ಬಸಳೆ ಸೊಪ್ಪಿನ ಔಷಧಿ ಗುಣಗಳು
ಹಸಿವೆಯನ್ನು ಹೆಚ್ಚಿಸಲು ಬಸಳೆಯು ಸಹಕಾರಿ
ವಾರದಲ್ಲಿ ಮೂರರಿಂದ ನಾಲ್ಕು ದಿನ ಬಸಳೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣ ಕ್ರಿಯೆಯ ವೇಗ ಹೆಚ್ಚಾಗುತ್ತದೆ. ಆದ್ದರಿಂದ ಇದು ಹಸಿವನ್ನು ಹೆಚ್ಚಿಸುತ್ತದೆ.
ಬಾಯಿಯ ಹುಣ್ಣು ಕಡಿಮೆ ಮಾಡಲು ಬಸಳೆಯು ಉಪಯುಕ್ತ
ಬಸಳೆ ಸೊಪ್ಪು ಬಾಯಿಯ ಹುಣ್ಣಿಗೆ ಸುಲಭದ ಮನೆಮದ್ದು. ಬಸಳೆಯ ಎಲೆಯನ್ನು ಚೆನ್ನಾಗಿ ತೊಳೆದು, ಬಾಯಿಯಲ್ಲಿ ನಿಧಾನವಾಗಿ ಜಗಿದರೆ, ಅದರಲ್ಲಿರುವ ಲೋಳೆಯ ಅಂಶವು, ಬಾಯಿಯ ಹುಣ್ಣುಗಳನ್ನು ನಿವಾರಿಸುತ್ತದೆ.
ಅಂಗಾಲಿನ ಉರಿ ಕಡಿಮೆ ಮಾಡಲು ಬಸಳೆಯ ಉಪಯೋಗ
ಅಂಗಾಲಿನ ಉರಿಯನ್ನು ಕಡಿಮೆ ಮಾಡಲು, ಬಸಳೆ ಸೊಪ್ಪನ್ನು ಅರೆದು, ಆ ಮಿಶ್ರಣವನ್ನು ರಾತ್ರೆ ಮಲಗುವಾಗ ಅಂಗಾಲಿಗೆ ಹಚ್ಚಿಕೊಂಡು ಮಲಗಿದರೆ, ಅಂಗಾಲುಗಳ ಉರಿ ಕಡಿಮೆಯಾಗುತ್ತದೆ. ಹಾಗು ಕಾಲು ತಂಪಾಗಿರುತ್ತದೆ.
ಬಸಳೆ ಸೊಪ್ಪು ಕುರುವಿನ ಕೀವು ತೆಗೆಯಲು ಸಹಕಾರಿಯಾಗಿದೆ
ಬಸಳೆ ಸೊಪ್ಪನ್ನು ಅರೆದು, ಕುರುವಿನ ಮೇಲೆ ಹಚ್ಚುವುದರಿಂದ ಕುರುವಿನಲ್ಲಿನ ಕೀವು (ಕೆಟ್ಟ ರಕ್ತ) ಹೊರಗೆ ಬರುತ್ತದೆ. ಮತ್ತು ಉರಿಯೂತ ಕೂಡ ಕಡಿಮೆಯಾಗುತ್ತದೆ.
ಬಸಳೆಯಿಂದ ಮಲಬದ್ಧತೆಯ ನಿವಾರಣೆ
ಮಲಬದ್ಧತೆಯಿಂದ ಬಳಲುತ್ತಿದ್ದವರು ಬಸಳೆ ಸೊಪ್ಪಿನ ಕಷಾಯವನ್ನು ಮಾಡಿ, ಕುಡಿಯುವುದರಿಂದ ಅಥವಾ ಬಸಳೆ ಸೊಪ್ಪನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ, ಚಿಕ್ಕ ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿನ ಮಲಬದ್ಧತೆಯ ಸಮಸ್ಯೆಯು ಕಡಿಮೆಯಾಗುತ್ತದೆ.
ಬಸಳೆ ಸೊಪ್ಪು ಸುಟ್ಟ ಗಾಯವನ್ನು ವಾಸಿ ಮಾಡುತ್ತದೆ
ಸುಟ್ಟ ಗಾಯಗಳು ಯಾವಾಗಲೂ ತುಂಬಾ ಉರಿಯುತ್ತಿರುತ್ತವೆ. ಇದನ್ನು ಕಡಿಮೆ ಮಾಡಲು, ಬಸಳೆ ಸೊಪ್ಪಿನ ರಸ ತೆಗೆದು, ಆ ರಸಕ್ಕೆ ಬೆಣ್ಣೆ ಸೇರಿಸಿ, ಸುಟ್ಟ ಗಾಯಕ್ಕೆ ಹಚ್ಚುವುದರಿಂದ, ತಂಪಾಗಿ, ಉರಿ ಕಡಿಮೆಯಾಗುತ್ತಾ ಗಾಯವು ನಿಧಾನವಾಗಿ ವಾಸಿಯಾಗುತ್ತದೆ.
ದೇಹದ ತೂಕವನ್ನು ಹೆಚ್ಚಿಸಲು ಬಸಳೆಯು ಸಹಕಾರಿ
ಬಸಳೆ ಸೊಪ್ಪನ್ನು ವಾರದಲ್ಲಿ 3 ದಿನವಾದರೂ ಬಳಸುವುದರಿಂದ ಸರಾಗವಾಗಿ ಜೀರ್ಣಕ್ರಿಯೆಯಾಗಿ, ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ದೇಹದ ತೂಕ ಕೂಡ ಹೆಚ್ಚುತ್ತದೆ.
ಚರ್ಮದ ಹೊಳಪಿಗೆ ಬಸಳೆ ಸೊಪ್ಪು
ಒಣ ಚರ್ಮಕ್ಕೆ ಬಸಳೆಯನ್ನು ಉಪಯೋಗಿಸಬಹುದಾಗಿದೆ. ಕೆಲವೊಮ್ಮೆ ಚರ್ಮವು ಒಣಗಿದಂತಾಗುತ್ತದೆ. ಆಗ ಬಸಳೆಯನ್ನು ಅರೆದು ಹಚ್ಚಿಕೊಳ್ಳುವುದರಿಂದ ಒಣ ಚರ್ಮವು ತನ್ನ ಹೊಳಪನ್ನು ಪುನಃ ಪಡೆದು ಕಾಂತಿಯುತವಾಗಿ ಕಾಣುತ್ತದೆ. ಜೊತೆಗೆ ಒಣ ಚರ್ಮದ ಕಾರಣದಿಂದ ತುರಿಕೆ ಉಂಟಾಗಿದ್ದರೂ ಕೂಡ ನಿವಾರಣೆಯಾಗುತ್ತದೆ.