ನೆಲಬೇವಿನ ಔಷಧಿ ಗುಣಗಳು (Green Chiretta)

Share this with your friends...

ನೆಲಬೇವು
ನೆಲಬೇವಿನ ಗಿಡ

ನೆಲಬೇವು ಎಂಬುದು ಒಂದು ಸಣ್ಣ ಸಸ್ಯವಾಗಿದೆ. ಇದು ಕಹಿಬೇವಿನ ತರಹ ಕಹಿ ರುಚಿಯನ್ನು ಹೊಂದಿರುತ್ತದೆ. ತಮಿಳುನಾಡಿನಲ್ಲಿ ನೆಲಬೇವಿನ ಕಷಾಯವನ್ನು ನಿಲವೆಂಬ ಕಷಾಯ ಎಂದು ಕರೆಯುತ್ತಾರೆ. ನೆಲಬೇವು ಜಗತ್ತಿನಾದ್ಯಂತ “ಕಹಿಯ ರಾಜ” ಎಂದೇ ಪ್ರಸಿದ್ಧವಾಗಿದೆ. ಇದನ್ನು ಮನೆಯ ಸುತ್ತ- ಮುತ್ತ ಬೆಳೆಸಬಹುದಾಗಿದೆ. ನೆಲಬೇವು ತಂಪು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಲಬೇವಿನ ವೈಜ್ಞಾನಿಕ ಹೆಸರು “ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲೇಟ್ “(Andrographic Paniculata)

ನೆಲಬೇವು ಸಣ್ಣ ಸಣ್ಣ ಹೂಗಳನ್ನು ಹೊಂದಿದ್ದು, ಹೂಗಳ ಮಧ್ಯ ಭಾಗದಲ್ಲಿ ನೇರಳೆ ಬಣ್ಣವಿರುತ್ತದೆ. ನೆಲಬೇವಿನ ಗಿಡವನ್ನು, ಬೀಜದ ಅಥವಾ ಕಾಂಡದ ತುಂಡುಗಳಿಂದ ಸುಲಭವಾಗಿ ಬೆಳೆಸಬಹುದು. ನೆಲಬೇವಿನ ಎಲೆ, ಕಾಂಡ, ಹೂ, ಬೇರು ಎಲ್ಲ ಭಾಗಗಳೂ ಔಷಧಿ ಗುಣಗಳನ್ನು ಹೊಂದಿವೆ. ನೆಲಬೇವನ್ನು ಮನೆಮದ್ದಾಗಿ ಉಪಯೋಗಿಸುತ್ತಾರೆ. ಈ ಗಿಡಮೂಲಿಕೆಯನ್ನು ಮುಖ್ಯವಾಗಿ ಡೆಂಗ್ಯೂ ಜ್ವರ, ಮತ್ತು ಮಧುಮೇಹ ರೋಗಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ. ಇದು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ನೆಲಬೇವನ್ನು ಜಿರತ್ ಕಡ್ಡಿಗಿಡ ಎಂದು ಕೂಡ ಕರೆಯುತ್ತೇವೆ.

ನೆಲಬೇವು ಮಧುಮೇಹವನ್ನು ನಿಯಂತ್ರಿಸುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ತಿನ್ನಬಹುದಾಗಿದ್ದು, ಇದು ನಿಮಗೆ ನೇರವಾಗಿ ತಿನ್ನಲು ಕಹಿ ಎನಿಸಿದರೆ ಇದನ್ನು ಕಷಾಯ ಮಾಡಿಕೊಂಡು ಕುಡಿಯಬಹುದು. ಹೀಗೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಜಂತು ನಿವಾರಣೆಗೆ ನೆಲಬೇವು

ಹೊಟ್ಟೆಯಲ್ಲಿ ಜಂತು ಹುಳುಗಳಾದಾಗ ಅವುಗಳ ನಿಯಂತ್ರಣಕ್ಕೆ ಪ್ರತಿದಿನ ರಾತ್ರೆ ಮಲಗುವ ಮೊದಲು, ನೆಲಬೇವಿನ ಕಷಾಯ ಮಾಡಿ ಕುಡಿಯುವುದರಿಂದ ಜಂತು ಹುಳುಗಳು ಕಡಿಮೆಯಾಗುತ್ತವೆ.

ಚರ್ಮದ ಮೇಲಿನ ತುರಿಕೆ ಕಡಿಮೆಮಾಡಲು ನೆಲಬೇವು ಸಹಾಯಕವಾಗಿದೆ

ನೆಲಬೇವಿನ ಗಿಡವು ಎಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿದ್ದು, ತಾಜಾ ನೆಲಬೇವಿನ ಗಿಡವನ್ನು ನುಣುಪಾಗಿ ರುಬ್ಬಿ ಪೇಸ್ಟ್ ಮಾಡಿ, ಇದನ್ನು ಚರ್ಮದ ತುರಿಕೆ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಮೇಲಿನ ಕಜ್ಜಿ, ತುರಿಕೆಗಳು ಕಡಿಮೆಯಾಗುತ್ತವೆ.

ಬಾಣಂತಿಯರಲ್ಲಿ ಎದೆಹಾಲನ್ನು ಹೆಚ್ಚಿಸಲು ನೆಲಬೇವು ಸಹಾಯಕವಾಗಿದೆ

ಬಾಣಂತಿಯರಲ್ಲಿ ಎದೆಹಾಲು ಕಡಿಮೆ ಇದ್ದರೆ, ನೆಲಬೇವಿನ ಕಷಾಯಕ್ಕೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಕ್ರಮೇಣವಾಗಿ ಎದೆಹಾಲು ಉತ್ಪತ್ತಿಯಾಗುತ್ತದೆ.

ಬಾಯಿಯ ಹುಣ್ಣಿನ ಸಮಸ್ಯೆಗೆ ನೆಲಬೇವು ಸಹಕಾರಿ

ಬಾಯಿಯಲ್ಲಿ ಹುಣ್ಣಿನ ತೊಂದರೆ ಇದ್ದರೆ, ನೆಲಬೇವಿನ ಕಾಂಡವನ್ನು ಮಜ್ಜಿಗೆಯಲ್ಲಿ ನೆನಸಿಟ್ಟು, ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಬಾಯಿಹುಣ್ಣಿನ ಸಮಸ್ಯೆ ಕಂಡು ಬಂದಲ್ಲಿ ಈ ಪುಡಿಯನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬಹುದು.

ಅರೆಗೆನ್ನೆ ಶೂಲ ಕಡಿಮೆಮಾಡಲು ನೆಲಬೇವು ಸಹಕಾರಿ

ಅರೆಗೆನ್ನೆ ಶೂಲ ಎಂದರೆ ತಲೆಯ ಅರ್ಧಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ನೆಲಬೇವಿನ ತೊಗಟೆಗೆ ಅಮೃತ ಬಳ್ಳಿ ಮತ್ತು ಬೇವಿನ ತೊಗಟೆ ಮತ್ತು ಅರಿಸಿನ ಬೆರೆಸಿ ಪುಡಿ ಮಾಡಿ, ಆ ಪುಡಿಯನ್ನು ನೀರಿಗೆ ಹಾಕಿ, ಕುದಿಸಿ ಕಷಾಯ ಮಾಡಿ, ದಿನಕ್ಕೆ ೨ ಬಾರಿ ಆ ಕಷಾಯವನ್ನು ಸೇವಿಸುವುದರಿಂದ ಅರೆಗೆನ್ನೆ ಶೂಲ ಕಡಿಮೆಯಾಗುತ್ತದೆ.

ನೆಲಬೇವು ಅಜೀರ್ಣವನ್ನು ಹೋಗಲಾಡಿಸುತ್ತದೆ

ಅಜೀರ್ಣದ ಸಮಸ್ಯೆ ಕಂಡುಬಂದಾಗ, ನೆಲಬೇವಿನ ಕಷಾಯವನ್ನು ಮಾಡಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ.

ನೆಲಬೇವು ವಿಷ ನಿವಾರಕವಾಗಿದೆ

ಸಣ್ಣ ಪುಟ್ಟ ಹಾವು ಕಡಿದರೆ, ನೆಲಬೇವಿನ ಕಷಾಯ ಮಾಡಿ ಕುಡಿಯಬೇಕು. ಅದು ವಿಷನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ.

ನೆಲಬೇವಿನಿಂದ ಬೇರು ಹುಳದ ನಿಯಂತ್ರಣ

ಮಲೆನಾಡುಗಳಲ್ಲಿ ಅಡಿಕೆ ತೋಟಗಳು ನಮಗೆ ಸಾಮಾನ್ಯವಾಗಿ ಕಂಡು ಬರುತ್ತವೆ. ಇಂತಹ ಅಡಿಕೆ ತೋಟಗಳಲ್ಲಿ ಕೆಲವೊಂದು ಬಾರಿ ಬೇರು ಹುಳದ ಸಮಸ್ಯೆ ಉಂಟಾಗುತ್ತದೆ. ಇದನ್ನು ಹೋಗಲಾಡಿಸಲು ತೋಟಗಳಲ್ಲಿ ನೆಲಬೇವನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಬೇರುಹುಳುಗಳನ್ನು ನಿಯಂತ್ರಿಸಬಹುದು.

ನೆಲಬೇವು ಗಾಯಗಳನ್ನು ಬೇಗ ಗುಣಪಡಿಸುತ್ತದೆ

ನೆಲಬೇವಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ತಣ್ಣಗೆ ಮಾಡಿಕೊಂಡು, ಅದರಿಂದ ಗಾಯಗಳನ್ನು ತೊಳೆಯುವುದರಿಂದ ಗಾಯಗಳು ಬೇಗನೆ ಗುಣಮುಖವಾಗುತ್ತವೆ.

ನೆಲಬೇವಿನ ಕಷಾಯದಿಂದ ಕಫ, ಶೀತ, ಗಂಟಲು ನೋವನ್ನು ನಿವಾರಿಸಬಹುದು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆಲಬೇವಿನ ಎಂಟಿ ಆಕ್ಸಿಡೆಂಟ್ ಗುಣವು ಆಕ್ಸಿಡೇಟಿವ್ ಹಾನಿಯಿಂದ ಕೋಶಗಳನ್ನು ರಕ್ಷಿಸುತ್ತದೆ. ಹೃದಯ ಸಂಬಂಧಿತ ಸಮಸ್ಯೆಗಳಿಂದ ದೂರವಿರಲು, ಕ್ಯಾನ್ಸರ್ ಬರುವಂತಹ ಸಂಭವತೆಯನ್ನು ಕಡಿಮೆ ಮಾಡಲು, ಅಲರ್ಜಿಗಳನ್ನು ಕಡಿಮೆ ಮಾಡಲು ನೆಲಬೇವು ಸಹಕಾರಿ.


Share this with your friends...

1 thought on “ನೆಲಬೇವಿನ ಔಷಧಿ ಗುಣಗಳು (Green Chiretta)”

Leave a Comment

Your email address will not be published. Required fields are marked *