ನೆಲನೆಲ್ಲಿಯ ಔಷಧಿ ಗುಣಗಳು
ಕಾಮಾಲೆಗೆ ನೆಲನೆಲ್ಲಿಯು ಪ್ರಮುಖ ಔಷಧವಾಗಿದೆ.
ನೆಲೆನೆಲ್ಲಿಯ ಬೇರನ್ನು ತೆಗೆದುಕೊಂಡು, ಪೇಸ್ಟ್ ಮಾಡಿಕೊಂಡು, ಅದಕ್ಕೆ ಹಸುವಿನ ಹಾಲನ್ನು ಸೇರಿಸಬೇಕು, ಈ ಮಿಶ್ರಣಕ್ಕೆ ಒಂದು ಚಿಟಿಕೆ ಅರಿಶಿನ ಹಾಕಿ, ಒಂದು ಚಮಚ ಮಿಶ್ರಣವನ್ನು, ದಿನಕ್ಕೆ ೨-೩ ಬಾರಿ ಸೇವಿಸಿದ್ದಲ್ಲಿ, ಕಾಮಾಲೆ ರೋಗವನ್ನ ಕಡಿಮೆ ಮಾಡಬಹುದು. ಹಾಗೂ ಅದರ ಅಡ್ಡ ಪರಿಣಾಮವನ್ನು ಕೂಡ ನಿಯಂತ್ರಿಸಲು ಸಾಧ್ಯವಾಗುತ್ತದೆ.
ನೆಲನೆಲ್ಲಿಯು ಬೇಧಿಯನ್ನು ನಿಯಂತ್ರಿಸುತ್ತದೆ.
ಭೇದಿ ಉಂಟಾದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು, ಜಜ್ಜಿ, ರಸ ತೆಗೆದು, ದಿನಕ್ಕೆ ೩ ಬಾರಿ ಸೇವಿಸುವುದರಿಂದ, ಭೇದಿ ನಿಯಂತ್ರಣಕ್ಕೆ ಬರುತ್ತದೆ.
ನೆಲನೆಲ್ಲಿಯು ಗಾಯ ವಾಸಿಮಾಡುವ ಗುಣವನ್ನು ಹೊಂದಿದೆ.
ನೆಲನೆಲ್ಲಿಯ ಗಿಡವನ್ನು ಬೇರು ಸಮೇತವಾಗಿ, ಜಜ್ಜಿ, ಗಾಯಕ್ಕೆ ಲೇಪಿಸುವುದರಿಂದ, ಗಾಯವು ಬೇಗ ವಾಸಿಯಾಗುತ್ತದೆ.
ಚರ್ಮ ರೋಗ ನಿವಾರಣೆಗಾಗಿ ನೆಲನೆಲ್ಲಿ
ಚರ್ಮ ರೋಗಗಳಿಗೆ, ನೆಲನೆಲ್ಲಿಯ ಎಲೆಯನ್ನು ಉಪ್ಪಿನೊಂದಿಗೆ ಅರೆದು, ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.
ಮಾಸಿಕ ಸ್ರಾವದ ಸಮಯದಲ್ಲಿ, ಅತಿಯಾದ ರಕ್ತ ಸ್ರಾವದ ಸಮಸ್ಯೆ ಕಂಡುಬಂದಲ್ಲಿ, ನೆಲೆನೆಲ್ಲಿಯ ಉಪಯೋಗವು ಸಹಕಾರಿಯಾಗಿದೆ.
ನಲನೆಲ್ಲಿಯ ಖಾದ್ಯಗಳನ್ನ ಆಹಾರವಾಗಿ ಸೇವಿಸುವುದರಿಂದ ಮತ್ತು ನೆಲನೆಲ್ಲಿಯ ಕಷಾಯ ತಯಾರಿಸಿ, ದಿನಕ್ಕೆ ೩ ಬಾರಿ ಕುಡಿಯುವುದರಿಂದ ಅತಿಯಾದ ರಕ್ತಸ್ರಾವವನ್ನು ತಡೆಯಬಹುದು.
ಜ್ವರವನ್ನು ಕಡಿಮೆ ಮಾಡಲು ನೆಲನೆಲ್ಲಿ ಸಹಕಾರಿ
ನೆಲನೆಲ್ಲಿಯ ಕಷಾಯ ಮಾಡುವಾಗ, ನೀರನ್ನು ಬಿಸಿಗಿರಿಸಿ, ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ, ಎಲ್ಲವನ್ನು ಕತ್ತರಿಸಿ ಹಾಕಬೇಕು, ನಂತರ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ, ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು, ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿನ, ಸ್ವಲ್ಪ ಸೈ೦ಧವ ಲವಣ ಹಾಕಿ, ಒಂದು ನಿಮಿಷ ಬಿಟ್ಟು ಇಳಿಸಿ, ಸೋಸಿದರೆ, ಕಷಾಯ ಸಿದ್ದವಾಗುತ್ತದೆ. ಇದನ್ನು, ೧೦-೧೫ ಎಂ,ಎಲ್ ನಷ್ಟನ್ನು ಘಂಟೆಗೊಮ್ಮೆ ಕುಡಿಯುತ್ತ ಬಂದರೆ ಇದು ಎಲ್ಲ ರೀತಿಯ ಜ್ವರಕ್ಕೂ ರಾಮಬಾಣವಾಗಿದೆ.
ನೆಲನೆಲ್ಲಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನೆಲನೆಲ್ಲಿಯ ಕಷಾಯ ಮಾಡಿ, ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ
ಹೆಚ್ಚುತ್ತದೆ.
ನೆಲನೆಲ್ಲಿಯು ಕಿಡ್ನಿಯ ಕಲ್ಲು ಕರಗಿಸಲು ಸಹಕಾರಿ
ಕಿಡ್ನಿಯ ಕಲ್ಲು ಕರಗಿಸುವಲ್ಲಿ ನೆಲನೆಲ್ಲಿಯ ಪಾತ್ರ ಮಹತ್ವದ್ದು, ಆದ್ದರಿಂದ ಇದನ್ನ ಸ್ಟೋನ್ ಬ್ರೇಕರ್ ಎಂದು ಕೂಡ ಕರೆಯುತ್ತಾರೆ. ನೆಲನೆಲ್ಲಿಯ ಜ್ಯೂಸ್ ಮಾಡಿ ಸೇವಿಸುವುದರಿಂದ ಕಿಡ್ನಿಯ ಕಲ್ಲು ನಿಧಾನವಾಗಿ ಕರಗುತ್ತಾ ಬರುತ್ತದೆ.