ಕಹಿಬೇವಿನ ಔಷಧಿ ಗುಣಗಳು (Margosa Tree or Neem Tree)

Share this with your friends...

 

 

 

 

 

 

ಕಹಿಬೇವಿನ ಔಷಧಿ ಗುಣಗಳು : ಕಹಿ ಬೇವಿನ ಮರ ಎಂದಾಕ್ಷಣ ನಮಗೆ ಮೊದಲು ಅದರ ಕಹಿ ನೆನಪಾಗುತ್ತವೆ. ಜೀವನದ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸವ ಸಂಕೇತವಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು- ಬೆಲ್ಲನ್ನು ಎಲ್ಲರಿಗೂ ಹಂಚುತ್ತಾರೆ. ಕೆಲವರು ಕಹಿ ಎಂದರೆ ಮೂಗು ಮುರಿಯುತ್ತಾರೆ. ಬೇವಿನ ರುಚಿ ಕಹಿಯಾದರೂ ಅದರಲ್ಲಿರುವ ಔಷಧ ಗುಣಗಳು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.
 
ಹಳೆಯ ಕಾಲದಲ್ಲಿ ಹಲ್ಲು ಉಜ್ಜಲು ಕಹಿ ಬೇವಿನ ಕಡ್ಡಿಯನ್ನು ಉಪಯೋಗಿಸುತ್ತಿದ್ದರು. ಕಹಿಬೇವು ದೊಡ್ಡ ಮರವಾಗಿ ಬೆಳೆಯುತ್ತದೆ. ಇದರಲ್ಲಿ ಸಣ್ಣ ಸಣ್ಣ ಹೂವುಗಳು, ಕಾಯಿಗಳು ಬಿಡುತ್ತವೆ. ಈ ಹೂವುಗಳು ಜೇನಿನ ಪರಿಮಳವನ್ನು ಹೋಲುತ್ತವೆ. ಕಹಿಬೇವಿನ ಮರದ ಎಲೆ, ತೊಗಟೆ, ಹೂ, ಕಡ್ಡಿ, ಬೀಜ, ಹಾಗು ಬೇರುಗಳು ಸಹ ಔಷಧೀಯ ಗುಣಗಳನ್ನು ಹೊಂದಿವೆ. ಹಳ್ಳಿಗಳಲ್ಲಿ ಬೇವಿನಮರಕ್ಕೆ ಕಟ್ಟೆಗಳನ್ನು ಕಟ್ಟಿ ಅದನ್ನು ಪೂಜಿಸುತ್ತಿದ್ದರು. ಕಹಿಬೇವು ಹಲವಾರು ರೋಗಗಳಿಗೆ ಮನೆಮದ್ದಾಗಿದೆ. ಪ್ರತಿದಿನ ಕಹಿಬೇವಿನ ಎಲೆಗಳನ್ನು ತಿನ್ನುವುದರಿಂದ  ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸುತ್ತಾರೆ. ಇದರ ವೈಜ್ಞಾನಿಕ ಹೆಸರು ಅಜದಿರಕ್ತ ಇಂಡಿಕಾ (Azadirachta Indica). ಮನೆಯ ಸುತ್ತ-ಮುತ್ತಲೂ ಕಹಿಬೇವಿನ ಮರಗಳನ್ನು ಬೆಳೆಸುವುದರಿಂದ ಆರೋಗ್ಯಕರವಾದ ಗಾಳಿ ನಮಗೆ ಸಿಗುತ್ತದೆ.

ಕಹಿಬೇವಿನ ಔಷಧಿ ಗುಣಗಳು

ಚರ್ಮರೋಗದ ಸಮಸ್ಯೆಗೆ ಕಹಿಬೇವು ಉತ್ತಮ ಪರಿಹಾರವಾಗಿದೆ.

ಚರ್ಮದ ಮೇಲಿನ ತುರಿಕೆ, ಗಂದೆ, ಸಿಡುಬು(chicken pox), ಅಮ್ಮ ಏಳುವುದು (small pox) ಈ ಮೊದಲಾದ ತೊಂದರೆಗಳಿಗೆ ಕಹಿಬೇವಿನ ಎಲೆಯಿಂದ, ಎಣ್ಣೆಯನ್ನು ತಯಾರಿಸಿ ಉಪಯೋಗಿಸಬಹುದು. ಮತ್ತು ಕಹಿಬೇವಿನ ಎಲೆಯ ರಸವನ್ನು ಸೇವಿಸುವುದರಿಂದ ಮತ್ತು ಕಹಿಬೇವಿನ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಅಥವಾ ಕಹಿಬೇವಿನ ಎಲೆಯನ್ನು ಪೇಸ್ಟ್ ಮಾಡಿ, ತುರಿಕೆ, ಸಿಡುಬು, ಇರುವಲ್ಲಿ ಹಚ್ಚುವುದರಿಂದ, ಅದು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಿ ಗುಣಮುಖರನ್ನಾಗಿ ಮಾಡುತ್ತದೆ. ಕಹಿಬೇವಿನ ಎಲೆಗಳನ್ನು ನಾನು ಸ್ನಾನ ಮಾಡುವ ಬಿಸಿ ನೀರಿಗೆ ಹಾಕಿ, ಪ್ರತಿ ದಿನ ಸ್ನಾನ ಮಾಡುವುದರಿಂದ ಚರ್ಮ ರೋಗದ  ಸಮಸ್ಯೆಯಿಂದ ದೂರವಿರಬಹುದು.
ಕಹಿಬೇವು ನೋವುಗಳಿಗೆ ಪರಿಹಾರವಾಗಿದೆ
ಕಹಿ ಬೇವಿನ ಎಲೆಗಳನ್ನು, ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ, ಆರಿಸಿ ತೆಗೆದಿಟ್ಟುಕೊಳ್ಳಬೇಕು. ಈ ಎಣ್ಣೆಯನ್ನು ಪ್ರತಿದಿನ ಸಂಧಿನೋವು, ಸ್ನಾಯುಗಳ ನೋವುಗಳಿರುವ ಜಾಗಕ್ಕೆ ಹಚ್ಚಿ, ಮಸಾಜ್ ಮಾಡುವುದರಿಂದ ನೋವುಗಳು ನಿವಾರಣೆಯಾಗುತ್ತವೆ. ಮತ್ತು ಸಂಧಿವಾತಕ್ಕೆ ಕಹಿ ಬೇವಿನ ಎಲೆಯನ್ನು ಮತ್ತು ತೊಗಟೆಯನ್ನು ಅರೆದು, ಲೇಪನ ಮಾಡುವುದರಿಂದ ಸಂದಿಗಳಲ್ಲಿನ ನೋವು ಹಾಗೂ ಬಾವು ಕಡಿಮೆಯಾಗುತ್ತದೆ.

ಕ್ಯಾನ್ಸರ್ ತಡೆಯುವುದರಲ್ಲಿ ಕಹಿ ಬೇವಿನ ಪಾತ್ರ

ಕಹಿ ಬೇವಿನ ಮರದ ತೊಗಟೆಯಲ್ಲಿರುವ ಲಿಮೋನೋಯ್ಡ್ಸ್ ಮತ್ತು (ಪೊಲಿಸಾಛೋರೀಡ್ಸ್) ಎಂಬ ರಾಸಾಯನಿಕಗಳು ಕಾನ್ಸರ್ ತಡೆಗಟ್ಟುತ್ತವೆ. ಆದ್ದರಿಂದ ಪ್ರತಿದಿನ ಕಹಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಬರುವ ಸಂಭವ ಕಡಿಮೆ.

ಮೊಡವೆಗಳ ಕಲೆ ನಿವಾರಣೆಗೆ ಕಹಿ ಬೇವು ಉಪಯುಕ್ತ

ಕಹಿ ಬೇವು, ಮೊಡವೆಗಳು ಕಡಿಮೆಯಾದ ಬಳಿಕ ಉಳಿಯುವ ಕಲೆಗಳನ್ನು ತೆಗೆದುಹಾಕುತ್ತವೆ. ಮತ್ತು ಮೊಡವೆಗಳು ಆಗದಂತೆ ತಡೆಯುತ್ತವೆ. ಕಹಿ ಬೇವಿನ ಎಲೆಯ ಪೆಸ್ಟ್ ಮಾಡಿ, ಮುಖಕ್ಕೆ ವಾರಕೊಮ್ಮೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಬಿಸಿ ನೀರು ಕಾಯಿಸಿ ಅದಕ್ಕೆ ಕಹಿ ಬೇವಿನ ಎಲೆಗಳನ್ನು ಹಾಕಿ, ಅದರಿಂದ ಬರುವ ಉಗಿಯನ್ನು ಮಖಕ್ಕೆ ತೆಗೆದುಕೊಳ್ಳುವುದರಿಂದ ಮುಖದಲ್ಲಿ ಕಲೆಗಳು ನಿವಾರಣೆಯಾಗಿ ಮುಖದ ಕಾಂತಿಯು ಹೆಚ್ಚುತ್ತದೆ.

ಕಹಿ ಬೇವು ರಕ್ತ ಶುದ್ದೀಕರಿಸುವ ಗುಣವನ್ನು ಹೊಂದಿದೆ

ಪ್ರತಿದಿನ 4 ರಿಂದ 5 ಕಹಿ ಬೇವಿನ ಎಲೆಗಳನ್ನು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ. ಹಾಗೂ ಕಹಿ ಬೇವು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕಿ, ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯದ ಮೇಲಾಗುವ ಒತ್ತಡವನ್ನು ಕಡಿಮೆಮಾಡುತ್ತದೆ.
ಮೂತ್ರಪಿಂಡದ ಸಮಸ್ಯೆಗೆ ಪರಿಹಾರವಾಗಿ ಕಹಿ ಬೇವು
ಕಹಿ ಬೇವಿನ ಬೀಜಗಳಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಮೂತ್ರಪಿಂಡಕ್ಕೆ ಸಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು.

ಕಹಿಬೇವಿನಿಂದ ವೃದ್ಧಾಪ್ಯದ ಲಕ್ಷಣಗಳನ್ನು ಹತೋಟಿಯಲ್ಲಿಡಬಹುದು

ಕಹಿ ಬೇವಿನ ಮರದ ಬೀಜದಲ್ಲಿ ಆಯಂಟಿ ಏಜಿಂಗ್ ಮತ್ತು ಆಯಂಟಿ ಆಕ್ಸಿಡೆಂಡ್ ಗುಣಗಳಿದ್ದು, ಅದರ ಬೀಜಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಸುಕ್ಕು ಗಟ್ಟುವುದನ್ನು ನಿಯಂತ್ರಿಸುತ್ತವೆ.

ಕಹಿ ಬೇವು ಕೂದಲಿನ ಸಮಸ್ಯೆ ಗೂ ಪರಿಹಾರವಾಗಿದೆ

ಕೂದಲು ಉದುರುವುದು ಹಾಗೂ ತಲೆಯಲ್ಲಿನ ಹೊಟ್ಟಿನ ಸಮಸ್ಯೆ ಇದ್ದರೆ, ಕಹಿ ಬೇವಿನ ಬೀಜದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಾಕುವುದರಿಂದ ಅಥವಾ ಕಹಿ ಬೇವಿನ ಬೀಜವನ್ನು ಕಲ್ಲಿನಲ್ಲಿ ಅರೆದು ಅದಕ್ಕೆ ಸ್ವಲ್ಪ ನೀರು ಸೇರಿಸಿ ತಲೆಗೆ ಹಾಕಿ ಚೆನ್ನಾಗಿ ತಿಕ್ಕುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ರಾಸಾಯನಿಕ ಉಪಯೋಗಿಸದೆ ಕಹಿ ಬೇವಿನ ಬಳಕೆ ಹೆಚ್ಚಿಸಿದ್ದಲ್ಲಿ, ಕೂದಲಿನ ಸಮಸ್ಯೆ ಪರಿಹಾರವಾಗುತ್ತದೆ.ಮತ್ತು ತಲೆಯಲ್ಲಿ ಹೇನು, ಸೀರುಗಳು ಕಡಿಮೆಯಾಗುತ್ತವೆ.

ಕಿವಿ ನೋವು ಕಡಿಮೆ ಮಾಡಲು ಕಹಿ ಬೇವು ಸಹಾಯಕ

ಕಹಿ ಬೇವಿನಿಂದ ತಯಾರಿಸಿದ ಎಣ್ಣೆಯನ್ನು, ಸ್ವಲ್ಪ ಉಗುರು ಬೆಚ್ಚಗೆ ಮಾಡಿ, 1 ರಿಂದ 2 ಹನಿ ಎಣ್ಣೆಯನ್ನು ನೋವಿರುವ ಕಿವಿಗೆ ಹಾಕುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.

ಮಲೇರಿಯಾ ಜ್ವರವನ್ನು ಬಾರದ ಹಾಗೆ ತಡೆಯುವಲ್ಲಿ ಕಹಿ ಬೇವು ಸಹಕಾರಿಯಾಗಿದೆ

ಕಹಿ ಬೇವಿನ ಎಣ್ಣೆಯನ್ನು, ಮನೆಯ ಮುಂದೆ ನಿಂತಿರುವ ನೀರಿಗೆ ಸಿಂಪಡಿಸುವುದರಿಂದ, ಸೊಳ್ಳೆಯ ಉತ್ಪತ್ತಿಯನ್ನು ಕಡಿಮೆ ಮಾಡಬಹುದು. ಕಹಿ ಬೇವಿನ ಉಪಯೋಗದಿಂದ ಮಲೇರಿಯಾ ಜ್ವರವನ್ನು ತಡೆಯಬಹುದು. ಕಹಿ ಬೇವಿನ ಚಕ್ಕೆಯ ಕಷಾಯದಲ್ಲಿ, ಕಹಿ ಜೀರಿಗೆ ಪುಡಿಯನ್ನು 1/2 ಚಮಚ ಮತ್ತು ಸ್ವಲ್ಪ  ಜೇನು ತುಪ್ಪವನ್ನು ಸೇರಿಸಿ ಸೇವಿಸಬೇಕು.

ಮಧುಮೇಹ ನಿಯಂತ್ರಣಕ್ಕೆ ಕಹಿ ಬೇವು

ಕಹಿ ಬೇವಿನ ಮರದ ಚಿಗುರು ಎಲೆಗಳನ್ನು ನುಣ್ಣಗೆ ಅರೆದು, ಅದನ್ನು ಸ್ವಲ್ಪ ಸ್ವಲ್ಪ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು.

ನಿದ್ರಾಹೀನತೆಗೆ ಕಹಿ ಬೇವು ಸಹಕಾರಿಯಾಗಿದೆ

ನಿದ್ರಾಹೀನತೆಯಿಂದ ಬಳಲುತ್ತಿದ್ದವರು, ಕಹಿ ಬೇವಿನ ಎಲೆಗಳನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಹಾಲು ಸೇರಿಸಿ, ನುಣುಪಾಗಿ ಅರೆದು, ರಾತ್ರೆ ಮಲಗುವ ಮೊದಲು ಎರಡೂ ಅಂಗಾಲುಗಳಿಗೆ ಹಚ್ಚಿಕೊಂಡು ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ.

ಕುಷ್ಠರೋಗ ನಿವಾರಣೆಗೆ ಕಹಿ ಬೇವು ಸಹಕಾರಿಯಾಗಿದೆ

ಕಹಿ ಬೇವಿನ ಮರದ ಬುಡದಲ್ಲಿನ, ಬೇರಿನ ತೊಗಟೆಯನ್ನು ತೆಗೆದು, ಕಷಾಯ ಮಾಡಿ ಕುಡಿಯುವುದರಿಂದ ಕುಷ್ಠರೋಗ  ನಿವಾರಣೆಯಾಗುತ್ತದೆ.


Share this with your friends...

2 thoughts on “ಕಹಿಬೇವಿನ ಔಷಧಿ ಗುಣಗಳು (Margosa Tree or Neem Tree)”

Leave a Comment

Your email address will not be published. Required fields are marked *