ಆಡುಸೋಗೆಯ ಔಷಧಿ ಗುಣಗಳು (Justicia Adhotoda)

Share this with your friends...

ಆಡುಸೋಗೆ ಎಂಬುದು ಒಂದು ಹಿತ್ತಲ ಗಿಡವಾಗಿದೆ. ಆಡುಸೋಗೆ ಗಿಡವು ಭಾರತದ ಮಲೆನಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಈ ಗಿಡವು ತೋಟದ ಬೇಲಿಗಳಲ್ಲಿ, ಮನೆಯ ಹಿತ್ತಲ ಬೇಲಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆಡುಸೋಗೆ ಗಿಡವು ಉತ್ತಮ ಔಷಧೀಯ ಗಿಡಮೂಲಿಕೆಯಾಗಿದೆ. ಎಷ್ಟೋ ವರ್ಷಗಳಿಂದ ಆಡುಸೋಗೆಯು ಔಷಧಿ ಪದ್ಧತಿಯಲ್ಲಿದೆ. ಈ ಗಿಡವನ್ನು ಆಡುಸೋಗೆ, ಅಡಸಾಲ, ಮತ್ತು ಆಡು ಮುಟ್ಟದ ಗಿಡ ಎಂದೆಲ್ಲ ಕರೆಯುತ್ತಾರೆ.

ಆಡುಸೋಗೆ ಗಿಡದ ಪ್ರತಿ ಭಾಗವೂ ಎಲೆ, ಬೇರು, ತೊಗಟೆ, ಹೂ ಕೂಡ ಔಷಧೀಯ ಗುಣವನ್ನು ಹೊಂದಿವೆ. ಈ ಗಿಡವನ್ನು ಆಡು ಮುಟ್ಟದ ಗಿಡ ಎಂದು ಕರೆಯಲು ಕಾರಣ ಆಡುಗಳು ಈ ಗಿಡವನ್ನು ತಿನ್ನುವುದಿಲ್ಲ. ಈ ಗಿಡವು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಆಡುಸೋಗೆ ಗಿಡವು ಮುಖ್ಯವಾಗಿ ಅಸ್ತಮಾವನ್ನು ಕಡಿಮೆಮಾಡುವಲ್ಲಿ ಸಹಕಾರಿಯಾಗಿ. ಹಾಗೂ ಇದು ದೇಹದಲ್ಲಿರುವ ಮಾರಕವಾದ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಇದರ ವೈಜ್ಞಾನಿಕ ಹೆಸರು ಆಡತೊಡ ಝೆಯ್ಲಾನಿಕಾ(Adhatoda Zeylanica). ಇದರ ಹೂಗಳು ತಿಳಿ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ ಹಾಗೂ ಇದು ಗೊಂಚಲು ಹೂ ಬಿಡುತ್ತದೆ. ಕಾಯಿಗಳು ಚಪ್ಪಟೆಯಾಗಿರುತ್ತವೆ. ಇದರ ಕಾಂಡ ಹಸಿರು ಬಣ್ಣದಾಗಿರುತ್ತದೆ. ಇದಕ್ಕೆ ಮಾವಿನ ಎಲೆಗಳನ್ನು ಹೋಲುವ ಎಲೆಗಳಿರುತ್ತವೆ.

ಕೆಮ್ಮು, ನೆಗಡಿ, ಜ್ವರಕ್ಕೆ ಆಡುಸೋಗೆ

ವಾತಾವರಣದಲ್ಲಿ ಬದಲಾವಣೆ ಆದ ಹಾಗೆ ಆರೋಗ್ಯದಲ್ಲಿ ಬದಲಾವಣೆ ಆಗತ್ತದೆ. ಒಣಗಿಸಿದ ಆಡುಸೋಗೆಯ ಎಲೆ, ಅಮೃತಬಳ್ಳಿ, ಶುಂಠಿ, ಜೇಷ್ಠಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ 2 ಲೋಟ ನೀರು ಹಾಕಿ, ಅದು ಒಂದು ಲೋಟ ಆಗುವ ವರೆಗೂ ಕುದಿಸಿ, ಕಷಾಯ ಮಾಡಿಕೊಂಡು, ಅದಕ್ಕೆ 2 ಚಮಚ ಜೇನು ತುಪ್ಪ ಸೇರಿಸಿ, ದಿನಕ್ಕೆ ಮೂರು ಹೊತ್ತು ಕುಡಿಯುವುದರಿಂದ ಕೆಮ್ಮು, ನೆಗಡಿ, ಜ್ವರ ಕಡಿಮೆಯಾಗುತ್ತದೆ.

ಸಣ್ಣ ಮಕ್ಕಳಿಗೆ ಜ್ವರ ಬಂದಾಗ ಆಡುಸೋಗೆಯ ಉಪಯೋಗ

5 ವರ್ಷದ ಒಳಗಿನ ಮಕ್ಕಳಿಗೆ ಜ್ವರ ಬಂದಾಗ, ಆಡುಸೋಗೆ ಎಲೆಯನ್ನು ತೆಗೆದುಕೊಂಡು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ, ಮಕ್ಕಳ ತಲೆಗೆ ಹಾಕಿ ಬಟ್ಟೆಯಿಂದ ಕಟ್ಟಿ ಮಲಗಿಸುವುದರಿಂದ ಜ್ವರ ಕಡಿಮೆಯಾಗುತ್ತದೆ.

ಆಡುಸೋಗೆ ರಕ್ತ ಶುದ್ಧೀಕರಿಸುವ ಗುಣವನ್ನು ಹೊಂದಿದೆಆಡುಸೋಗೆಯ

ಹೂವು ಅಥವಾ ಎಲೆಯ ಕಷಾಯವನ್ನು ಮಾಡಿ, 45 ದಿನಗಳ ಕಾಲ ಕುಡಿಯುವುದರಿಂದ, ದೇಹದಲ್ಲಿನ ರಕ್ತ ಶುದ್ದೀಕರಿಸಲ್ಪಡುತ್ತದೆ ಜೊತೆಗೆ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

ಭೇದಿ ನಿಯಂತ್ರಣಕ್ಕೆ ಆಡುಸೋಗೆ

ಭೇದಿಯಾದಾಗ ಆಡುಸೋಗೆಯ ಎಲೆಗಳನ್ನ ಜ್ಯೂಸು ಮಾಡಿಕೊಂಡು, 2 ಚಮಚ ಕುಡಿಯುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ.

ಅಂಗೈ ಮತ್ತು ಅಂಗಾಲುಗಳ ಉರಿಯನ್ನು ಆಡುಸೋಗೆ ಶಮನ ಮಾಡುತ್ತದೆ

ಕೆಲವೊಮ್ಮೆ ದೇಹದ ಉಷ್ಣತೆಯಿಂದ ಮತ್ತು ಕೆಲಸದ ಒತ್ತಡದಿಂದ ಅಂಗಾಲು ಮತ್ತು ಅಂಗೈಗಳಲ್ಲಿ ಉರಿಯ ಅನುಭವವಾಗುತ್ತದೆ, ಆಗ ಆಡುಸೋಗೆ ಎಲೆಯ ಕಷಾಯವನ್ನು ಮಾಡಿಕೊಂಡು, ಅದು ಉಗುರುಬೆಚ್ಚಗಾದ ಬಳಿಕ ಅಂಗಾಲು ಮತ್ತು ಅಂಗೈಯ್ಯನ್ನು 15-20 ನಿಮಿಷಗಳ ಕಾಲ ನೆನೆಸಿಟ್ಟುಕೊಂಡರೆ ಉರಿಯು ಕಡಿಮೆಯಾಗುತ್ತದೆ.

ವಸಡುಗಳ ರಕ್ತಸ್ರಾವಕ್ಕೆ ಆಡುಸೋಗೆ ಮನೆಮದ್ದು

ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ಆಡುಸೋಗೆಯ ಎಲೆಯನ್ನು ಚೆನ್ನಾಗಿ ಜಜ್ಜಿ, ಆ ಮಿಶ್ರಣವನ್ನ ವಸಡುಗಳಲ್ಲಿ ಇಟ್ಟುಕೊಳ್ಳುವುದರಿಂದ ರಕ್ತಸ್ರಾವ ನಿಯಂತ್ರಣವಾಗುತ್ತದೆ.

ಮೂತ್ರದಲ್ಲಿ ರಕ್ತಸ್ರಾವ ತಡೆಯಲು ಆಡುಸೋಗೆಯು ಉಪಯುಕ್ತ

ಆಡುಸೋಗೆಯ ಸೊಪ್ಪು, ಕೊತ್ತಂಬರಿ ಮತ್ತು ಒಣ ದ್ರಾಕ್ಷಿ ಇವುಗಳನ್ನು ಚೆನ್ನಾಗಿ ನೀರಿನಲ್ಲಿ ಕಿವುಚಿ, ಆ ನೀರನ್ನು ಪ್ರತಿದಿನ 3 ಹೊತ್ತು ಕುಡಿಯುವುದರಿಂದ ಮೂತ್ರದಲ್ಲಿನ ರಕ್ತಸ್ರಾವ ಕಡಿಮೆಯಾಗುತ್ತದೆ. ಅಥವಾ ಆಡುಸೋಗೆಯ ಬೇರಿನ ಕಷಾಯ ಮಾಡಿ ಕುಡಿಯುವುದರಿಂದಲೂ ಮೂತ್ರದಲ್ಲಿನ ರಕ್ತಸ್ರಾವ ಕಡಿಮೆಯಾಗುತ್ತದೆ.

ರಕ್ತ ಭೇದಿಯ ನಿಯಂತ್ರಣದಲ್ಲಿ ಆಡುಸೋಗೆ

ಆಡುಸೋಗೆಯ ಎಲೆಯ ರಸವನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ, 2 ಹೊತ್ತುಗಳಂತೆ 1 ವಾರದ ವರೆಗೆ ಸೇವಿಸುವುದರಿಂದ ರಕ್ತಭೇದಿಯು ನಿಯಂತ್ರಣಕ್ಕೆ ಬರುತ್ತದೆ.

ಉರಿಯೂತ ಕಡಿಮೆಮಾಡಲು ಆಡುಸೋಗೆ ಸಹಕಾರಿ

ಸಂದಿ ನೋವು ಅಥವಾ ದೇಹದ ಯಾವುದೇ ಭಾಗದಲ್ಲಿ, ಉರಿಯೂತವಾದಾಗ ಆಡುಸೋಗೆಯ ಎಲೆಯನ್ನು ತೆಗೆದುಕೊಂಡು, ಎಳ್ಳೆಣ್ಣೆಯಲ್ಲಿ ಹಾಕಿ, ಕುದಿಸಿ, ನಂತರ ಆ ಎಣ್ಣೆಯನ್ನು, ನೋವಿರುವ ಜಾಗಕ್ಕೆ ಇಳಿಮುಖವಾಗಿ ಹಚ್ಚುವುದರಿಂದ ಊತಗಳು ಕಡಿಮೆಯಾಗುತ್ತವೆ.

ದಮ್ಮು ಅಥವಾ ಅಸ್ತಮಾ ಕಡಿಮೆ ಮಾಡುವಲ್ಲಿ ಆಡುಸೋಗೆಯು ಸಹಕಾರಿ

ಕೆಲವರಿಗೆ ತಂಪು ವಾತಾವರಣದಲ್ಲಿ ಅಸ್ತಮಾ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ, ಆಡುಸೋಗೆಯ ಎಲೆ, ಜೇಷ್ಠ ಮಧು, ಹಿಪ್ಪಲಿ ಇವುಗಳನ್ನು ಚೆನ್ನಾಗಿ ಅರೆದು ಕಷಾಯ ಮಾಡಿ, ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ದಿನಕ್ಕೆ 3 ಹೊತ್ತು ಕುಡಿಯುವುದರಿಂದ ದಮ್ಮು ನಿಯಂತ್ರಣಕ್ಕೆ ಬರುತ್ತದೆ.

ಸಣ್ಣಮಕ್ಕಳಲ್ಲಿ ಗೂರುವಿಕೆಯ ನಿಯಂತ್ರಣ ಆಡುಸೋಗೆ ಇಂದ ಸಾಧ್ಯ

ಆಡುಸೋಗೆಯ ಎಲೆಯ ರಸವನ್ನು ಸ್ವಲ್ಪ ತೆಗೆದುಕೊಂಡು, ಅದಕ್ಕೆ ಸಮ ಭಾಗದಷ್ಟು ಕಲ್ಲುಸಕ್ಕರೆಯ ಪುಡಿಯನ್ನು ಸೇರಿಸಿ, ಮಕ್ಕಳಿಗೆ ತಿನ್ನಲು ಕೊಡುವುದರಿಂದ ಗೂರುವಿಕೆ ಕಡಿಮೆಯಾಗುತ್ತದೆ. (ಚಿಕ್ಕ ಮಕ್ಕಳಾದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಪಯೋಗಿಸುವುದು ಸೂಕ್ತ)


Share this with your friends...

Leave a Comment

Your email address will not be published. Required fields are marked *