಕಡಿಮೆ ಮಾಡುತ್ತದೆ

ಹೊಟ್ಟೆನೋವು ಇರುವವರು, ನಿಂಬೆಹುಲ್ಲಿನ ಕಷಾಯಕ್ಕೆ ಸ್ವಲ್ಪ ಪುದಿನ ರಸ ಮತ್ತು 1 ಚಿಟಿಕೆ ಕಾಳು ಮೆಣಸಿನ ಪುಡಿ ಮತ್ತು ಒಣಗಿಸಿ ಪುಡಿ ಮಾಡಿಟ್ಟುಕೊಂಡ ಶುಂಠಿ ಮತ್ತು ಬೇಕಾದಲ್ಲಿ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ ಮೂರುಗಂಟೆಗೊಮ್ಮೆ ಕುಡಿಯುವುದರಿಂದ ಹೊಟ್ಟೆನೋವು, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

ನಿಂಬೆಹುಲ್ಲು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಮತ್ತು ಮೂತ್ರಕೋಶ, ಕಿಡ್ನಿ ಮುಂತಾದ ಕಡೆ ಉಂಟಾಗುವ ಸಮಸ್ಯೆಗಳನ್ನೂ ನಿಯಂತ್ರಣ ಮಾಡುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸುವುದರ ಜೊತೆ ಉಸಿರಾಟದ ತೊಂದರೆಯನ್ನೂ ನಿವಾರಿಸುವ ಗುಣವನ್ನು ಹೊಂದಿದೆ.

ನಿಂಬೆಹುಲ್ಲು ನಮ್ಮ ಮನೆಯ ಹಿತ್ತಲಿನಲ್ಲಿ ಕಡಿಮೆ ನೀರಿದ್ದರೂ ಬೆಳೆಯಬಹುದಾದ ಸಸ್ಯವಾಗಿದೆ. ಈ ಹುಲ್ಲನ್ನು ಜಜ್ಜಿ ಪರಿಮಳವನ್ನು ಪ್ರತಿದಿನ ತೆಗೆದುಕೊಳ್ಳುವುದರಿಂದ ಮಾನಸಿಕ ಒತ್ತಡ ದೂರವಾಗುತ್ತದೆ.

ಕ್ಯಾನ್ಸರ್ ಇರುವವರಲ್ಲಿ, ಮತ್ತು ಎಚ್ ಐ ವಿ ಇರುವವರಲ್ಲಿ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಪ್ರತಿದಿನ ನಿಂಬೆಹುಲ್ಲಿನ ಚಹಾ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ನಿಂಬೆ ಹುಲ್ಲು ಬ್ಯಾಕ್ಟೀರಿಯಾವನ್ನು ಹೊಡೆದೋಡಿಸುತ್ತದೆ. ಆದ್ದರಿಂದ ಇದನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಜಗಿಯುವುದರಿಂದ ಬಾಯಿಯ ಒಸಡಿಗೂ ಒಳ್ಳೆಯದು. ಮತ್ತು ನಿಂಬೆಹುಲ್ಲು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ನಿರ್ನಾಮಗೊಳಿಸುತ್ತದೆ.

ಈಗ ಅತಿಯಾದ ತೂಕ, ಬೊಜ್ಜು ಸರ್ವೇ ಸಾಮಾನ್ಯವಾಗಿದೆ. ಇನ್ನು ಹೇಗೆ ಕಡಿಮೆ ಮಾಡುವುದು ಎಂಬುದೇ ದೊಡ್ಡ ತಲೆನೋವು.  ತೂಕ
ಕಡಿಮೆ ಮಾಡುವಲ್ಲಿ ನಿಂಬೆಹುಲ್ಲು ತುಂಬಾ ಸಹಕಾರಿಯಾಗಿದೆ. ಪ್ರತಿದಿನ ನಿಂಬೆಹುಲ್ಲಿನ ಕಷಾಯ ಕುಡಿಯುವುದರಿಂದ ಇದು ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲನ್ನು ತೆಗೆದು ಹಾಕುತ್ತದೆ.

ನಿಂಬೆ ಹುಲ್ಲನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯಕವಾಗಿದೆ . ನಿಂಬೆ ಹುಲ್ಲಿನಲ್ಲಿ ಸಿಟ್ರಲ್ ಹಾಗು ಗಾರ್ನಿಯಲ್ ಎಂಬ ಸಂಯುಕ್ತಗಳು ಕ್ಯಾನ್ಸರ್ ಹರಡುವ ಜೀವಕೋಶಗಳ ವಿರುದ್ಧ ಹೊರಡುವ ಗುಣವನ್ನು ಹೊಂದಿದೆ.


Share this with your friends...

2 thoughts on “ನಿಂಬೆಹುಲ್ಲಿನ ಔಷಧಿ ಗುಣಗಳು (Lemon grass)”

Leave a Comment

Your email address will not be published. Required fields are marked *