ನುಗ್ಗೆ ಸೊಪ್ಪಿನ ಔಷಧಿ ಗುಣಗಳು (Drumstick Leaves)

Share this with your friends...

ನುಗ್ಗೆ ಸೊಪ್ಪಿನ ವೈಜ್ಞಾನಿಕ ಹೆಸರು ಮೋರಿಂಗ್ ಒಲಿಫೆರ್. ಸಾಮಾನ್ಯವಗಿ ನುಗ್ಗೆ ಕಾಯಿಯ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ನುಗ್ಗೆ ಕಾಯಿಯನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಆದರೆ ನುಗ್ಗೆ ಸೊಪ್ಪನ್ನು ನಾವು ಬಳಸುವುದು ಕಡಿಮೆ. ಕೆಲವರಂತೂ ನುಗ್ಗೆ ಮರವನ್ನೇ ನೋಡಿರುವುದಿಲ್ಲ. ಆದ್ದರಿಂದ ಅದರ ಸೊಪ್ಪಿನ ಬಳಕೆಯನ್ನೂ ಮಾಡಿರುವುದಿಲ್ಲ. ನಿಮಗೆ ನುಗ್ಗೆ ಸೊಪ್ಪಿನ ಔಷಧೀಯ ಗುಣಗಳು ತಿಳಿದರೆ, ಇದರಿಂದ ಇಷ್ಟೆಲ್ಲಾ ಲಾಭವಿದೆಯೇ ಎಂದು ಆಶ್ಚರ್ಯವಾಗುತ್ತದೆ. ನುಗ್ಗೆ ಮರವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲಿಯೂ ಕಾಣಬಹುದು. ಆದರೆ ಈಗಿನ ದಿನಗಳಲ್ಲಿ ಜವಾರಿ ನುಗ್ಗೆಯ ಮರ ಬೆಳೆಸುವಿಕೆ ಕಡಿಮೆಯಾಗುತ್ತಿದೆ. ಎಲ್ಲಿ ನೋಡಿದರು ಹೈಬ್ರಿಡ್ ತಳಿಯ ಮರಗಳದ್ದೇ ಕಾರುಬಾರು. ಆದರೆ ಜವಾರಿ ನುಗ್ಗೆಯಲ್ಲಿರುವಷ್ಟು ಔಷಧಿ ಗುಣಗಳು, ಹೈಬ್ರಿಡ್ ತಳಿಯಲ್ಲಿ ಇರುವುದಿಲ್ಲ.

ನುಗ್ಗೆ ಮರವು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ನುಗ್ಗೆ ಸೊಪ್ಪಿನಲ್ಲಿ ಅಧಿಕವಾಗಿ ಸಿ ಜೀವಸತ್ವವಿರುತ್ತದೆ. ಉದಾಹರಣೆಗೆ ನಾವು ವಿಟಮಿನ್ “C” ಯ ಸಲುವಾಗಿ ಬಳಸುವ ನಿಂಬೆ, ಕಿತ್ತಳೆ ಹಣ್ಣುಗಳಿಗಿಂತಲೂ 7 ರಷ್ಟು ಅಧಿಕವಾದ ವಿಟಮಿನ್ ಇದರಲ್ಲಿ ದೊರಕುತ್ತದೆ. A ಜೀವಸತ್ವ ಹೊಂದಿರುವ ಕ್ಯಾರೆಟಿಗಿಂತಲೂ 4 ರಷ್ಟು ಜೀವಸತ್ವ ಈ ನುಗ್ಗೆ ಸೊಪ್ಪಿನಲ್ಲಿರುತ್ತದೆ. ಪ್ರತಿ ದಿನ ಕುಡಿಯುವ ಹಾಲಿನಲ್ಲಿ ಇರುವ ಕ್ಯಾಲ್ಸಿಯಂಗಿಂತ 4 ರಷ್ಟು ಹೆಚ್ಚು ಕ್ಯಾಲ್ಸಿಯಂ ನುಗ್ಗೆ ಸೊಪ್ಪಿನಲ್ಲಿರುತ್ತದೆ. ಹಾಗು ಪಾಲಕ್ ಸೊಪ್ಪಿಗಿಂತ 6 ರಷ್ಟು ಕಬ್ಬಿಣದ ಅಂಶ, ಮೊಟ್ಟೆಯ ಬಿಳಿ ಭಾಗಕ್ಕಿಂತ 2 ರಷ್ಟು ಹೆಚ್ಚು ಪ್ರೊಟೀನ್, ಬಾಳೆ ಹಣ್ಣಿಗಿಂತ 3 ರಷ್ಟು ಪೊಟ್ಯಾಷಿಯಂ ಹೀಗೆ ಎಲ್ಲ ತರಹದ ಜೀವಸತ್ವಗಳೂ ಈ ನುಗ್ಗೆ ಸೊಪ್ಪಿನಲ್ಲಿ ದೊರೆಯುತ್ತದೆ. ಆದ್ದರಿಂದ ಇದರ ಸೇವನೆ ತುಂಬಾ ಮುಖ್ಯವಾಗಿದೆ. ಇದು ಅಧಿಕ ಪೋಷಕಾಂಶಗಳ ದೊಡ್ಡ ಆಗರವಾಗಿದೆ. ನುಗ್ಗೆ ಮರದ ಸೊಪ್ಪು, ಹೂವು, ಕಾಯಿ ಹೀಗೆ ಪ್ರತಿಯೊಂದು ಭಾಗವೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗಿದೆ. ಇದನ್ನು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ದೇಹವು ಆರೋಗ್ಯದಿಂದಿರುತ್ತದೆ. ನುಗ್ಗೆ ಸೊಪ್ಪು ಅನೇಕ ರೋಗಗಳ ನಿವಾರಕವಾಗಿದೆ.

ನುಗ್ಗೆ ಸೊಪ್ಪು ಮಧುಮೇಹ ನಿಯಂತ್ರಕವಾಗಿದೆ

ಈಗಿನ ದಿನಗಳಲ್ಲಿ ಮಧುಮೇಹ ಖಾಯಿಲೆಯುನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಕಾರಣ ಅಧಿಕ ಸಕ್ಕರೆ ಅಂಶಗಳನ್ನು ಹೊಂದಿರುವ ಪದಾರ್ಥಗಳ ಸೇವನೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ. ನೊಗ್ಗೆಸೂಪ್ಪು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಾವು ನುಗ್ಗೆಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ನುಗ್ಗೆ ಸೊಪ್ಪು ಸಕ್ಕರೆ ಅಂಶವನ್ನು ಹೊಂದಿರದೆ ಇರುವುದು ತುಂಬಾ ಉಪಯುಕ್ತವಾಗಿದೆ.

ಅಧಿಕ ರಕ್ತದೊತ್ತಡದ ನಿವಾರಣೆಗೆ ನುಗ್ಗೆಸೊಪ್ಪು

ಅಧಿಕ ರಕ್ತದೊತ್ತಡವೆಂದರೆ ಹೈ ಬಿಪಿ. ಇದು ಹೃದಯಾಘಾತಕ್ಕೆ ಮೂಲ ಕಾರಣವಾಗಿದೆ. ನುಗ್ಗೆ ಸೊಪ್ಪು ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಆದ್ದರಿಂದ ನಾವು ನುಗ್ಗೆ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿಡುವುದು ಉತ್ತಮ.

ದೇಹದ ತೂಕ ಇಳಿಸಲು ನುಗ್ಗೆಸೊಪ್ಪು ಸಹಾಯಕವಾಗಿದೆ

ಈಗೀನ ಕಾಲದಲ್ಲಿ ಸ್ಥೂಲ ಕಾಯ ಹೊಂದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಜಂಕ್ ಫುಡ್ ಗಳ ಬಳಕೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಅಂಶ ಹೆಚ್ಚಾಗಿ, ಇದು ಅನೇಕ ರೋಗಗಳಿಗೆ ಅಹ್ವಾನ ನೀಡುತ್ತದೆ. ಆದ್ದರಿಂದ ನುಗ್ಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದಲ್ಲಿ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನುಗ್ಗೆ ಸೊಪ್ಪನ್ನು ನಾವು ಸಾಂಬಾರ್, ಸೂಪ್, ಪಲ್ಯ ಅಥವಾ ಜ್ಯೂಸು ಮಾಡಿಕೊಂಡು ಸೇವಿಸಬಹುದು.

ಮೂತ್ರದಲ್ಲಿನ ಕಲ್ಲು ನಿವಾರಣೆಗೆ ನುಗ್ಗೆ ಸೊಪ್ಪು ಸಹಕಾರಿಯಾಗಿದೆ

ನುಗ್ಗೆ ಸೊಪ್ಪನ್ನು(ಬೇಕಾದಲ್ಲಿ ಸ್ವಲ್ಪ ಕ್ಯಾರೆಟ್ ಸೇರಿಸಿ) ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಇದು ಮೂತ್ರದಲ್ಲಿನ ಕಲ್ಲು ನಿವಾರಣೆಗೆ ಸಹಾಯಕವಾಗುತ್ತದೆ.

ನುಗ್ಗೆಸೊಪ್ಪು ರಕ್ತಹೀನತೆಯನ್ನು ನಿವಾರಿಸುತ್ತದೆ

ನುಗ್ಗೆ ಸೊಪ್ಪು ಪಾಲಕ್ ಸೊಪ್ಪಿಗಿಂತಲೂ 6 ರಷ್ಟು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ, ರಾತ್ರೆ ಮಲಗುವ ಮೊದಲು ಕುಡಿಯುವುದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ.

ಕೂದಲಿನ ಆರೋಗ್ಯಕ್ಕೂ ನುಗ್ಗೆಸೊಪ್ಪು ಉಪಯುಕ್ತ

ನುಗ್ಗೆ ಸೊಪ್ಪಿನ ಎಲೆಗಳನ್ನ ನೀರಿನಲ್ಲಿ ಹಾಕಿ ಕಿವುಚಿ, ಆ ನೀರನ್ನು ತಲೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ, ಕೂದಲಿನ ಸಮಸ್ಯೆ ದೂರವಾಗಿ ಆರೋಗ್ಯಕರ ಕೊಡಲು ನಮ್ಮದಾಗುತ್ತದೆ.

ಹೃದಯ ಸಮಸ್ಯೆಗೆ ನುಗ್ಗೆಸೊಪ್ಪಿನಿಂದ ಪರಿಹಾರ

ನುಗ್ಗೆ ಸೊಪ್ಪು ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ರಕ್ತ ನಾಳವು ಬ್ಲಾಕ್ ಆಗುವುದನ್ನು ಇದು ತಡೆಯುತ್ತದೆ. ಆದ್ದರಿಂದ ನಾವು ನುಗ್ಗೆ ಗಿಡದ ಹೂವನ್ನು ಅಥವಾ ಎಲೆಯನ್ನು ವಾರಕ್ಕೊಮ್ಮೆಯಾದರೂ ಪಲ್ಯ, ಸಾಂಬಾರ್ ಅಥವಾ ಇನ್ನಿತರ ಯಾವುದೇ ಖಾದ್ಯಗಳನ್ನು ತಯಾರಿಸಿಕೊಂಡು ಸೇವಿಸುವುದರಿಂದ ಹೃದಯ ರೋಗದ ಸಮಸ್ಯೆಯಿಂದ ದೂರವಿರಬಹುದು.

ಮೂಳೆಗಳ ಆರೋಗ್ಯಕ್ಕೆ ನುಗ್ಗೆಸೊಪ್ಪು ಸಹಕಾರಿಯಾಗಿದೆ

ನುಗ್ಗೆ ಸೊಪ್ಪು ಹಾಲಿಗಿಂತ 4 ರಷ್ಟು ಅಧಿಕ ಕ್ಯಾಲ್ಸಿಯಂ ನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ನುಗ್ಗೆ ಸೊಪ್ಪಿನ ರಸ ತೆಗೆದು, ಅದಕ್ಕೆ ಹಾಲು ಸೇರಿಸಿ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. (ಒಂದು ಲೋಟ ಹಾಲಿಗೆ ೧ ರಿಂದ ೨ ಚಮಚ ರಸ ಸಾಕಾಗುತ್ತದೆ).

ಭೇದಿ ಕಡಿಮೆ ಮಾಡಲು ನುಗ್ಗೆ ಸೊಪ್ಪು ಉಪಯುಕ್ತ

ನುಗ್ಗೆ ಸೊಪ್ಪನ್ನು ನುಣುಪಾಗಿ ಅರೆದು, ಅದಕ್ಕೆ ಜೇನುತುಪ್ಪ ಮತ್ತು ಕಾಯಿ ಹಾಲು ಸೇರಿಸಿ ದಿನಕ್ಕೆ 3 ಹೊತ್ತು ನಿಯಮಿತವಾಗಿ ಕುಡಿಯುವುದರಿಂದ ಭೇದಿ ಹತೋಟಿಗೆ ಬರುತ್ತದೆ. (ಇದರ ಅತಿಯಾದ ಸೇವನೆಯಿಂದ ಭೇದಿ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ)

ನೊಗ್ಗೆ ಸೊಪ್ಪು ಊತ ನಿವಾರಣೆಗೆ ಸಹಕಾರಿಯಾಗಿದೆ

ಊತ ನಿವಾರಣೆಗೆ ನುಗ್ಗೆ ಸೊಪ್ಪಿನ ಎಣ್ಣೆಯನ್ನು ತಯಾರಿಸಿಕೊಂಡು, ಊತದ ಭಾಗಕ್ಕೆ ಇಳಿಮುಖವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ಊತ ಇಳಿಯುತ್ತದೆ. ಹಾಗು ಒಂದು ಬಟ್ಟೆಯಲ್ಲಿ ನುಗ್ಗೆ ಸೊಪ್ಪನ್ನು ಹಾಕಿ ಗಂಟು ಕಟ್ಟಿಕೊಂಡು ಊತವಿರುವ ಜಾಗಕ್ಕೆ ಇದರಿಂದ ಬಿಸಿ ಶಾಖ ಕೊಡುವುದರಿಂದಲೂ ಕೂಡ ಊತ ಕಡಿಮ್ಯಾಗುತ್ತದೆ.

ನುಗ್ಗೆ ಸೊಪ್ಪಿನಿಂದ ತಲೆ ನೋವಿಗೆ ಪರಿಹಾರ

ನುಗ್ಗೆ ಸೊಪ್ಪು ಮತ್ತು ಅದರ ಹೂವುಗಳನ್ನು ಸೇರಿಸಿ ತಲೆಗೆ ಹಾಕಿ ಉಜ್ಜುವುದರಿಂದ ಮತ್ತು, ನುಗ್ಗೆ ಸೊಪ್ಪಿನ ರಸದಲ್ಲಿ ಕಾಳು ಮೆಣಸನ್ನು ಅರೆದು, ತಲೆಗೆ ತೆಳ್ಳಗೆ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ಕಣ್ಣಿನ ಆರೋಗ್ಯಕ್ಕೆ ನುಗ್ಗೆಸೊಪ್ಪು ಸಹಕಾರಿ

ಮನುಷ್ಯನಲ್ಲಿ ಮುಖ್ಯವಾದ ಅಂಗಗಳಲ್ಲಿ ಕಣ್ಣೂ ಒಂದು ಭಾಗ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಹಿಂದಿನ ಕಾಲದಲ್ಲಿ ವಯಸ್ಸಾದವರು ಮಾತ್ರ ದ್ರಷ್ಟಿ ದೋಷದಿಂದ ಬಳಲುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ದ್ರಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಅನೇಕ ಪೋಷಕಾಂಶಗಳ ಕೊರತೆ ಅಥವಾ ಇನ್ನಿತರ ಕಾರಣಗಳಿರಬಹುದು. ಕಣ್ಣಿನ ಆರೋಗ್ಯಕ್ಕೆ “A” ಜೀವಸತ್ವ ಮುಖ್ಯವಾಗಿದೆ. ನುಗ್ಗೆಸೊಪ್ಪು ಕ್ಯಾರೆಟಿಗಿಂತಲೂ 4 ರಷ್ಟು ಅಧಿಕ “A” ಜೀವಸತ್ವವನ್ನು ಹೊಂದಿದೆ. ಆದ್ದರಿಂದ ಮನೆಯಲ್ಲಿ ನುಗ್ಗೆಸೊಪ್ಪಿನ ಬಳಕೆಯನ್ನು ಹೆಚ್ಚಿಸಿದ್ದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನುಗ್ಗೆ ಸೊಪ್ಪಿನಿಂದ ಜಂತು ಹುಳುಗಳ ನಿವಾರಣೆ

ಜಂತು ಹುಳುಗಳ ನಿವಾರಣೆಗೆ ನಾವು ಆರು ತಿಂಗಳಿಗೊಮ್ಮೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅದರ ಬದಲು ನುಗ್ಗೆ ಕಾಯಿಯನ್ನು ನಿಯಮಿತವಾಗಿ ಊಟದಲ್ಲಿ ಬಳಸುವುದರಿಂದ ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ನಿಯಂತ್ರಿಸಬಹುದು.

ಮೊಡವೆಗಳ ನಿವಾರಣೆಗೆ ನುಗ್ಗೆಸೊಪ್ಪು

ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ.

ಬಾಣಂತಿಯರಲ್ಲಿ ಎದೆ ಹಾಲನ್ನು ಹೆಚ್ಚಿಸಲು ನುಗ್ಗೆ ಸೊಪ್ಪು ಸಹಾಯಕವಾಗಿದೆ

ನುಗ್ಗೆ ಸೊಪ್ಪನ್ನು ಬಳಸುವುದರಿಂದ ತುಂಬಾ ಪ್ರಯೋಜನವಿದೆ. ಅದರಲ್ಲಿನ ಅಧಿಕ ಪೋಷಕಾಂಶವು ತಾಯಿಯಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗು ಗರ್ಭಿಣಿಯರ ಆರೋಗ್ಯಕ್ಕೂ ಸಹಕಾರಿಯಾಗಿರುವುದರ ಜೊತೆಗೆ ಹುಟ್ಟುವ ಮಗುವಿನ ಅರೋಗ್ಯ ಕೂಡ ಚೆನ್ನಾಗಿರುತ್ತದೆ.

ನುಗ್ಗೆ ಸೊಪ್ಪು ತಲೆ ಸುತ್ತುವಿಕೆಯನ್ನು ನಿವಾರಿಸುತ್ತದೆ

ನುಗ್ಗೆ ಸೊಪ್ಪನ್ನು ಬೇಯಿಸಿ, ಅದನ್ನು ಸೋಸಿಕೊಂಡು, ಆ ನೀರಿಗೆ ನಿಂಬೆ ರಸ ಸೇರಿಸಿ, ಪ್ರತಿ ದಿನ ಒಂದು ಲೋಟದಂತೆ ಒಂದು ವಾರ ಸೇವಿಸುವುದರಿಂದ ತಲೆ ಸುತ್ತುವಿಕೆ ಕಡಿಮೆಯಾಗುತ್ತದೆ.

ಕ್ಯಾನ್ಸರ್ ನ್ನು ಹತೋಟಿಯಲ್ಲಿಡಲು ನುಗ್ಗೆಸೊಪ್ಪು ಸಹಕಾರಿಯಾಗಿದೆ

ಕ್ಯಾನ್ಸರ್ ಒಂದು ಗುಣಪಡಿಸಲಾಗ ಒಂದು ಕೆಟ್ಟ ಖಾಯಿಲೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಒಬ್ಬರಿಗೆ ಒಮ್ಮೆ ಕ್ಯಾನ್ಸರ್ ಬಂದರೆ, ಎಷ್ಟೋ ಬಾರಿ ಕ್ಯಾನ್ಸರ್ ಕಣಗಳನ್ನ ವೈದ್ಯರಿಂದ ಶಾಶ್ವತವಾಗಿ ತೆಗೆಸಲು ಸಾಧ್ಯವಾಗುವುದಿಲ್ಲ. ನುಗ್ಗೆಸೊಪ್ಪಿನಲ್ಲಿ ಆಯಂಟಿ ಓಕ್ಸಿಡೆಂಟ್ ಗಳು ಮತ್ತು ಅಧಿಕ ಪೋಷಕಾಂಶಗಳಿರುತ್ತವೆ. ಇವುಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾದ ಪ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ, ಕ್ಯಾನ್ಸರ್ ಕೋಶಗಳನ್ನು ಕಡಿಮೆ ಮಾಡುತ್ತವೆ.

ಲೈಂಗಿಕ ಕ್ರಿಯಾ ಶಕ್ತಿ ಹೆಚ್ಚಿಸಲು ನುಗ್ಗೆಸೊಪ್ಪಿನ ಬಳಕೆ

ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನುಗ್ಗೆ ಸೊಪ್ಪು ಅಥವಾ ಅದರ ಹೂವುಗಳು ಕೂಡ ಸಹಾಯಕವಾಗಿವೆ. ನುಗ್ಗೆ ಹೂವುಗಳನ್ನು ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ, ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚುತ್ತದೆ ಹಾಗು ವೀರ್ಯಾಣುಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ.


Share this with your friends...

Leave a Comment

Your email address will not be published. Required fields are marked *